ಚಿಕ್ಕಮಗಳೂರು | ಹೆಜ್ಜೇನು ದಾಳಿ: ಕಾಫಿ ಮಂಡಳಿ ಮಾಜಿ ಅಧ್ಯಕ್ಷ ಎಂ.ಎಸ್.ಭೋಜೇಗೌಡ ಮೃತ್ಯು
ಚಿಕ್ಕಮಗಳೂರು, ಎ.23: ತಮ್ಮದೇ ಮಾಲಕತ್ವದ ಕಾಫಿ ಎಸ್ಟೇಟ್‍ಗೆ ತೆರಳಿದ್ದ ವೇಳೆ ಏಕಾಏಕಿ ಹೆಜ್ಜೇನು ದಾಳಿಗೆ ಒಳಗಾಗಿದ್ದ ಬಿಜೆಪಿ ಮುಖಂಡ ಹಾಗೂ ಕಾಫಿ ಮಂಡಳಿ ಮಾಜಿ ಅಧ್ಯಕ್ಷ ಎಂ.ಎಸ್.ಭೋಜೇಗೌಡ (73) ಮೃತಪಟ್ಟಿರುವ ದಾರುಣ ಘಟನೆ ಶನಿವಾರ ನಗರ ಸಮೀಪದ ಕೈಮರ ಗ್ರಾಮದಲ್ಲಿ ನಡೆದಿದೆ.
ಚಿಕ್ಕಮಗಳೂರು ನಗರದ ಹೊರವಲಯದಲ್ಲಿರುವ ಕೈಮರ ಸಮೀಪದ ಕೃಷ್ಣಗಿರಿ ಎಸ್ಟೇಟ್‍ನಲ್ಲಿ ಶನಿವಾರ ಮಧ್ಯಾಹ್ನದ ವೇಳೆ ಸುತ್ತಾಡುತ್ತಿದ್ದಾಗ ಕಾಡು ಜಾತಿಯ ಮರವೊಂದರಲ್ಲಿ ಗೂಡು ಕಟ್ಟಿಕೊಂಡಿದ್ದ ಹೆಜ್ಜೇನುಗಳು ದಿಢೀರ್ ದಾಳಿ ಇಟ್ಟಿವೆ. ಏಕಾಏಕಿ ಹೆಜ್ಜೇನು ದಾಳಿಗೆ ತುತ್ತಾಗಿದ್ದ ಅಸ್ವಸ್ಥರಾಗಿದ್ದ ಬೋಜೇಗೌಡ ಅವರನ್ನು ಕುಟುಂಬಸ್ಥರು ಕೂಡಲೇ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಹೆಚ್ಚಿನ ಸಂಖ್ಯೆಯಲ್ಲಿ ಹೆಜ್ಜೇಜುಗಳು ಅವರನ್ನು ಕಚ್ಚಿದ್ದ ಹಿನ್ನೆಲೆಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಕೊನೆ ಉಸಿರೆಳೆದಿದ್ದಾರೆ.
ಮೃತರು ಪತ್ನಿ ಗೀತಾ, ಹಿರಿಯ ಪುತ್ರ ಹಿಮಕೀರ್ತಿ, ಕಿರಿಯ ಪುತ್ರ ಜಯಕೀರ್ತಿ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಕೃಷ್ಣಗಿರಿ ಎಸ್ಟೇಟ್‍ನಲ್ಲಿ ರವಿವಾರ ಮಧ್ಯಾಹ್ನದ ವೇಳೆಗೆ ಮೃತರ ಅಂತ್ಯಕ್ರಿಯೆ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
ತಾಲೂಕಿನ ಮೂಗ್ತಿಹಳ್ಳಿ ಗ್ರಾಮದ ಸಣ್ಣ ಸಿದ್ದೇಗೌಡ ಮತ್ತು ಭೈರಮ್ಮ ದಂಪತಿಯ ಕಿರಿಯ ಪುತ್ರರಾಗಿದ್ದ ಎಂ.ಎಸ್.ಭೋಜೇಗೌಡ ಅವರು ಪ್ರಗತಿಪರ ಕೃಷಿಕ ಹಾಗೂ ದೊಡ್ಡ ಕಾಫಿ ಬೆಳೆಗಾರರಾಗಿದ್ದರು. ಕೃಷ್ಣಗಿರಿ ಎಸ್ಟೇಟ್‍ನಲ್ಲಿ ಕುಟುಂಬಸ್ಥರೊಂದಿಗೆ ವಾಸವಿದ್ದ ಅವರು, ಜಿಲ್ಲಾ ಬಿಜೆಪಿ ಪಕ್ಷದಲ್ಲಿ ಸಕ್ರೀಯವಾಗಿದ್ದು, ಉತ್ತಮ ರಾಜಕಾರಣಿ ಎಂದು ಹೆಸರುಗಳಿಸಿದ್ದರು. ಬಿಜೆಪಿ ಸೇರುವುದಕ್ಕೂ ಮುನ್ನ ಅವರು ಜನತಾ ಪರಿವಾರ, ಕಾಂಗ್ರೆಸ್ ಪಕ್ಷಗಳಲ್ಲೂ ಕೆಲ ವರ್ಷಗಳ ಕಾಲ ಸಕ್ರೀಯರಾಗಿದ್ದರು. ಬಿಜೆಪಿ ಜಿಲ್ಲಾಧ್ಯಕ್ಷರಾಗಿದ್ದ ಅವರು, ಜಿಲ್ಲೆಯಲ್ಲಿ ಬಿಜೆಪಿ ಪಕ್ಷದ ಸಂಘಟನೆಗೆ ಶ್ರಮಿಸಿದ್ದರು.
ಈ ಹಿಂದೆ ವಿಧಾನ ಪರಿಷತ್ ಚುನಾವಣೆಗೆ ಸ್ಫರ್ಧಿಸಿ ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಸೋಲು ಕಂಡಿದ್ದ ಎಂ.ಎಸ್.ಭೋಜೇಗೌಡ ಅವರು ಸರಳ ಸಜ್ಜನಿಕೆಯ ವ್ಯಕ್ತಿ ಎಂದು ಎಲ್ಲ ಪಕ್ಷದವರಿಂದಲೂ ಗೌರವಕ್ಕೆ ಪಾತ್ರರಾಗಿದ್ದರು. 2019ರಲ್ಲಿ ಐಎಎಸ್ ಅಧಿಕಾರಿಯೇತರ ಹಾಗೂ ಕಾಫಿಬೆಳೆಗಾರರೊಬ್ಬರು ಕಾಫಿಮಂಡಳಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸುವ ಮೂಲಕ ಇತಿಹಾಸ ಸೃಷ್ಟಿಸಿದ್ದರು. 2022ರ ಮಾರ್ಚ್ ಅಂತ್ಯದವರೆಗೂ ಅವರು ಕಾಫಿ ಮಂಡಳಿ ಅಧ್ಯಕ್ಷರಾಗಿದ್ದು, ಮಾರ್ಚ್ ಅಂತ್ಯಕ್ಕೆ ಕಾಫಿ ಮಂಡಳಿ ಅಧ್ಯಕ್ಷರ ಅವಧಿ ಪೂರ್ಣಗೊಂಡಿತ್ತು.