ಪೋಷಕರ ಸಮ್ಮತಿ ಇಲ್ಲದೆ ಬಾಲಕಿಯ ಜೊತೆ ಸುತ್ತಾಟ: ಆರೋಪಿಗೆ ಪಿಯುಸಿ ಪರೀಕ್ಷೆ ಬರೆಯಲು ಹೈಕೋರ್ಟ್‍ನಿಂದ ಜಾಮೀನು

Update: 2022-04-21 12:10 GMT

ಬೆಂಗಳೂರು, ಎ.21: ಪೋಕ್ಸೋ ಕಾಯ್ದೆಯಡಿ ಬಂಧನಕ್ಕೊಳಗಾಗಿದ್ದ ದ್ವಿತೀಯ ಪಿಯುಸಿ ವಿದ್ಯಾರ್ಥಿಗೆ ಪರೀಕ್ಷೆ ಬರೆಯಲು ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ.

ಎ.22ರಿಂದ ದ್ವಿತೀಯ ಪಿಯುಸಿ ಪರೀಕ್ಷೆ ಆರಂಭವಾಗುತ್ತಿದ್ದು, ನನಗೆ ಪರೀಕ್ಷೆ ಬರೆಯಲು ಜಾಮೀನು ನೀಡಬೇಕೆಂದು ಕೋರಿ ಈ ವಿದ್ಯಾರ್ಥಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಪೀಠ ಪೀಠ, ಆರೋಪಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.

ಆರೋಪಿಯು, 8ನೇ ತರಗತಿ ಓದುತ್ತಿದ್ದ ಬಾಲಕಿಯನ್ನು ಪುಸಲಾಯಿಸಿ ಪೋಷಕರ ಸಮ್ಮತಿ ಇಲ್ಲದೆ ಪ್ರೀತಿ-ಪ್ರೇಮದ ನೆಪದಲ್ಲಿ ಮನೆಯಿಂದ ಹೊರಗೆ ಕರೆದೊಯ್ದಿದ್ದ ಆರೋಪದಡಿ ನ್ಯಾಯಾಂಗ ಬಂಧನಕ್ಕೆ ಒಳಗಾಗಿದ್ದ ದ್ವಿತೀಯ ಪಿಯುಸಿ ಓದುತ್ತಿದ್ದ ವಿದ್ಯಾರ್ಥಿಗೆ ಹೈಕೋರ್ಟ್ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.

ಆರೋಪಿಯು 1 ಲಕ್ಷ ರೂ. ಬಾಂಡ್ ನೀಡಬೇಕು. ಪರೀಕ್ಷೆ ಮುಗಿದ ತಕ್ಷಣ ಮೇ 11ರ ಸಂಜೆ 6 ಗಂಟೆಗೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಸ್ವಯಂ ಶರಣಾಗಬೇಕು. ಈತನಿಗೆ ಪರೀಕ್ಷೆ ಬರೆಯಲು ಕಾಲೇಜು ಆಡಳಿತ ಮಂಡಳಿ ಅನುಮತಿ ನೀಡಬೇಕು. ಸಾಕ್ಷ್ಯನಾಶಕ್ಕೆ ಪ್ರಯತ್ನಿಸಬಾರದು ಎಂಬ ಹಲವು ಷರತ್ತುಗಳನ್ನು ವಿಧಿಸಿ ಹೈಕೋರ್ಟ್ ಪರೀಕ್ಷೆ ಬರೆಯಲು ಅನುಮತಿ ನೀಡಿದೆ.

ಅಪ್ಪ-ಅಮ್ಮ ಮನೆಯಲ್ಲಿ ಇಲ್ಲದ ವೇಳೆ ನನ್ನ ತಂಗಿಯನ್ನು ಆಕೆಯ ಇಚ್ಛೆಗೆ ವಿರುದ್ಧವಾಗಿ ಆರೋಪಿಗಳು ಮನೆಯಿಂದ ಕರೆದೊಯ್ದು ಸುತ್ತಾಡಿಕೊಂಡು ಬಂದಿದ್ದರು. ಈ ವೇಳೆ ಮನೆಯೊಳಗೆ ಬಂದ ಅವರನ್ನು ಹೊರಹೋಗುವಂತೆ ಸೂಚಿಸಿದ್ದಕ್ಕೆ ನನ್ನ ಮೇಲೆ ಹಲ್ಲೆ ಮಾಡಿದ್ದರು ಎಂದು ಸಂತ್ರಸ್ತೆಯ ಅಕ್ಕ ಇದೇ ಎ.14ರಂದು ನಗರದ ಅನ್ನಪೂರ್ಣೇಶ್ವರಿ ನಗರ ಪೊಲೀಸರಿಗೆ ದೂರು ಸಲ್ಲಿಸಿದ್ದರು. ಈ ದೂರಿನನ್ವಯ ಪೊಲೀಸರು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಇಬ್ಬರನ್ನು ಬಂಧಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News