ಸಹಾಯಕ ಪ್ರಾಧ್ಯಾಪಕ ಪರೀಕ್ಷೆಯಲ್ಲೂ ಅಕ್ರಮ: ದೂರು
Update: 2022-04-24 20:19 IST
ಕಲಬುರ್ಗಿ, ಎ. 24: ಪಿಎಸ್ಸೈ ನೇಮಕಾತಿಯಲ್ಲಿ ಅಕ್ರಮ ನಡೆದಿರುವ ಪ್ರಕರಣ ನಡುವೆ ಇದೀಗ ಸಹಾಯಕ ಪ್ರಾಧ್ಯಾಪಕ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂಬ ಶಂಕೆ ವ್ಯಕ್ತವಾಗಿದೆ.
ಪರೀಕ್ಷೆ ನಡೆಯುವ ಕೆಲವೇ ಗಂಟೆಗಳ ಹಿಂದೆ ವಾಟ್ಸಾಪ್‍ನಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವ ಶಂಕೆ ವ್ಯಕ್ತವಾಗಿದ್ದು, ಈ ಸಂಬಂಧ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಮಲ್ಲೇಶ್ವರಂ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದೆ.
ನಿರ್ದಿಷ್ಟ ಪತ್ರಿಕೆಯ ಪ್ರಶ್ನೆಗಳು ಸೋರಿಕೆ ಆಗಿರುವ ಸಂಬಂಧ ದೂರು ಸಲ್ಲಿಸಲಾಗಿದೆ. ಪ್ರಮುಖವಾಗಿ ಪರೀಕ್ಷೆ ಮುನ್ನವೇ ಅಭ್ಯರ್ಥಿಗಳ ಮೊಬೈಲ್‍ನಲ್ಲಿ ಪ್ರಶ್ನೆಗಳು ಹರಿದಾಡಿವೆ ಎನ್ನಲಾದ ಸ್ಕ್ರೀನ್ ಶಾಟ್ ವೈರಲ್ ಆಗಿದೆ. 20ಕ್ಕೂ ಹೆಚ್ಚು ಪ್ರಶ್ನೆಗಳು ಅಭ್ಯರ್ಥಿಯೊಬ್ಬನ ಮೊಬೈಲ್‍ನಲ್ಲಿ ನೋಡಿದ್ದಾಗಿ ಸ್ಪರ್ಧಾಕಾಂಕ್ಷಿ ಅಭ್ಯರ್ಥಿಗಳು ದೂರು ನೀಡಿದ್ದಾರೆ.