ಕೊಟ್ಟ ಭರವಸೆಗಳನ್ನು ಈಡೇರಿಸುತ್ತೇನೆ, ತಪ್ಪಿದರೆ ಜೆಡಿಎಸ್ ಪಕ್ಷವನ್ನೇ ವಿಸರ್ಜಿಸುವೆ: ಎಚ್.ಡಿ.ಕುಮಾರಸ್ವಾಮಿ

Update: 2022-04-22 14:59 GMT

ಶಿವಮೊಗ್ಗ: '30-40 ಸ್ಥಾನವನ್ನು ಈಗ ನಿಂತರೂ ಗೇಲ್ತೇವೆ. ನಮಗೆ 123 ಸ್ಥಾನದ ಗುರಿ ತಲುಪಿ, ಸ್ವತಂತ್ರವಾಗಿ ಸರ್ಕಾರ ರಚನೆಯಾಗಬೇಕು. ಅದಕ್ಕಾಗಿ ನಿವೆಲ್ಲರೂ ನಮಗೆ ಬೆಂಬಲ ಕೊಟ್ಟು, ಸಹಕರಿಸಬೇಕು. ನಾವು ಕೊಟ್ಟ ಭರವಸೆಗಳನ್ನು 5 ವರ್ಷದಲ್ಲಿ ಈಡೇರಿಸುತ್ತೇನೆ. ಒಂದು ವೇಳೆ ನಾನು ಮಾತಿಗೆ ತಪ್ಪಿದರೇ ಮತ್ತೆ ನಿಮ್ಮ ಮುಂದೆ ಬಂದು ಮತ ಕೇಳಲ್ಲ. ಜೆಡಿಎಸ್ ಪಕ್ಷವನ್ನೇ ವಿಸರ್ಜನೆ ಮಾಡ್ತೇನೆ' ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಭರವಸೆ ನೀಡಿದರು.

ಅವರು ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ತುಂಗ-ಭದ್ರಾ ಸಂಗಮ ಕ್ಷೇತ್ರ ಚಿಕ್ಕಕೂಡಲಿ ಬಳಿ ನಡೆದ ಜನತಾ ಜಲಧಾರೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಜನತಾ ಜಲಧಾರೆಯ ಉದ್ದೇಶವೇ ರೈತರ ಬದುಕು ಹಸನಾಗಿಸುವುದು. ನಾಡಿನ ನದಿಗಳಲ್ಲಿ ಸಮೃದ್ಧವಾಗಿ ನೀರಿದ್ದು, ಅದು ರೈತನ ಹೊಲಗಳಿಗೆ ಹರಿಯಬೇಕು. ಇದಕ್ಕಾಗಿ ಜಲಾಶಯ, ಕಾಲುವೆ ನಿರ್ಮಾಣ ಅಗಬೇಕು.ಹಳೆ ಕಾಲುವೆ ಪುನಶ್ಚೇತನ ಅಗಬೇಕು. ಇದಕ್ಕಾಗಿ ಐದು ವರ್ಷದ ಸರ್ಕಾರವನ್ನು ಪಡೆಯಲು ನಿಮ್ಮ ಮುಂದೆ ಬಂದಿದ್ದೇನೆ. ಈ ಭಾಗದಲ್ಲಿ ಶಾರದಾ ಪರ‍್ಯಾನಾಯ್ಕ್ ಅವರನ್ನು ಬೆಂಬಲಿಸುವ ಮೂಲಕ ಶಕ್ತಿ ನೀಡಬೇಕು. ರಾಜ್ಯದ ನೀರಾವರಿ ಯೋಜನೆಗಳಿಗೆ ನಾಲ್ಕು ಲಕ್ಷ ಕೋಟಿ ಹಣ ಬೇಕಿದೆ. ಈಗಿರುವ ಸರ್ಕಾರ ನೀರಾವರಿ ಯೋಜನೆಗೆ 8 ಸಾವಿರ ಕೋಟಿ ಖರ್ಚು ಮಾಡುತ್ತಾರೆ.

ಅದರಲ್ಲೂ ಈಗ ನೀವೆಲ್ರೂ ನೋಡ್ತಾ ಇದ್ದೀರಿ. ಕಮಿಷನ್ ಹೇಗೆ ಪಡೆಯುತ್ತಾ ಇದ್ದಾರೆ ಎಂದು. ಕಮಿಷನ್ ವಿಚಾರವಾಗಿ ಇದೇ ಜಿಲ್ಲೆಯ ಈಶ್ವರಪ್ಪ ರಾಜೀನಾಮೆ ಸಹ ಕೊಟ್ಟಿದ್ದಾರೆ. ಕಾಂಗ್ರೆಸ್ ಸರ್ಕಾರದ ಕಾಲದಲ್ಲೂ ಕಮಿಷನ್ ತೆಗೆದುಕೊಳ್ಳುತ್ತಾ ಇದ್ದರು. ಇದೀಗ ಬಿಜೆಪಿ ಸರ್ಕಾರ ಬಂದಮೇಲೆ ಅದು ಡಬ್ಬಲ್ ಅಗಿದೆ ಎಂದು ವಾಗ್ದಾಳಿ ನಡೆಸಿದರು.

ಹಿಂದಿನ ಚುನಾವಣೆ ಸಂದರ್ಭದಲ್ಲಿ ನಾನು ಸಾಲ ಮನ್ನಾ ಮಾಡುತ್ತೇನೆ ಎಂದಿದ್ದೆ. ಜನ ನಮಗೆ ಅಧಿಕಾರ ಕೊಡಲಿಲ್ಲ. ಬೇರೆಯವರ ಜೊತೆ ಸರ್ಕಾರ ಮಾಡಲಾಯಿತು. ಅದರೂ ಕೂಡ 14 ತಿಂಗಳಲ್ಲಿ 25 ಸಾವಿರ ಕೋಟಿ ಸಾಲಮನ್ನಾ ಮಾಡಿ, ಕೊಟ್ಟ ಮಾತು ಉಳಿಸಿಕೊಂಡೆ. ಶೇ.40 ಸರ್ಕಾರ ಆಗಿದ್ರೇ, 25 ಸಾವಿರ ಕೋಟಿಯಲ್ಲಿ 10 ಸಾವಿರ ಕೋಟಿ ಲೂಟಿ ಆಗುತಿತ್ತು. ರಾಜ್ಯದ ಹಣದ ಕೊರತೆಯಿಲ್ಲ, ಜನ ಅದಕ್ಕೆ ಅವಕಾಶ ಕೊಟ್ಟಿಲ್ಲ. 2006 ಕ್ಕಿಂತ ಹಿಂದೆ ನಿಮ್ಮ ಜಿಲ್ಲೆಯ ಬಿಜೆಪಿ ನಾಯಕರ ಆಸ್ತಿ ಎಷ್ಟಿತ್ತು. ಈಗ ಶಿವಮೊಗ್ಗದಲ್ಲಿ ಅವರ ಆಸ್ತಿ ಎಷ್ಟು ಅಗಿದೆ. ಕಣ್ಣಿಗೆ ಕಾಣಿಸ್ತಾ ಇದೆ. ಅದ್ರೂ ನೀವು ಅವರಿಗೆ ಮತ್ತೇ ಅಧಿಕಾರ ಕೋಡ್ತಿರಾ ಎಂದು ಬೇಸರ ವ್ಯಕ್ತಪಡಿಸಿದರು.

ಅಧಿಕಾರಕ್ಕೆ ಬಂದರೆ 6 ಸಾವಿರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಇರುವ ಶಾಲೆಗಳನ್ನು ಶಾಲೆಗಳಿಗೆ ಪೈಪೋಟಿ ನೀಡುವ ಮಟ್ಟಕ್ಕೆ ಅಭಿವೃದ್ಧಿ ಮಾಡ್ತೇವೆ. ಎಲ್‌ಕೆಜಿಯಿಂದ ಪಿಯುಸಿವರೆಗೆ ಉಚಿತ ಶಿಕ್ಷಣ ಕೋಡ್ತಿನಿ. ಪ್ರತಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ  30 ಬೆಡ್ ಆಸ್ಪತ್ರೆ ನಿರ್ಮಾಣ ಮಾಡ್ತೇವೆ. 24 ಗಂಟೆಯೂ ಆಸ್ಪತ್ರೆಯಲ್ಲಿ ಇಬ್ಬರೂ ವೈದ್ಯರಿರುವಂತೆ ಕ್ರಮ ಕೈಗೊಳ್ಳುತ್ತೇವೆ. ಪ್ರತಿ ಕುಟುಂಬಕ್ಕೆ ಉದ್ಯೋಗ, ಮಹಿಳೆಯರ ಸ್ವಾವಲಂಬನೆಗೆ ರೂಪುರೇಷೆ ಸಿದ್ಧ ಮಾಡಿದ್ದೇವೆ. ಬಡ ಕುಟುಂಬದ ವಿಧವೆಯರು, ಅಂಗವಿಕಲರು, ವೃದ್ಧರಿಗೆ ಜೀವನ ಪರ್ಯಂತ 5 ಸಾವಿರ ರೂ. ವೇತನ ಕೊಡ್ತೇವೆ. ಇದನ್ನೆಲ್ಲಾ ನಿಮ್ಮ ತೆರಿಗೆ ಹಣದಲ್ಲೇ ಮಾಡ್ತೇನೆ. ಸ್ವತಂತ್ರ ಸರ್ಕಾರ ಕೊಡಿ ಎಂದು ಮನವಿ ಮಾಡಿದರು.

2018ರಲ್ಲಿ ಶಿವಮೊಗ್ಗ ಜಿಲ್ಲೆಯ ಎಲ್ಲ ಏತ ನೀರಾವರಿಗಳಿಗೂ ಹಣ ಬಿಡುಗಡೆ ಮಾಡಿದು ನಾನು. ಆದರೆ ಇಂದಿನ ಬಿಜೆಪಿ ಸರ್ಕಾರ ಬೋರ್ಡ್ಗಳನ್ನು ಅಳವಡಿಸಿಕೊಂಡು ಹೆಸರು ಪಡೆದುಕೊಳ್ಳುತ್ತಿದೆ. ಹೊಳಲೂರು ಸೇತುವೆ ಹಣ ಮಂಜೂರು ಮಾಡಿದ್ದು ನಮ್ಮ ಸರ್ಕಾರ ಉದ್ಘಾಟನೆ ಮಾಡಿ ಕಟ್ಟಿದವರಂತೆ ಪೋಸ್ ನೀಡಿದ್ದು ಬಿಜೆಪಿಯವರು. ಒಟಿಎಸ್ ಮಾಡಿಕೊಂಡು ಸಾಲದ ಹಣವನ್ನು ಪಾವತಿಸಿದ ರೈತರಿಗೆ ಪುನರ್ ಸಾಲ ಸೌಲಭ್ಯ ನೀಡುವುದಿಲ್ಲ ಎನ್ನುವುದು ಸರಿಯಲ್ಲ ಈ ವಿಷಯವನ್ನು ಸದನದಲ್ಲಿ ಪ್ರಸ್ತಾಪಿಸಿ ರೈತರ ಪರ ನಿಲುವು ತೆಗೆದುಕೊಳ್ಳಲಾಗುವುದು. ಬೇರೆ ಶಾಸಕರಂತೆ ಶಾರದ ಪರ‍್ಯಾನಾಯ್ಕ ಹಣಗಳಿಸದೆ ಗ್ರಾಮಾಂತರದ ಜನತೆ ಪ್ರೀತಿ ವಿಶ್ವಾಸಗಳಿದ ಕಾರಣ ಗ್ರಾಮಾಂತರದಲ್ಲಿ ಜೆಡಿಎಸ್ ಶಕ್ತಿ ಕಳೆದುಕೊಂಡಿಲ್ಲ. ಅಧಿಕಾರಕ್ಕೆ ಬಂದರೆ ಸಚಿವರಾಗುತ್ತಾರೆ ಎಂದು ಭರವಸೆ ನೀಡಿದರು.

ಮಾಜಿ ಶಾಸಕಿ ಶಾರದಾ ಪರ‍್ಯಾನಾಯ್ಕ್ ಮಾತನಾಡಿ, ರಾಜ್ಯಕ್ಕೆ ಪ್ರಾದೇಶಿಕ ಪಕ್ಷಗಳ ಅವಶ್ಯಕತೆ ಇದೆ. ತುಂಗಾಭದ್ರ ಸಂಗಮದ ದೈವ ಸಂಕಲ್ಪದಿಂದ ಮುಂದಿನ ದಿನಗಳಲ್ಲಿ ಕ್ಷೇತ್ರ ಸುಭಿಕ್ಷವಾಗುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ. ರಾಜ್ಯದ ಮುಖ್ಯ ಮಂತ್ರಿ ಉತ್ತಮವಾಗಿದರೆ ರಾಜ್ಯ ಉತ್ತಮವಾಗಿರುತ್ತದೆ. ರಾಜ್ಯದ ಜನತೆ ರೈತರ ಸಾಲಮನ್ನಾವನ್ನು ಮರೆಯುವ ಮಾತೆ ಇಲ್ಲ. ಮುಂದಿನ ದಿನಗಳಲ್ಲಿ ರೈತರ ಜೊತೆಗಿರುವ ಉದ್ದೇಶದಿಂದ ಜಲದಾರೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಜಿಲ್ಲಾಧ್ಯಕ್ಷ ಎಂ.ಶ್ರೀಕಾಂತ್, ಸೋಮಿನಕೊಪ್ಪ ಕಾಂತರಾಜ್, ಎಚ್.ಟಿ.ಬಳಿಗಾರ್, ಯಡೂರು ರಾಜಾರಾಂ, ಮಣಿಶೇಖರ್, ರಾಮಕೃಷ್ಣ, ಕಡಿದಾಳ್ ಗೋಪಾಲ್, ನಾಗರಾಜ್ ಕಂಕಾರಿ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಗೀತಾಸತೀಶ್, ಎಪಿಎಂಸಿ ಸದಸ್ಯ ಸತೀಶ್, ಕುಮಾರ್‌ನಾಯ್ಕ್, ಸೀತಳ್ಳಿ ರಾಜರಾಂ, ಶಿಕಾರಿಪುರ ಬಳಿಗಾರ್, ದಾನವಾಡಿ ಗಿರೀಶ್, ಸಹ್ಯಾದ್ರಿ ಹರೀಶ್, ಜಿ.ಎನ್ ಪರುಶುರಾಮ್, ಆನವೇರಿ ಕುಬೇಂದ್ರಪ್ಪ, ಎಂ.ದಾನೇಶ್, ರಫೀಕ್ ಇತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News