ತಮ್ಮ ಆಪ್ತರ ಬಂಧನ ಆಗುತ್ತಿದ್ದಂತೆ ಪ್ರಿಯಾಂಕ್ ಖರ್ಗೆ ಆಡಿಯೋ ಬಿಡುಗಡೆ ಮಾಡಿದ್ದಾರೆ: ಗೃಹ ಸಚಿವ ಆರಗ ಜ್ಞಾನೇಂದ್ರ

Update: 2022-04-23 12:37 GMT

ಬೆಂಗಳೂರು, ಎ. 23: ‘ಪಿಎಸ್ಸೈ ನೇಮಕಾತಿ ಪರೀಕ್ಷೆ ಅಕ್ರಮ ಸಂಬಂಧ ತನಿಖೆ ನಡೆಸುತ್ತಿರುವ ಸಿಐಡಿ ಪೊಲೀಸರು, ಶಾಸಕ ಪ್ರಿಯಾಂಕ್ ಖರ್ಗೆ ಅವರಿಗೆ ಅಪ್ತರೆನ್ನಲಾದ ಅವರದೇ ಪಕ್ಷದ ಕೆಲ ನಾಯಕರನ್ನು ಬಂಧಿಸಿದ್ದಾರೆ' ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.

ಶನಿವಾರ ನಗರದಲ್ಲಿ ಶಾಸಕ ಪ್ರಿಯಾಂಕ್ ಖರ್ಗೆ ಆಡಿಯೋ ಬಿಡುಗಡೆ ಸಂಬಂಧ ಪ್ರತಿಕ್ರಿಯೆ ನೀಡಿದ ಅವರು, ‘ಪ್ರಾಮಾಣಿಕವಾಗಿ ಪರೀಕ್ಷೆ ಬರೆದ ಅಭ್ಯರ್ಥಿಗಳು ಹುದ್ದೆಯಿಂದ ವಂಚಿತರಾಗಬಾರದು. ಅಂತಹ ಅಭ್ಯರ್ಥಿಗಳಿಗೆ ನ್ಯಾಯ ಒದಗಿಸಬೇಕೆಂದು ಸಿಐಡಿ ತನಿಖೆಗೆ ನಾನೇ ಸ್ವತಃ ಆಸಕ್ತಿ ತೋರಿಸಿದ್ದೆ. ಮುಖ್ಯಮಂತ್ರಿ ಜೊತೆಗೂ ಸಮಾಲೋಚಿಸಿ ನಾನು ತನಿಖೆಗೆ ಆದೇಶ ನೀಡಿದ್ದೇನೆ ಎಂದರು.

ಅನಂತರ ಶಾಸಕ ಪ್ರಿಯಾಂಕ್ ಖರ್ಗೆ ಅವರು ಸುದ್ದಿಗೋಷ್ಠಿ ನಡೆಸಿ ಪಿಎಸ್ಸೈ ನೇಮಕದಲ್ಲಿ ಅಕ್ರಮ ನಡೆಸಿದೆ ಎಂದಿದ್ದರು. ಆದರೆ, ಆಗ ಆಡಿಯೋ ರೆಕಾರ್ಡ್ ಬಗ್ಗೆ ಮಾಹಿತಿ ನೀಡಿರಲಿಲ್ಲ. ಇಷ್ಟು ದಿನ ಏಕೆ ಸಾಕ್ಷ್ಯವನ್ನು ತಮ್ಮ ಬಳಿ ಇಟ್ಟುಕೊಂಡಿದ್ದರು? ಅವರ ಆಪ್ತರು ಬಂಧನವಾಗುತ್ತಿದ್ದಂತೆ ಮಾಹಿತಿ ಹೊರಹಾಕಿದ್ದಾರೆ' ಎಂದು ಆರಗ ಜ್ಞಾನೇಂದ್ರ ದೂರಿದರು.

‘ಪ್ರಿಯಾಂಕ್ ಖರ್ಗೆ ತಮ್ಮ ಬೆಂಬಲಿಗರು ಸಿಐಡಿ ತನಿಖೆಯಲ್ಲಿ ಸಿಕ್ಕಿಬೀಳುವುದಿಲ್ಲ ಎಂಬ ಹುಸಿ ನಂಬಿಕೆಯಿಂದ ಸಾಕ್ಷ್ಯ ಬಿಡುಗಡೆ ಮಾಡದೇ ಇರಬಹುದು. ಈಗಲಾದರೂ ಖರ್ಗೆಯವರು ತನಿಖೆ ಕೈಗೊಂಡಿರುವ ಸಿಐಡಿ ಅಧಿಕಾರಿಗಳಿಗೆ ತಮ್ಮ ಬಳಿಯಿರುವ ದಾಖಲೆ ಹಾಗೂ ಮಾಹಿತಿಯನ್ನು ಹಂಚಿಕೊಳ್ಳಬೇಕು ಹಾಗೂ ತಮ್ಮ ಹೊಣೆಗಾರಿಕೆಯನ್ನು ಅರಿಯಬೇಕು ಎಂದು ಅವರು ಸೂಚಿಸಿದರು.

‘ಅಕ್ರಮಕ್ಕೆ ಸಂಬಂಧಿಸಿದಂತೆ ಸಿಐಡಿ ತನಿಖೆ ನಿಷ್ಪಕ್ಷಪಾತವಾಗಿ ನಡೆಯುತ್ತಿದೆ. ಅಕ್ರಮದಲ್ಲಿ ಭಾಗಿಯಾದವರು ಎಷ್ಟೇ ದೊಡ್ಡವರಾದರೂ ರಕ್ಷಿಸುವ ಪ್ರಶ್ನೆಯಿಲ್ಲ. ಕಾಂಗ್ರೆಸ್ ನಾಯಕರು ತನಿಖೆಗೆ ಸಹಕರಿಸಬೇಕು ಹಾಗೂ ಯಾವುದೇ ರೀತಿಯ ರಾಜಕೀಯ ಲಾಭದ ಅಪೇಕ್ಷೆ ಮಾಡದೆ, ಅಕ್ರಮ ಎಸಗಿದವರನ್ನು ಕಾನೂನಿನ ಬಲೆಗೆ ತರಲು ಮುಂದಾಗಬೇಕು ಎಂದು ಆರಗ ಜ್ಞಾನೇಂದ್ರ ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News