ದಾವಣಗೆರೆ: ಪರೀಕ್ಷೆ ಬರೆಯಬೇಕಿದ್ದ ಪಿಯುಸಿ ವಿದ್ಯಾರ್ಥಿ ಅನುಮಾನಾಸ್ಪದ ಸಾವು
ದಾವಣಗೆರೆ: ಶನಿವಾರ ಪಿಯುಸಿ ಪರೀಕ್ಷೆಯ ಗಣಿತ ವಿಷಯ ಬರೆಯಬೇಕಾಗಿದ್ದ ವಿದ್ಯಾರ್ಥಿಯೊಬ್ಬ ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ದಾವಣಗೆರೆಯ ಪಿಸಾಳೆ ಕಾಂಪೊಂಡಿನಲ್ಲಿ ನಡೆದಿದೆ.
ಪಿಯುಸಿ ವಿದ್ಯಾರ್ಥಿ ನಿಗೂಢ ಸಾವಾಗಿದ್ದು, ಮಿಥುನ್ ಎಂದು ಗುರುತಿಸಲಾಗಿದೆ. ಸತೀಶ್ ಪಿಸಾಳೆ ಅವರ ಪುತ್ರ ಮಿಥುನ್ ಖಾಸಗಿ ಶಾಲೆಯಲ್ಲಿ ಪಿಯುಸಿ ವ್ಯಾಸಂಗ ಮಾಡುತ್ತಿದ್ದ.
ಆದರೆ, ಬೆಳಗಿನ ಜಾವ ರಕ್ತದ ಮಡುವಿನಲ್ಲಿ ಬಿದ್ದ ವಿದ್ಯಾರ್ಥಿಯ ಮೃತ ದೇಹ ಸಿಕ್ಕಿದೆ. ಇಂದು ಗಣಿತ ಪರೀಕ್ಷೆ ಬರೆಯಬೇಕಾದ್ದ ವಿದ್ಯಾರ್ಥಿ ಮೃತ ಪಟ್ಟಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
ರಕ್ತದ ಮಡುವಿನಲ್ಲಿ ಬಿದ್ದಿರುವ ವಿದ್ಯಾರ್ಥಿಗೆ ಹೊಟ್ಟೆ, ಕುತ್ತಿಗೆ ಭಾಗ ಚಾಕುವಿನಿಂದ ಕೊಯ್ದ ಗುರುತುಗಳು ಇವೆ. ಸ್ಥಳೀಯರು ಕೊಲೆ ಆಗಿರಬಹುದು ಎಂದು ಸಂಶಯ ವ್ಯಕ್ತ ಪಡಿಸಿದ್ದಾರೆ. ಇನ್ನೂ ಕೆಲವರು ಯುವಕ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ. ಸಾವಿನ ಕಾರಣ ಇನ್ನೂ ತಿಳಿದಿಲ್ಲ.
ಸ್ಥಳಕ್ಕೆ ಶ್ವಾನದಳದೊಂದಿಗೆ ಪೊಲೀಸ್ ಭೇಟಿ ನೀಡಿದ್ದು, ಸ್ಥಳಕ್ಕೆ ಪೊಲೀಸ್ ವರಿಷ್ಠಾಧಿಕಾರಿ ಸಿ ಬಿ ರಿಷ್ಯಂತ್ ಭೇಟಿ ನೀಡಿ ಪರಿಶೀಲಿಸಿ ನಡೆಸಿದರು.