ಗುಂಡ್ಲುಪೇಟೆ: ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದ್ದ ಚಿರತೆ ಕೊನೆಗೂ ಬೋನಿನಲ್ಲಿ ಸೆರೆ
ಚಾಮರಾಜನಗರ: ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಶಿವಪುರ ಗ್ರಾಮದಲ್ಲಿ ಆಗಾಗ್ಗೆ ಕಾಣಿಸಿಕೊಂಡು ಜನರು ಭಯ ಬೀತರಾಗುವಂತೆ ಮಾಡಿದ್ದ ಚಿರತೆಯು ಅರಣ್ಯ ಇಲಾಖೆ ಇರಿಸಿದ್ದ ಬೋನಿನಲ್ಲಿ ಕೊನೆಗೂ ಸೆರೆಯಾಗಿದೆ.
ಚಾಮರಾಜನಗರ ಜಿಲ್ಲೆಯ ಬಂಡೀಪುರ ಹುಲಿ ಸಂರಕ್ಷಿತಾ ಪ್ರದೇಶದ ಗೋಪಾಲ ಸ್ವಾಮಿ ಬೆಟ್ಟ ವಲಯದ ಶಿವಪುರ ಗ್ರಾಮದ ರೈತರ ಜಮೀನಿನಲ್ಲಿ ಕಾಣಿಸಿಕೊಂಡು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದ್ದ ಚಿರತೆ ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಶನಿವಾರ ತಡರಾತ್ರಿ ಬಿದ್ದಿದೆ,
ಶಿವಪುರ ಗ್ರಾಮದ ಉದಯಕುಮಾರ್ ಎಂಬುವರ ಜಮೀನಿನಲ್ಲಿ ಚಿರತೆ ಸೆರೆಯಾಗಿದ್ದು, ಸಾರ್ವಜನಿಕರು ನಿಟ್ಟುಸಿರು ಬಿಟ್ಟಿದ್ದಾರೆ.
ಕಳೆದ 15 ದಿನಗಳಿಂದ ಆಗಾಗ ಕಾಣಿಸಿಕೊಂಡು ಜನರಲ್ಲಿ ಆತಂಕ ಉಂಟುಮಾಡಿತ್ತು, ಇದರ ಬೆನ್ನಲ್ಲೇ ಸಾರ್ವಜನಿಕರು ಚಿರತೆ ಸೆರೆಗೆ ಕ್ರಮ ಕೈಗೊಳ್ಳುವಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿದ್ರು, ಶೀಘ್ರವೇ ಕಾರ್ಯಪ್ರವೃತ್ತರಾದ ಗೋಪಾಲಸ್ವಾಮಿ ಬೆಟ್ಟ ವಲಯದ ಅರಣ್ಯಾಧಿಕಾರಿಗಳು ಚಿರತೆ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.