ದ್ವಿತೀಯ ಪಿಯು ಪರೀಕ್ಷೆ: ರಾಜ್ಯಾದ್ಯಂತ ಎರಡನೇ ದಿನ 8 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಗೈರು
ಬೆಂಗಳೂರು, ಎ.23: 2021-22ನೇ ಸಾಲಿನ ದ್ವಿತೀಯ ಪಿಯು ಪರೀಕ್ಷೆಯ ಎರಡನೆಯ ದಿನವಾದ ಶನಿವಾರ ಶಿಕ್ಷಣ ಮತ್ತು ಗಣಿತ ವಿಷಯಗಳ ಪರೀಕ್ಷೆ ನಡೆದಿದ್ದು, ಎರಡು ವಿಷಯಗಳಲ್ಲಿ ಒಟ್ಟು 8125 ವಿದ್ಯಾರ್ಥಿಗಳು ಗೈರುಹಾಜರಾಗಿದ್ದಾರೆ.
ಶಿಕ್ಷಣ ವಿಷಯದಲ್ಲಿ ಮೊದಲ ಬಾರಿಗೆ ಪರೀಕ್ಷೆ ಬರೆಯುತ್ತಿದ್ದ 33,128 ವಿದ್ಯಾರ್ಥಿಗಳ ಪೈಕಿ, 2,269 ವಿದ್ಯಾರ್ಥಿಗಳು, ಮರುಪರೀಕ್ಷೆ ತೆಗೆದುಕೊಂಡಿದ್ದ 443 ವಿದ್ಯಾರ್ಥಿಗಳ ಪೈಕಿ 80 ವಿದ್ಯಾರ್ಥಿಗಳು ಹಾಗೂ ಖಾಸಗಿಯಾಗಿ ನೋಂದಣಿಯಾಗಿದ್ದ 2,094 ವಿದ್ಯಾರ್ಥಿಗಳ ಪೈಕಿ 553 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ.
ಗಣಿತ ವಿಷಯದಲ್ಲಿ ಮೊದಲ ಬಾರಿಗೆ ಪರೀಕ್ಷೆ ಬರೆಯುತ್ತಿದ್ದ 2,00,243 ವಿದ್ಯಾರ್ಥಿಗಳಲ್ಲಿ 3,313 ವಿದ್ಯಾರ್ಥಿಗಳು, ಮರುಪರೀಕ್ಷೆ ತೆಗೆದುಕೊಂಡಿದ್ದ 7,502 ವಿದ್ಯಾರ್ಥಿಗಳ ಪೈಕಿ 1,910 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ. ಖಾಸಗಿಯಾಗಿ ಯಾರು ನೋಂದಣಿ ಮಾಡಿಕೊಂಡಿರಲಿಲ್ಲ ಎಂದು ಪದವಿಪೂರ್ವ ಶಿಕ್ಷಣ ಇಲಾಖೆ ತಿಳಿಸಿದೆ.
ಶಿಕ್ಷಣ ವಿಷಯದ ಪರೀಕ್ಷೆಗೆ ಬಳ್ಳಾರಿ 7,058 ಹಾಗೂ ವಿಜಯಪುರ ಜಿಲ್ಲೆಯಲ್ಲಿ 7,772 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದು, 400ಕ್ಕಿಂತ ಅಧಿಕ ವಿದ್ಯಾರ್ಥಿಗಳು ಪರೀಕ್ಷೆಗೆ ಗೈರಾಗಿರುವುದು ಶಿಕ್ಷಣ ಇಲಾಖೆಯ ಅಂಕಿ-ಅಂಶಗಳಿಂದ ಬಹಿರಂಗವಾಗಿದೆ.