ಉಷ್ಣಾಂಶ ಏರಿಕೆ, ಇಳುವರಿ ಕುಸಿತ: ಜನಸಾಮಾನ್ಯರ ಕೈಗೆಟುಕದ ನಿಂಬೆಹಣ್ಣು !
ಬೆಂಗಳೂರು: ಬೇಸಿಗೆಯಲ್ಲಿ ಅತ್ಯಧಿಕ ಬೇಡಿಕೆಯ ಹಣ್ಣು ಎನಿಸಿದ ನಿಂಬೆಹಣ್ಣಿನ ಬೆಲೆ ಕೂಡಾ ತಾಪಮಾನದಂತೆ ಏರಿಕೆಯಾಗುತ್ತಲೇ ಇದೆ. ಬೇಡಿಕೆ ಗಣನೀಯವಾಗಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಗುಣಮಟ್ಟ ಕೂಡಾ ಕುಸಿದಿದೆ.
ನಿಂಬೆಹಣ್ಣಿಗೆ ಖ್ಯಾತವಾಗಿರುವ ವಿಜಾಪುರ ಜಿಲ್ಲೆಯಲ್ಲಿ ನಾಲ್ಕು ನಿಂಬೆಹಣ್ಣಿಗೆ 20 ರೂಪಾಯಿ ದರ ಇದೆ. ಸರಾಸರಿ 1100 ನಿಂಬೆಹಣ್ಣು ಇರುವ 40 ಕೆಜಿಯ ಚೀಲಕ್ಕೆ ನಾಲ್ಕು ಸಾವಿರ ರೂಪಾಯಿ ಬೆಲೆ ಇದೆ. ಕಳೆದ ವರ್ಷ ಇದು ಸುಮಾರು ಮೂರು ಸಾವಿರ ರೂಪಾಯಿ ಆಗಿತ್ತು.
ವಿಜಾಪುರ ಎಪಿಎಂಸಿ ಮಾರುಕಟ್ಟೆಯಲ್ಲಿ ದರ 2,500 ರೂಪಾಯಿಯಿಂದ 3000 ರೂ. ಇದೆ ಎಂದು ಎಪಿಎಂಸಿ ವ್ಯವಸ್ಥಾಪಕ ರಮೇಶ್ ಗೌಡ ಹೇಳುತ್ತಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ ಪೂರೈಕೆ ಗಣನೀಯವಾಗಿ ಕುಂಠಿತವಾಗಿದೆ ಎಂದು ಅವರು ಹೇಳುತ್ತಾರೆ.
ಜತೆಗೆ ಮಾರುಕಟ್ಟೆಗೆ ಬರುತ್ತಿರುವ ನಿಂಬೆಹಣ್ಣಿನ ಗುಣಮಟ್ಟವೂ ಕಳಪೆ ಎಂದು ಗ್ರಾಹಕರು ಆಪಾದಿಸುತ್ತಾರೆ. ಪ್ರತಿಕೂಲ ಹವಾಮಾನದಿಂದಾಗಿ ನಿಂಬೆ ಇಳುವರಿ ಪ್ರತಿ ಎಕರೆಗೆ 10 ಟನ್‍ಗೆ ಇಳಿದಿದ್ದು, ಗುಣಮಟ್ಟದ ಮೇಲೂ ಪರಿಣಾಮ ಬೀರಿದೆ ಎಂದು ಕರ್ನಾಟಕ ನಿಂಬೆ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ಸಂತೋಷ್ ಸಪ್ಪಂಡಿ ಅಭಿಪ್ರಾಯಪಡುತ್ತಾರೆ.