×
Ad

ಬಿಜೆಪಿಗೆ ಅನುಕೂಲ ಮಾಡಿಕೊಟ್ಟದ್ದು ಇದೇ ಕುಮಾರಸ್ವಾಮಿ: ಡಾ.ಎಚ್.ಸಿ.ಮಹದೇವಪ್ಪ

Update: 2022-04-21 20:53 IST

ಬೆಂಗಳೂರು, ಎ. 22: ‘ಕರ್ನಾಟಕದಲ್ಲಿ ಕೋಮುವಾದಿ ಬಿಜೆಪಿಗರಿಗೆ ಸರಿಯಾದ ನೆಲೆಯೆ ಇರಲಿಲ್ಲ. 40ರಿಂದ 45 ಸ್ಥಾನಗಳನ್ನು ಗಳಿಸುತ್ತಿದ್ದ ಬಿಜೆಪಿಯನ್ನು 45 ರಿಂದ 75ಕ್ಕೆ ಕೊಂಡೊಯ್ದಿದ್ದು ಬಂಗಾರಪ್ಪ. ಅವರು ಕಾಲವಾದ ನಂತರದಲ್ಲಿ ಮತ್ತೆ ಎಂದಿನ ರಾಜಕೀಯ ಸ್ಥಿತ್ಯಂತರಕ್ಕೆ ಸಾಗಿದ್ದ ಬಿಜೆಪಿ ಜೊತೆಗೆ ಅಧಿಕಾರಕ್ಕಾಗಿ ಹೊಂದಾಣಿಕೆ ಮಾಡಿಕೊಂಡ ಕುಮಾರಸ್ವಾಮಿ ನೈತಿಕತೆಯನ್ನು ಮರೆತು 20-20 ಸರಕಾರದ ಷರತ್ತನ್ನು ಗಾಳಿಗೆ ತೂರಿ, ಯಡಿಯೂರಪ್ಪ ಪರವಾದ ಭಾವನಾತ್ಮಕ ಸನ್ನಿವೇಶ ಉಂಟುಮಾಡಿ ಬಿಜೆಪಿಯನ್ನು 100ರ ಗಡಿಗೆ ತಂದು ನಿಲ್ಲಿಸಿದರು' ಎಂದು ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಟೀಕಿಸಿದ್ದಾರೆ.

ಗುರುವಾರ ಈ ಸಂಬಂಧ ಪ್ರಕಟಣೆ ನೀಡಿರುವ ಅವರು, ‘ಕಾಂಗ್ರೆಸ್-ಜೆಡಿಎಸ್ ಪಕ್ಷದ ಎರಡನೆ ಅವಧಿಯ ಆಡಳಿತದಲ್ಲೂ ಸರಿಯಾಗಿ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷದ ಶಾಸಕರ ಸಂಕಷ್ಟಗಳಿಗೆ ಸ್ಪಂದಿಸದೇ ಎಲ್ಲರೂ ರೋಸಿ ಹೋಗುವಂತೆ ಮಾಡಿದ ಪರಿಣಾಮ ಮೈತ್ರಿಕೂಟದ ಎರಡೂ ಪಕ್ಷಗಳಿಂದಲೂ ಹಲವು ಶಾಸಕರು ಬಿಜೆಪಿಗೆ ಹೋದರು. ಇಲ್ಲಿಯೂ ಬಿಜೆಪಿಗೆ ಅನುಕೂಲ ಮಾಡಿಕೊಟ್ಟದ್ದು ಇದೇ ಕುಮಾರಸ್ವಾಮಿ ಎಂಬುದನ್ನು ನಾವು ಮರೆಯುವಂತಿಲ್ಲ' ಎಂದು ವಾಗ್ದಾಳಿ ನಡೆಸಿದ್ದಾರೆ.

‘ಕರ್ನಾಟಕದಲ್ಲಿ ನೆಲೆ ಇಲ್ಲದೇ ಸೊರಗಿದ್ದ ಕೋಮುವಾದಿ ಬಿಜೆಪಿಯ ಬೆಳವಣಿಗೆಗೆ ಕಾರಣವಾಗಿದ್ದು ಎರಡೇ ಸಂಗತಿಗಳು. ಒಂದು ಬಂಗಾರಪ್ಪ ಅವರ ವರ್ಚಸ್ಸು ಮತ್ತು ಪಕ್ಷಾಂತರ, ಮತ್ತೊಂದು ಎಚ್.ಡಿ.ಕುಮಾರಸ್ವಾಮಿ ಅವರ ನೈತಿಕತೆ ಇಲ್ಲದ ದ್ರೋಹದ ರಾಜಕಾರಣ. ಇನ್ನು ಸಿದ್ದರಾಮಯ್ಯ ಅವರ ವಿಷಯವಾಗಿ ಅತಿ ಎನಿಸುವಷ್ಟು ಅನಗತ್ಯ ಗೊಂದಲಗಳನ್ನು ಮೂಡಿಸುತ್ತಿದ್ದರೂ ಅವರೊಬ್ಬ ಪ್ರಾಮಾಣಿಕ ಮತ್ತು ಸಮಾಜಕ್ಕೆ ಬೇಕಾದ ಸಿದ್ಧಾಂತವನ್ನು ಹೊಂದಿರುವ ಅಪರೂಪದ ಜನ ನಾಯಕ ಮತ್ತು ಸಮರ್ಥ ಆಡಳಿತಗಾರ ಎಂಬುದರಲ್ಲಿ ಎರಡು ಮಾತಿಲ್ಲ' ಎಂದು ಮಹದೇವಪ್ಪ ತಿಳಿಸಿದ್ದಾರೆ.

‘ಈ ಮಾತನ್ನು ನಾನಷ್ಟೇ ಹೇಳುತ್ತಿಲ್ಲ. ಬಿಜೆಪಿಯ ದುರಾಡಳಿತದಿಂದ ಬೇಸತ್ತಿರುವ ಜನ ಸಾಮಾನ್ಯರು, ಬಿಜೆಪಿಯ ಬಸನಗೌಡ ಪಾಟೀಲ್ ಯತ್ನಾಳ್ ಆದಿಯಾಗಿ ಬಹಳಷ್ಟು ಮಂದಿ ಬಿಜೆಪಿ, ಆರೆಸೆಸ್ಸ್ ಮತ್ತು ಜೆಡಿಎಸ್‍ನವರೇ ತಮ್ಮ ವಲಯದಲ್ಲಿ ಮಾತನಾಡಿಕೊಳ್ಳುತ್ತಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಜನಪರ ಆಡಳಿತಗಾರರ ವ್ಯಕ್ತಿತ್ವವನ್ನು ದುರ್ಬಲಗೊಳಿಸಿದರೆ ಅದಕ್ಕೆ ನಾವು ಹೊಣೆ. ಆದಷ್ಟು ಅಪಪ್ರಚಾರಗಳ ಬಗ್ಗೆ ಎಚ್ಚರಿಕೆ ವಹಿಸಬೇಕಾದ್ದು ಈ ಹೊತ್ತಿನ ಜವಾಬ್ದಾರಿ ಆಗಿದೆ' ಎಂದು ಮಹದೇವಪ್ಪ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News