ಹುಬ್ಬಳ್ಳಿ ದಾಂಧಲೆ ಪ್ರಕರಣ: ಸ್ಥಳೀಯ ಧರ್ಮ ಗುರು ವಸೀಮ್ ಪಠಾಣ್ ಪೊಲೀಸ್ ವಶಕ್ಕೆ
ಹುಬ್ಬಳ್ಳಿ, ಎ.21: ಹಳೇ ಹುಬ್ಬಳ್ಳಿಯಲ್ಲಿ ನಡೆದ ದಾಂಧಲೆ ಪ್ರಕರಣಕ್ಕೆ ಸಂಬಂಧಿಸಿ ಸ್ಥಳೀಯ ಧರ್ಮ ಗುರು ಒಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಹಿಂಸಾಚಾರಕ್ಕೆ ಪ್ರಚೋದನೆ ಹಾಗೂ ಭಾಗಿಯಾದ ಆರೋಪದಲ್ಲಿ ಸ್ಥಳೀಯ ಧರ್ಮ ಗುರು ವಸೀಮ್ ಪಠಾಣ್ ರನ್ನು ಹಳೇ ಹುಬ್ಬಳ್ಳಿ ಪೊಲೀಸರು ವಶಕ್ಕೆ ಪಡೆದು ಠಾಣಗೆ ಕರೆ ತಂದಿದ್ದಾರೆ ಎಂದು ತಿಳಿದುಬಂದಿದೆ.
ಈ ನಡುವೆ ವಿಡಿಯೋ ಬಿಡುಗಡೆ ಮಾಡಿದ್ದ ಧರ್ಮ ಗುರು, ''ಪೊಲೀಸರೇ ಹೇಳಿದ್ದಕ್ಕೆ ವಾಹನದ ಮೇಲೆ ಹತ್ತಿ ನಿಂತು ಶಾಂತಿ ಕಾಪಾಡಲು ಹೇಳಿದ್ದೇನೆ ಗಲಭೆಗೆ ಸಂಬಂಧಿಸಿದ ವಿಡಿಯೋ ಪರಿಶೀಲಿಸಿ, ನಾನು ದ್ವೇಷ, ಪ್ರಚೋದನೆಯ ಒಂದೇ ಒಂದು ಮಾತನಾಡಿಲ್ಲ" ಎಂದು ಹೇಳಿಕೆ ನೀಡಿದ್ದರು.
ಆರೋಪಿ ಅಭಿಷೇಕ್ ಹಿರೇಮಠ ಎಂಬಾತ ಸಾಮಾಜಿಕ ಮಾಧ್ಯಮ ವಾಟ್ಸ್ ಆ್ಯಪ್ ನಲ್ಲಿ ಹಾಕಿದ್ದ ವಿವಾದಾತ್ಮಕ ಸ್ಟೇಟಸ್ ಕಾರಣ ಎಪ್ರಿಲ್ 16ರಂದು ರಾತ್ರಿ ಹಳೇ ಹುಬ್ಬಳ್ಳಿಯಲ್ಲಿ ಹಿಂಸಾಚಾರ ನಡೆದಿತ್ತು. ಈ ವೇಳೆ ನಗರದಲ್ಲಿ ಕಲ್ಲು ತೂರಾಟ ನಡೆದಿದ್ದು, ಇನ್ ಸ್ಪೆಕ್ಟರ್ ಸೇರಿದಂತೆ 12 ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದರು. ಪ್ರಕರಣಕ್ಕೆ ಸಂಬಂಧಿಸಿ 100ಕ್ಕೂ ಅಧಿಕ ಮಂದಿಯನ್ನು ಬಂಧಿಸಲಾಗಿದೆ.