ಹೊಸದುರ್ಗ: ರಸ್ತೆ ಅಪಘಾತಕ್ಕೆ ಇಬ್ಬರು ಬಲಿ
ಹೊಸದುರ್ಗ, ಎ.24: ಬುಲೆರೋ ವಾಹನ ರಸ್ತೆ ಬದಿಯ ಹುಣಸೆಮರಕ್ಕೆ ಢಿಕ್ಕಿ ಹೊಡೆದ ಪರಿಣಾಮ ಇಬ್ಬರು ಮೃತಪಟ್ಟು, ಮತ್ತಿಬ್ಬರು ಗಾಯಗೊಂಡಿರುವ ಘಟನೆ ತಾಲೂಕಿನ ಬೋಕಿಕೆರೆ ಸಮೀಪ ತರೀಕೆರೆ ಮುಖ್ಯರಸ್ತೆಯಲ್ಲಿ ರವಿವಾರ ನಡೆದಿದೆ.
ಬುಲೆರೊ ವಾಹನದಲ್ಲಿ ಸಂಚರಿಸುತ್ತಿದ್ದ ಹೊನ್ನಾವರ ಮೂಲದ ಶ್ರೀಧರನಾಯ್ಕ್, ಜೀವನಕುಮಾರ್ ಮೃತಪಟ್ಟವರು. ಪ್ರಮೋದನಾಯ್ಕ್, ವಿನಾಯಕ ಎಂಬುವವರು ಗಾಯಗೊಂಡಿದ್ದು ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗ ಆಸ್ಪತ್ರೆಗೆ ದಾಖಲಾಗಿದ್ದಾರೆ. ಶ್ರೀಧರನಾಯ್ಕ್ ಅತಿವೇಗ ಹಾಗೂ ಅಜಾಗರೂಕತೆಯಿಂದ ವಾಹನ ಚಾಲನೆ ಮಾಡಿಕೊಂಡು ಬಂದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ.
ಉತ್ತರಕನ್ನಡ ಜಿಲ್ಲೆ ಹೊನ್ನಾವರ ತಾಲೂಕಿನ ಕರ್ಕಿ ಗ್ರಾಮ ಮೂಲದ ಶ್ರೀಧರನಾಯ್ಕ್, ಜೀವನಕುಮಾರ್, ಪ್ರಮೋದನಾಯ್ಕ್, ವಿನಾಯಕ ಎಂಬುವವರು ತುಮಕೂರಿನಲ್ಲಿ ಆಕ್ಸಿಜನ್ ಪೈಪ್ ಲೈನ್ ಕೆಲಸ ಮಾಡಲು ಸ್ವಂತ ಊರಿನಿಂದ ತರೀಕೆರೆ, ಹೊಸದುರ್ಗ ಮಾರ್ಗವಾಗಿ ತುಮಕೂರಿಗೆ ಹೋಗುತ್ತಿರುವಾಗ ಈ ಘಟನೆ ಸಂಭವಿಸಿದೆ. ವಾಹನ ಜಖಂಗೊಂಡಿದೆ.
ಈ ಬಗ್ಗೆ ಹೊಸದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.