ಹಾಲು ಒಕ್ಕೂಟಗಳಲ್ಲಿ ಹುದ್ದೆಗೆ 25ರಿಂದ 50 ಲಕ್ಷ ರೂ.ಲಂಚ: ಕುಮಾರಸ್ವಾಮಿ ಆರೋಪ

Update: 2022-04-23 13:41 GMT

ಬೀದರ್, ಎ. 23: ‘ಬಡ ಮಕ್ಕಳಿಗೆ ಪಾರದರ್ಶಕವಾಗಿ ಉದ್ಯೋಗ ಕೊಡುವ ಜವಾಬ್ದಾರಿಯನ್ನು ರಾಜ್ಯ ಸರಕಾರವು ಸರಿಯಾಗಿ ನಿರ್ವಹಿಸುತ್ತಿಲ್ಲ. ಪಿಎಸ್ಸೈ ನೇಮಕಾತಿ ಹಾಗೂ ಸಹಕಾರಿ ಕ್ಷೇತ್ರದಲ್ಲಿಯೂ ಸರಕಾರಿ ಉದ್ಯೋಗಗಳನ್ನು ಹಣಕ್ಕೆ ಮಾರಾಟ ಮಾಡುತ್ತಿದ್ದಾರೆ' ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕರೂ ಆಗಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.

ಶನಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಜಿಲ್ಲಾ ಹಾಲು ಒಕ್ಕೂಟಗಳಲ್ಲಿ ನೇಮಕಾತಿ ಪಾರದರ್ಶಕವಾಗಿ ನಡೆಯುತ್ತಿಲ್ಲ. ಅಲ್ಲಿ ಒಂದೊಂದು ಹುದ್ದೆಯ ನೇಮಕ 25ರಿಂದ 50ಲಕ್ಷ ರೂ. ವರೆಗೆ ಲಂಚವನ್ನು ನಿಗದಿ ಮಾಡಲಾಗಿದೆ. ಇದು ಎಲ್ಲ ಜಿಲ್ಲೆಗಳ ಹಾಲು ಒಕ್ಕೂಟಗಳಲ್ಲೂ ನಡೆಯುತ್ತಿದೆ. ಈ ಮಾಹಿತಿ ನನಗೆ ಮಾತ್ರವಲ್ಲದೆ, ಈವರೆಗೆ ಆಡಳಿತ ನಡೆಸಿದ, ಈಗ ನಡೆಸುತ್ತಿರುವ ಪ್ರತಿಯೊಬ್ಬರಿಗೂ ಗೊತ್ತಿದೆ' ಎಂದು ದೂರಿದರು.

‘ಎಲ್ಲ ಇಲಾಖೆಗಳಲ್ಲಿಯೂ ಪಾರದರ್ಶಕವಾಗಿ ನೇಮಕಾತಿ ನಡೆಯುತ್ತಿಲ್ಲ. ಕಮಿಷನ್ ದಂಧೆ ಅವ್ಯಾಹತವಾಗಿ ನಡೆಯುತ್ತಿದೆ. ವಸ್ತುಸ್ಥಿತಿ ಹೀಗಿರುವಾಗ ಪ್ರಾಮಾಣಿಕವಾಗಿ ಕಷ್ಟಪಟ್ಟು ಓದಿದ ಬಡ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿದೆ. ಈ ಅನ್ಯಾಯದ ಹಿಂದೆ ಯಾರಿದ್ದಾರೆಂಬುದನ್ನು ಪತ್ತೆ ಹಚ್ಚಬೇಕು. ಪಾರದರ್ಶಕ ಹಾಗೂ ಕಟ್ಟುನಿಟ್ಟಿನ ಕ್ರಮಗಳನ್ನು ಮುಖ್ಯಮಂತ್ರಿ ಕೈಗೊಳ್ಳಬೇಕು ಹಾಗೂ ಈ ಬಗ್ಗೆ ಸಹಕಾರಿ ಸಚಿವರು ವಾಸ್ತವಾಂಶ ಜನರ ಮುಂದೆ ಇಡಲಿ' ಎಂದು ಅವರು ಆಗ್ರಹಿಸಿದರು.

ಕೆಪಿಎಸ್ಸಿ ಶುದ್ಧ ಮಾಡಿದರಾ?: ‘ಕಾಂಗ್ರೆಸ್ ಸರಕಾರ ಅಧಿಕಾರದಲ್ಲಿದ್ದಾಗ ಕೆಪಿಎಸ್ಸಿ ಶುದ್ಧ ಮಾಡುತ್ತೇವೆ ಎಂದು ಶ್ಯಾಂಭಟ್ ಎನ್ನುವ ಅಧಿಕಾರಿಯನ್ನು ಅಲ್ಲಿಗೆ ತಂದು ಕೂರಿಸಿದರು. ಆಮೇಲೆ ಅಲ್ಲಿದ್ದ ರೇಟು ಎಲ್ಲಿಗೆ ಹೋಯಿತು? ಒಂದೊಂದು ಅಸಿಸ್ಟಂಟ್ ಕಮಿಷನರ್ ಹುದ್ದೆಗೆ 1ರಿಂದ 1.5 ಕೋಟಿ ರೂ.ವರೆಗೂ ಆ ರೇಟು ಹೋಗಿದೆ. ನೇಮಕಾತಿ ಮಾಡುವುದಕ್ಕೆ ಎಲ್ಲರ ಬಳಿಯೂ ಹಣ ಪಡೆದಿದ್ದಾರೆ. ಅದರಲ್ಲಿ ಹಣ ಕೊಟ್ಟವರಿಗೆ ಇನ್ನೂ ಕೆಲಸ ಸಿಗದೆ, ಅತ್ತ ಹಣವೂ ವಾಪಸ್ ಸಿಗದೇ ಅಲೆಯುತ್ತಿದ್ದಾರೆ' ಎಂದು ಕುಮಾರಸ್ವಾಮಿ ನೇರ ಆರೋಪ ಮಾಡಿದರು.

‘ಬಡಮಕ್ಕಳು ಇಂತಹವರಿಗೆ ಟ್ರ್ಯಾಪ್ ಆಗುತ್ತಿದ್ದಾರೆ. ಅತ್ತ ಕೆಲಸವೂ ಸಿಗದೇ ಇತ್ತ ಕೊಟ್ಟ ಹಣವೂ ವಾಪಸ್ ಬರದೇ ಒದ್ದಾಡುತ್ತಿದ್ದಾರೆ. ಸರಕಾರಕ್ಕೆ ಪ್ರಾಮಾಣಿಕತೆ ಮತ್ತು ಇಚ್ಛಾಶಕ್ತಿ ಎನ್ನುವುದು ಇದ್ದರೆ ಮೊದಲು ಇಂತಹ ಕೆಟ್ಟ ವ್ಯವಸ್ಥೆಯನ್ನು ಸರಿ ಮಾಡಬೇಕು. ಅಂತಹ ಯಾವುದಾದರೂ ಕ್ರಮವನ್ನು ಸರಕಾರ ಕೈಗೊಂಡಿದೆಯೇ?' ಎಂದು ಅವರು ಖಾರವಾಗಿ ಪ್ರಶ್ನಿಸಿದರು.

‘ರಾಜ್ಯದ ಜನರಿಗೆ ಈಗ ನಡೆಯುತ್ತಿರುವ ಪಿಎಸ್ಸೈ ನೇಮಕಾತಿ ಅಕ್ರಮ ಒಂದು ಚಿಕ್ಕ ಉದಾಹರಣೆ ಅಷ್ಟೆ. ಆದರೆ, ಸಹಕಾರ ಕ್ಷೇತ್ರದಲ್ಲಿ ಹುದ್ದೆಗಳ ನೇಮಕಾತಿಗೆ ಒಪ್ಪಿಗೆ ನೀಡಲು ಮಂತ್ರಿಗಳಿಗೆ ಮುಂಗಡ ನೀಡಬೇಕು. ಇನ್ನು ಸರಕಾರಿ ಉದ್ಯೋಗ ಸಿಕ್ಕಿದರೆ ಸಾಕು ಜೀವನ ಚೆನ್ನಾಗಿರುತ್ತದೆ ಎಂದು ಮನೆ-ಮಠ ಮಾರಾಟ ಮಾಡಿ 25ರಿಂದ 50 ಲಕ್ಷ ರೂ. ಕೊಟ್ಟು ಕೆಲಸಕ್ಕೆ ಸೇರುತ್ತಾರೆ. ಈಗ ಪಿಎಸ್ಸೈ ಪ್ರಕರಣ ಹೊರಗೆ ಬಂದಿದೆ. ಅದರಂತೆ ಸಾಕಷ್ಟು ಪಕ್ರರಣಗಳು ಸರಕಾರದ ಮಟ್ಟದಲ್ಲಿ ನಡೆಯುತ್ತಿವೆ. ಇದಕ್ಕೆ ಸರಕಾರ ಅಂತಿಮ ತೆರೆ ಎಳೆದು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು' ಎಂದು ಅವರು ಒತ್ತಾಯಿಸಿದರು.

‘ಪಿಎಸ್ಸೈ ನೇಮಕಾತಿ ಹಗರಣದಲ್ಲಿ ದೊಡ್ಡ ರಾಜಕಾರಣಿಗಳ ಪಾತ್ರ ಇದೆ ಎಂದು ನಾನು ಹೇಳುವುದಿಲ್ಲ. ಇದರಲ್ಲಿ ಕೆಳಹಂತದಲ್ಲಿ ಕೆಲ ಟೀಮ್‍ಗಳಿವೆ. ಸಿದ್ದರಾಮಯ್ಯ ಕಾಲದಲ್ಲಿ ಶಿವಕುಮಾರ್ ಎಂಬ ಕಿಂಗ್ ಪಿನ್ ಒಬ್ಬನನ್ನು ಬಂಧಿಸಿದರು. ಆದರೆ, ಏನೂ ಕ್ರಮವನ್ನೂ ಕೈಗೊಳ್ಳಲಿಲ್ಲ. ಹೀಗಾಗಿ ಇಂದಿನ ಪಿಎಸ್ಸೈ ಪರೀಕ್ಷೆಯಲ್ಲಿ ಪ್ರಾಮಾಣಿಕ ಬಡ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದೆ. ಮುಖ್ಯಮಂತ್ರಿ ಪಾರದರ್ಶಕ ತನಿಖೆ ನಡೆಸಿ ನಿಜವಾದ ಅಪರಾಧಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಆದೇಶ ಮಾಡಿರುವುದಕ್ಕೆ ನನ್ನ ಸಹಮತವಿದೆ' ಎಂದು ಅವರು ನುಡಿದರು.

ಶ್ರೀಲಂಕಾದ ಸ್ಥಿತಿ ಬಂದರೂ ಆಶ್ಚರ್ಯವಿಲ್ಲ

‘ರಾಜ್ಯ ಸರಕಾರದಲ್ಲಿ ಯಾರಿಗೂ ಯಾರ ಮೇಲೆಯೂ ಹಿಡಿತವಿಲ್ಲ. ಬಿಜೆಪಿ ಹೈಕಮಾಂಡ್ ಚುನಾವಣೆಗಷ್ಟೇ ಸೀಮಿತವಾಗಿದೆ. ಬಿಜೆಪಿ ಜನರ ಬದುಕಿಗೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದೆ. ‘ನಾನು ತಿನ್ನುವುದಿಲ್ಲ, ಬೇರೆಯವರಿಗೂ ತಿನ್ನಲು ಬಿಡುವುದೂ ಇಲ್ಲ' ಎಂದು ಮೋದಿ ಹೇಳುತ್ತಾರೆ. ಆದರೆ, ರಾಜ್ಯ ಸರಕಾರದಲ್ಲಿ ಶೇ.40ರಷ್ಟು ಕಮಿಷನ್ ದಂಧೆ ಬಗ್ಗೆ ಮೌನವಾಗಿದ್ದಾರೆ. ಜನಸಾಮಾನ್ಯನ ಜೀವನ ದುಬಾರಿಯಾಗಿದೆ. ಪಕ್ಕದ ಶ್ರೀಲಂಕಾದಲ್ಲಿರುವ ಪರಿಸ್ಥಿತಿ ಭಾರತದಲ್ಲಿ ಬಂದರೂ ನಾವು ಆಶ್ಚರ್ಯಪಡಬೇಕಾಗಿಲ್ಲ'.

-ಎಚ್.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News