×
Ad

ನಟ ರಾಜ್‌ ಕುಮಾರ್‌ ಹುಟ್ಟುಹಬ್ಬ: ಕನ್ನಡದಲ್ಲೇ ಗ್ರಾಹಕ ಸೇವೆಗೆ ಆಗ್ರಹ

Update: 2022-04-24 20:36 IST

ಬೆಂಗಳೂರು: ನಟ ದಿವಂಗತ ರಾಜ್‌ಕುಮಾರ್‌ ಹುಟ್ಟುಹಬ್ಬವನ್ನು ‘ಕನ್ನಡ ಅಭಿಮಾನ ದಿನ’ವನ್ನಾಗಿ ಆಚರಿಸಲು ಕನ್ನಡ ಅಭಿವೃದ್ಧಿ ಪ್ರಾಧಿಕಾರವು ನೀಡಿದ್ದ ಕರೆಗೆ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಹಲವರು ಬೆಂಬಲ ವ್ಯಕ್ತಪಡಿಸಿದ್ದಾರೆ. 

 'ಕರ್ನಾಟಕದ ಜೀವವಿಮಾ ಕಂಪನಿಗಳೇ, ನಿಮ್ಮಲ್ಲಿ ಹಣಹೂಡಿ ಭವಿಷ್ಯದ ಬಗ್ಗೆ ಆಲೋಚಿಸುವ ಪ್ರತಿಯೊಬ್ಬನಿಗೂ ಕನ್ನಡದ ನಾಳೆಗಳ ಭವಿಷ್ಯದ ಚಿಂತೆಯಿದೆ. ಕನ್ನಡಲ್ಲಿ ಸೇವೆ ಕೊಡಿ, ಭವಿಷ್ಯದ ಶುದ್ಧಕನ್ನಡದ ಉಳಿವಿಗಾಗಿ ನಿಮ್ಮದೂ ಒಂದು ಕೈ ಜೋಡಿಸಿ' ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಟಿ.ಎಸ್‌. ನಾಗಾಭರಣ ವಿಡಿಯೋ ಹೇಳಿಕೆಯನ್ನು ಹಂಚಿಕೊಂಡಿದ್ದಾರೆ.

'ಜನರಿಂದ ಸರ್ಕಾರ... ಜನರಿಗೆ ಜನಭಾಷೆಯಲ್ಲಿ ಸೇವೆ ಕೊಡುವುದು ನಮ್ಮ ಹೊಣೆ... ಬನ್ನಿ ಬದಲಾಗೋಣ ಬದಲಾವಣೆಗೆ ಕಾರಣರಾಗೋಣ..... ಸರಿದಾರಿಯಲ್ಲಿ ನಡೆಯೋಣ...'ಎಂದು ಪ್ರಾಧಿಕಾರವು ಇನ್ನೊಂದು ಟ್ವೀಟ್ ನಲ್ಲಿ ಮನವಿ ಮಾಡಿದೆ. 

ಇನ್ನು ಈ ಅಭಿಯಾನಕ್ಕೆ ಬೆಂಬಲ ವ್ಯಕ್ತಪಡಿಸಿರುವ ಹಲವರು, ಕನ್ನಡದಲ್ಲಿ ಗ್ರಾಹಕ ಸೇವೆ ಅಗತ್ಯ ಎನ್ನುವ ತಮ್ಮ  ಅಭಿಪ್ರಾಯಗಳನ್ನು ಟ್ವಿಟರ್‌ನಲ್ಲಿ ಹಂಚಿಕೊಂಡರು.

ಬೆಂಗಳೂರು ನಗರದ ಮಾಲ್‌ಗಳು, ಅಂಗಡಿಗಳಿಗೆ ತೆರಳಿ ಕನ್ನಡಕ್ಕೆ ಆದ್ಯತೆ ನೀಡುವಂತೆ ಕನ್ನಡ ಹೋರಾಟಗಾರರು ಮನವಿ ಮಾಡಿದ್ದಾರೆ. 

'ಗೂಗಲ್ ಸೇರಿದಂತೆ ಹೊರದೇಶದ ಅದೆಷ್ಟೋ ಕಂಪನಿಗಳು ಕನ್ನಡದಲ್ಲಿ ಗ್ರಾಹಕ ಸೇವೆ ನೀಡಲು ಕ್ರಮ ಕೈಗೊಳ್ಳುತ್ತಿವೆ, ಆದರೆ ಭಾರತದ ಅದೆಷ್ಟೋ ಕಂಪನಿಗಳು ಎಲ್ಲಾ ಗ್ರಾಹಕರಿಗೆ ಇಂಗ್ಲೀಶ್/ಹಿಂದಿ ಬರುತ್ತೆ ಅನ್ನೋ ಭ್ರಮೆಯಲ್ಲಿವೆ' ಎಂದು ಅರುಣ್ ಜಾವಗಲ್ ಅವರು ಟ್ವಿಟರ್ ನಲ್ಲಿ ಬರೆದುಕೊಂಡಿದ್ದಾರೆ. 

'ರಾಷ್ಟ್ರೀಯ ಪಿಂಚಣಿ ಯೋಜನೆ (NPS) ನ ಎಲ್ಲಾ ವ್ಯವಹಾರಗಳು, ಮಾಹಿತಿಗಳು ಕೇವಲ ಹಿಂದಿ ಇಂಗ್ಲೀಷ್ ನಲ್ಲಿ ಮಾತ್ರ ಲಭ್ಯ ಇವೆ. ಕನ್ನಡದಲ್ಲೂ ಇದು ದೊರಕಬೇಕು. ಸರ್ಕಾ ರದ ಯೋಜನೆಗಳನ್ನು ಜನರ ಭಾಷೆಗಳಲ್ಲಿ ಒದಗಿಸಬೇಕು' ಎಂದು ವಿಕಾಸ್ ಹೆಗಡೆ ಎಂಬವರು ಟ್ವೀಟ್ ಮಾಡಿದ್ದಾರೆ.

'ನಮ್ಮ ಬೇರು, ನಮ್ಮ ಅಸ್ತಿತ್ವ ಕನ್ನಡ. ಕನ್ನಡಿಗರಲ್ಲಿ ಕನ್ನಡ ಪ್ರಜ್ಞೆಯನ್ನು ಬಡಿದೆಚ್ಚರಿಸಿದ ಅಣ್ಣಾವ್ರಿಗೆ ನಾವು ಗೌರವ ಸಲ್ಲಿಸಬೇಕೆಂದರೆ ಎಲ್ಲೆಡೆ ಕನ್ನಡ ರಾರಾಜಿಸುವಂತೆ ಮಾಡಬೇಕಿದೆ. ಎಲ್ಲಾ ಗ್ರಾಹಕ ಸೇವೆಗಳನ್ನು ಕನ್ನಡದಲ್ಲಿ ಕೇಳಿ ಪಡೆಯೋಣ' ಎಂದು ರಾಮಚಂದ್ರ ಎಂ. ಎಂಬವರು ಮನವಿ ಮಾಡಿಕೊಂಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News