ಯುಪಿ, ಮಧ್ಯಪ್ರದೇಶ ಮಾದರಿ ನಮ್ಮಲ್ಲೂ ಬುಲ್ಡೋಝರ್‌ ರೂಲ್ಸ್ ಬರಬೇಕಾದ ಸ್ಥಿತಿ ಬರುತ್ತಿದೆ: ಸಚಿವ ಆರ್. ಅಶೋಕ್

Update: 2022-04-23 14:51 GMT

ಬೆಂಗಳೂರು, ಎ.23: ನಮ್ಮಲ್ಲೂ ಯುಪಿ, ಮಧ್ಯಪ್ರದೇಶ ಮಾದರಿ ಬುಲ್ಡೋಝರ್‌ ರೂಲ್ಸ್ ಬರಬೇಕಾದ ಸ್ಥಿತಿ ಬರುತ್ತಿದೆ. ಬುಲ್ಡೋಝರ್‌ ರೂಲ್ಸ್ ತಂದರೆ ಮಾತ್ರ ಮಟ್ಟ ಹಾಕಲು ಸಾಧ್ಯ. ಗಲಭೆ ಸೃಷ್ಟಿ ಮಾಡುವವರ ಮೇಲೆ ಕಠಿಣ ಕ್ರಮ ಜರುಗಿಸಬೇಕು. ಬುಲ್ಡೋಜರ್ ಬಳಸಿ ಆರೋಪಿಗಳ ಅಕ್ರಮ ಮನೆಗಳನ್ನು ತೆರವು ಮಾಡಬೇಕು ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ. 

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗಲಭೆ ಸೃಷ್ಟಿ ಮಾಡುವವರ ಮೇಲೆ ಕಠಿಣ ಕ್ರಮ ಜರುಗಿಸಬೇಕು. ಬುಲ್ಡೋಝರ್‌ ಬಳಸಿ ಆರೋಪಿಗಳ ಅಕ್ರಮ ಮನೆಗಳನ್ನು ತೆರವು ಮಾಡಬೇಕು. ಯಾವುದೇ ಧರ್ಮ, ಜಾತಿಗೆ ಸೇರಿದ್ದರೂ ಸುಮ್ಮನೆ ಬಿಡಬಾರದು. ಅವರ ಆಸ್ತಿ-ಪಾಸ್ತಿಗಳನ್ನು ಜಪ್ತಿ ಮಾಡಿಕೊಳ್ಳಬೇಕು ಎಂದರು. 

ಮುಂದುವರೆದು, ಈ ಬಗ್ಗೆ ನಾನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜೊತೆ ಚರ್ಚೆ ಮಾಡುತ್ತೇನೆ. ನಾವು ಇನ್ನಷ್ಟು ಕಠಿಣ ಕ್ರಮ ತೆಗೆದುಕೊಂಡು ದುಷ್ಟರ ಹೆಡೆಮುರಿ ಕಟ್ಟುತ್ತೇವೆ. ಯಾರನ್ನೂ ಬಿಡುವ ಪ್ರಶ್ನೆಯೇ ಇಲ್ಲ. ರಾಜ್ಯದಲ್ಲಿ ಅರಾಜಕತೆ ಉಂಟುಮಾಡುವ ಕಾಂಗ್ರೆಸ್‍ಗೆ ತಕ್ಕ ಪಾಠ ಜನರೇ ಕಲಿಸುತ್ತಾರೆ ಎಂದು ಹೇಳಿದರು.

ಕಾಂಗ್ರೆಸ್ ಸಂಸ್ಕೃತಿಯೇ ಎಲ್ಲೆಡೆ ಅಶಾಂತಿ ನಿರ್ಮಾಣ ಮಾಡುವುದು. ಹಿಂದೆ ಅವರದೇ ಪಕ್ಷದ ಸಿಎಂ ಬದಲಾಯಿಸಲು ರಾಮನಗರ, ಕನಕಪುರದಲ್ಲಿ ಗಲಾಟೆ ಮಾಡಿಸುತ್ತಿದ್ದರು. ಡಿಜೆ ಹಳ್ಳಿ-ಕೆಜಿಹಳ್ಳಿಯಲ್ಲೂ ಅವರದೇ ಪಕ್ಷದ ಶಾಸಕನ ಮನೆಯನ್ನು, ಅವರದೇ ಪಕ್ಷದ ಮಾಜಿ ಮೇಯರ್ ಬೆಂಕಿ ಹಾಕಿಸಿ, ಜೈಲಿಗೆ ಹೋಗಿದ್ದ. 

ಹುಬ್ಬಳ್ಳಿ ಗಲಾಟೆಯಲ್ಲೂ ಸ್ಥಳೀಯ ಕಾಂಗ್ರೆಸ್ ಅಧ್ಯಕ್ಷನೇ ಭಾಗಿಯಾಗಿದ್ದಾನೆ. ಪಿಎಸ್‍ಐ ನೇಮಕಾತಿ ಹಗರಣದಲ್ಲೂ ಕಾಂಗ್ರೆಸ್ ಮುಖಂಡನೇ ಇದ್ದಾನೆ. ಹೀಗೆ ಅವರೇ ಎಲ್ಲ ಹಗರಣದಲ್ಲೂ ಭಾಗಿಯಾಗಿ ಉಳಿದವರ ಬಗ್ಗೆ ಮಾತನಾಡುತ್ತಾರೆ. ರಾಜ್ಯದಲ್ಲಿ ಅಶಾಂತಿ, ಅರಾಜಕತೆ ಸೃಷ್ಟಿಸಲು ಕಾಂಗ್ರೆಸ್ ಸರ್ವಪ್ರಯತ್ನ ಮಾಡುತ್ತಿದೆ. ವಿದೇಶಿ ಶಕ್ತಿಗಳು ಈ ಎಲ್ಲ ಘಟನೆಯಲ್ಲಿ ಭಾಗಿಯಾಗಿವೆಯೇ ಎನ್ನುವ ಬಗ್ಗೆ ತನಿಖೆ ನಡೆಸಬೇಕು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News