2023ರ ವಿಧಾನಸಭೆ ಚುನಾವಣೆ; ಮುಂದಿನ ಸಿಎಂ ಯಾರೆಂಬುದನ್ನು ಹೈಕಮಾಂಡ್ ಘೋಷಣೆ ಮಾಡಲಿದೆ: ಸಿದ್ದರಾಮಯ್ಯ
ದಾವಣಗೆರೆ: 'ಸಾಮೂಹಿಕ ನಾಯಕತ್ವದಲ್ಲಿ 2023ರ ವಿಧಾನ ಸಭಾ ಚುನಾವಣೆ ಎದುರಿಸಲಾಗುವುದು' ಎಂದು ವಿಧಾನಸಭಾ ವಿಪಕ್ಷ ನಾಯಕ ಸಿದ್ದರಾಮಯ್ಯ ತಿಳಿಸಿದರು.
ನಗರದ ಬಾಪೂಜಿ ಎಂಬಿಎ ಕಾಲೇಜು ಆವರಣದಲ್ಲಿನ ಹೆಲೆಪ್ಯಾಡ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಅತ್ಯಧಿಕ ಸ್ಥಾನಗಳನ್ನು ಗೆಲ್ಲಲಿದೆ. ಬಳಿಕ ಆಯ್ಕೆಯಾದ ಶಾಸಕರ ಅಭಿಪ್ರಾಯ ಸಂಗ್ರಹಿಸಿ, ಹೈಕಮಾಂಡ್ ಮುಂದಿನ ಮುಖ್ಯಮಂತ್ರಿ ಯಾರೆಂಬುದನ್ನು ಘೋಷಣೆ ಮಾಡಲಿದೆ ಎಂದು ತಿಳಿಸಿರು.
'ಎಸ್ಸಿ, ಎಸ್ಟಿ ಸಮುದಾಯಕ್ಕೆ ಶೇ.75ರಷ್ಟು ಉಚಿತ ವಿದ್ಯುತ್ ನೀಡಲಾಗುವುದು ಎಂದು ಬಿಜೆಪಿ ಸರ್ಕಾರ ಬಜೆಟ್ ನಲ್ಲಿ ಘೋಷಿಸಿತ್ತು. ಆದರೀಗ ಪ್ರಸ್ತುತ ವಿದ್ಯುತ್ ಕ್ಷಾಮ ಎದುರಾಗಿದ್ದು, ಸರ್ಕಾರ ಈವರೆಗೂ ಘೋಷಿಸಿದಂತೆ ಫಲಾನುಭವಿಗಳಿಗೆ ಕೊಟ್ಟಿಲ್ಲ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಿದ್ದರಾಮಯ್ಯ, ನಿನ್ನೆ ಶುಕ್ರವಾರ ಮುದೋಳ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಈ ಯೋಜನೆ ಬಗ್ಗೆ ಕಾರ್ಯರೂಪಕ್ಕೆ ತರುವುದಾಗಿ ಹೇಳಿದ್ದಾರೆ. ಸರ್ಕಾರದ ಆದೇಶ ಬರಲಿ ನೋಡೋಣ' ಎಂದರು.
'ಎಸ್ಟಿಪಿ ಮತ್ತು ಟಿಎಸ್ಪಿ ಯೋಜನೆಯ 47 ಸಾವಿರ ಕೋಟಿ ರೂ. ಮೀಸಲಿಡುವ ಬದಲು 28 ಸಾವಿರ ಕೋಟಿ ರೂ. ಮಾತ್ರ ಮೀಸಲಿಟ್ಟಿದೆ. ಅಲ್ಲದೇ ಈ ಹಣವನ್ನು ಬೇರೆ ಯೋಜನೆಗಳಿಗೆ ಉಪಯೋಗಿಸಿಕೊಂಡು ಎಸ್ಸಿ, ಎಸ್ಟಿ ಸಮುದಾಯಗಳಿಗೆ ಕಣ್ಣಿಗೆ ಮಣ್ಣು ಎರೆಚುವ ಕೆಲಸ ಮಾಡುತ್ತಿದೆ' ಎಂದು ಬಿಜೆಪಿ ಸರ್ಕಾರದ ವಿರುದ್ಧ ಕಿಡಿಕಾರಿದರು.
ಹುಬ್ಬಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ, ಕಾನೂನು ಎಲ್ಲರಿಗೂ ಒಂದೇ. ಈ ಪ್ರಕರಣದಲ್ಲಿ ಯಾವುದೇ ಪಕ್ಷದ ಮುಖಂಡ ಇರಲೀ ಅವರ ವಿರುದ್ಧ ಕಠಿಣ ಕಾನೂನು ಕ್ರಮ ಸರ್ಕಾರ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಅಲ್ಲದೇ ಈ ಪ್ರಕರಣದ ಹಿಂದೆ ಕಾಂಗ್ರೆಸ್ ಮುಖಂಡರೇ ಇದ್ದಾರೆ ಎಂದು ಬಿಜೆಪಿಯವರು ಆರೋಪಿಸುತ್ತಿದ್ದಾರೆ ಎಂಬ ಪತ್ರಕರ್ತರ ಪ್ರಶ್ನೆಗೆ, ಘಟನೆಗೆ ಸಂಬಂಧಿಸಿದಂತೆ ಮೊಬೈಲ್ ನಲ್ಲಿ ಪೋಸ್ಟ್ ಮಾಡಿದ ವ್ಯಕ್ತಿ ಪ್ರಶಾಂತ ಹಿರೇಮಠ ಬಿಜೆಪಿ ಕಾರ್ಯಕರ್ತ. ಈಗ ನಮ್ಮ ಕಡೆಗೆ ಬೊಟ್ಟು ಮಾಡಿ ಬಿಜೆಪಿಯವರು ಏಕೆ ತೋರಿಸುತ್ತಿದ್ದಾರೆ ಎಂದು ಪತ್ರಕರ್ತರಿಗೆ ಮರು ಪ್ರಶ್ನೆ ಮಾಡಿದರು.