ಎರಡೂ ರಾಷ್ಟ್ರೀಯ ಪಕ್ಷಗಳಿಗೆ ದೇಶದ ಪ್ರಜೆಗಳು ಚೆನ್ನಾಗಿರಬೇಕೆಂಬ ಪ್ರಜ್ಞೆ ಇಲ್ಲ: ಕುಮಾರಸ್ವಾಮಿ ವಾಗ್ದಾಳಿ

Update: 2022-04-23 14:25 GMT

ಬೀದರ್, ಎ. 23: ‘ಕಾಂಗ್ರೆಸ್ ಸರಕಾರವಿದ್ದಾಗ ತಮ್ಮ ಹಗರಣಗಳನ್ನು ಮುಚ್ಚಿಹಾಕಿಕೊಳ್ಳಲು ಲೋಕಾಯುಕ್ತಕ್ಕಿದ್ದ ಅಧಿಕಾರಕ್ಕೆ ಕತ್ತರಿ ಹಾಕಿದರು. ಇವತ್ತು ನೋಡಿದರೆ ಅದೇ ಪಕ್ಷದ ನಾಯಕರು ಹಾದಿಬೀದಿಯಲ್ಲಿ ನಿಂತು ಭ್ರಷ್ಟರನ್ನು ಬಂಧಿಸಿ ಎಂದು ಪ್ರತಿಭಟನೆ ಮಾಡುತ್ತಿದ್ದಾರೆ' ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

ಶನಿವಾರ ನಗರದಲ್ಲಿ ಮಾತನಾಡಿದ ಅವರು, ‘2006ರಲ್ಲಿ ನಾನು ಅಧಿಕಾರದಲ್ಲಿದ್ದಾಗ ಲೋಕಾಯುಕ್ತಕ್ಕೆ ಸಂಪೂರ್ಣ ಅಧಿಕಾರ ನೀಡಿದ್ದೆ. ದೇಶದ ಪ್ರಜೆಗಳು ಚೆನ್ನಾಗಿರಬೇಕೆಂಬ ಪ್ರಜ್ಞೆ ಎರಡೂ ರಾಷ್ಟ್ರೀಯ ಪಕ್ಷಗಳಿಗೆ ಇಲ್ಲ. ರಾಜ್ಯವನ್ನು ಲೂಟಿ ಹೊಡೆಯುತ್ತಿವೆ. ಎರಡೂ ರಾಷ್ಟ್ರೀಯ ಪಕ್ಷಗಳು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ' ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ನನಗೆ ಪೂರ್ಣ ಪ್ರಮಾಣದ ಅಧಿಕಾರ ನೀಡಿದರೆ ಜನರ ಕೆಲಸಗಳನ್ನು ಯಾವ ರೀತಿ ಮಾಡಬೇಕು ಎಂಬುದನ್ನು ಇವರಿಗೆಲ್ಲ ತೋರಿಸಿ ಕೊಡುತ್ತೇನೆ. ಜಲಧಾರೆ ಬಗ್ಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ಯಾರು ಏನೇ ಮಾತನಾಡಿದರು ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ಬಾದಾಮಿ ಕ್ಷೇತ್ರದಲ್ಲಿ ನಡೆಯುತ್ತಿರುವ ಯೋಜನೆಗಳಿಗೆ ಹಣ ಬಿಡುಗಡೆ ಮಾಡಿದ್ದು ನಾನು. ಎರಡೂ ರಾಷ್ಟ್ರೀಯ ಪಕ್ಷಗಳಿಂದ ರೈತರಿಗೆ ಅನ್ಯಾಯವಾಗುತ್ತಿದೆ. ನಾನು ಕಡಿಮೆ ಅವಧಿಯಲ್ಲಿ ರೈತರ ಸಾಲ ಮನ್ನಾ ಮಾಡಿದ್ದೇನೆ. ಇನ್ನು ನನಗೆ ಪೂರ್ಣ ಪ್ರಮಾಣದ ಸರಕಾರ ನೀಡಿದರೆ ಇನ್ನಷ್ಟು ಜನ ಪರ ಕೆಲಸ ಮಾಡುತ್ತೇನೆ' ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News