×
Ad

ಕೆಪಿಎಸ್‍ಸಿ- 362 ಅಭ್ಯರ್ಥಿಗಳ ನೇಮಕ ಸಿಂಧು: ಕಾಯ್ದೆ ಪ್ರಶ್ನಿಸಿದ್ದ ಪಿಐಎಲ್ ಹೈಕೋರ್ಟ್‍ನಿಂದ ವಜಾ

Update: 2022-04-21 20:27 IST

ಬೆಂಗಳೂರು, ಎ.21: ಕರ್ನಾಟಕ ಲೋಕಸೇವಾ ಆಯೋಗ(ಕೆಪಿಎಸ್‍ಸಿ) 2011ನೆ ಸಾಲಿನ 362 ಗೆಜೆಟೆಡ್ ಪ್ರೊಬೇಷನರಿ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳ ನೇಮಕಾತಿ ಸಿಂಧುಗೊಳಿಸಿ ಅವರಿಗೆ ನೇಮಕಾತಿ ಆದೇಶ ನೀಡಲು ತರಲಾದ ಕಾಯ್ದೆಯನ್ನು ಪ್ರಶ್ನಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು  ಹೈಕೋರ್ಟ್ ವಜಾಗೊಳಿಸಿದೆ.

ಈ ಕುರಿತಂತೆ ಸಾಮಾಜಿಕ ಕಾರ್ಯಕರ್ತ ಆರೀಫ್ ಜಮೀಲ್ ಸಲ್ಲಿಸಿದ್ದ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಮತ್ತು ನ್ಯಾಯಮೂರ್ತಿ ಎ.ಎಸ್.ಕೃಷ್ಣಕುಮಾರ್ ಅವರಿದ್ದ ವಿಭಾಗೀಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.

ಈಗಾಗಲೇ 2011ನೆ ಸಾಲಿನ ನೇಮಕಾತಿಯನ್ನು ಹೈಕೋರ್ಟ್ ಈ ಹಿಂದೆ ರದ್ದುಪಡಿಸಿದೆ ಎಂಬ ಹಿನ್ನೆಲೆಯಲ್ಲಿ ಇಡೀ ಕಾಯ್ದೆಯನ್ನು ಅಸಾಂವಿಧಾನಿಕ ಎನ್ನಲಾಗದು. ಕಾಯ್ದೆಯಲ್ಲಿ ಯಾವ ನಿಯಮಗಳು ಅಸಾಂವಿಧಾನಿಕ ಎಂಬುದನ್ನು ಅರ್ಜಿದಾರರು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡುವಲ್ಲಿ ವಿಫಲರಾಗಿದ್ದಾರೆ ಎಂದು ಅಭಿಪ್ರಾಯಪಟ್ಟ ನ್ಯಾಯಪೀಠ, ಅರ್ಜಿ ವಜಾಗೊಳಿಸಿ ಆದೇಶಿಸಿದೆ.

ಅರ್ಜಿದಾರರ ಪರ ವಾದಿಸಿದ್ದ ವಕೀಲ ರೆಹಮತ್ ಉಲ್ಲಾ ಕೊತ್ವಾಲ್ ಅವರು, ಅಭ್ಯರ್ಥಿಗಳ ಆಯ್ಕೆಗೆ ಸಂಬಂಧಿಸಿದಂತೆ ಕೆಪಿಎಸ್‍ಸಿಯು ಕಾನೂನುಬಾಹಿರ ಚಟುವಟಿಕೆ ನಡೆಸಿರುವುದು ಸಿಐಡಿ ವರದಿಯಿಂದ ಬಹಿರಂಗವಾಗಿದೆ. ಅಲ್ಲದೆ, ಆಕ್ಷೇಪಾರ್ಹವಾದ ಕಾಯಿದೆಯನ್ನು ಕಾನೂನುಬಾಹಿರವಾಗಿ ರೂಪಿಸಲಾಗಿದೆ. ಹೀಗಾಗಿ, ಇದಕ್ಕೆ ಕಾನೂನಿನ ಮಾನ್ಯತೆ ಇಲ್ಲ ಎಂದು ವಾದಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ನೀವು ಕರ್ನಾಟಕ ಸಿವಿಲ್ ಸೇವೆಗಳ(2011ನೆ ಸಾಲಿನ ಗೆಜೆಟೆಡ್ ಪ್ರೊಬೇಷನರ್ ಆಯ್ಕೆ ಮತ್ತು ನೇಮಕಾತಿಯ ಸಿಂಧುಗೊಳಿಸುವಿಕೆ) ಮಸೂದೆಗೆ ಸಂಬಂಧಿಸಿದಂತೆ ನಿರ್ದಿಷ್ಟ ನಿಬಂಧನೆಯನ್ನು ಪ್ರಶ್ನಿಸಿಲ್ಲ. ಬದಲಿಗೆ ಇಡೀ ಕಾಯಿದೆಯ ಸಿಂಧುತ್ವ ಪ್ರಶ್ನೆ ಮಾಡಿದ್ದೀರಿ ಎಂದರು. ಆಗ ವಕೀಲ ಕೊತ್ವಾಲ್ ಅವರು, ಪ್ರತ್ಯುತ್ತರ ಮನವಿ ಸಲ್ಲಿಸಲಾಗುವುದು ಎಂದು ಹೇಳಿದರಾದರೂ ಅದನ್ನು ನ್ಯಾಯಾಲಯ ಪುರಸ್ಕರಿಸಲಿಲ್ಲ. 

ವಿವಾದವೇನು?: 2011ರಲ್ಲಿ ಕೆಪಿಎಸ್‍ಸಿ 362 ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳಿಗೆ ಪರೀಕ್ಷೆ ನಡೆಸಿ ಸಂಭಾವ್ಯ ಪಟ್ಟಿ ಪ್ರಕಟಿಸಿದಾಗ ಡಾ. ಎಚ್.ಪಿ.ಎಸ್. ಮೈತ್ರಿಯಾ ನೇಮಕದಲ್ಲಿ ಅವ್ಯವಹಾರ ಆರೋಪ ಮಾಡಿದ್ದರು. ಬಳಿಕ ಈ ಪ್ರಕರಣ ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ ತನಕ ಹೋಗಿತ್ತು.

2014ರಲ್ಲಿ ಸರಕಾರ ಈ ಕುರಿತು ಸಿಐಡಿ ತನಿಖೆಗೆ ಆದೇಶ ನೀಡಿತ್ತು. ಆ.8ರಂದು ಸರಕಾರ ಆಯ್ಕೆಪಟ್ಟಿಯನ್ನು ವಾಪಸ್ ಪಡೆದಿತ್ತು. 2016ರಲ್ಲಿ ಕರ್ನಾಟಕ ಆಡಳಿತಾತ್ಮಕ ನ್ಯಾಯ ಮಂಡಳಿ(ಕೆಎಟಿ) ಸರಕಾರದ ಆದೇಶ ರದ್ದು ಮಾಡಿ ಪಟ್ಟಿ ಊರ್ಜಿತಗೊಳಿಸಿತ್ತು. ಇದನ್ನು ಸುಪ್ರೀಂಕೋರ್ಟ್ ಸಹ ಮಾನ್ಯ ಮಾಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News