×
Ad

ತುಮಕೂರಿನಲ್ಲಿ ದಲಿತ ಯುವಕರ ಹತ್ಯೆ ಬಗ್ಗೆ ಯಾವೊಬ್ಬ ಹಿಂದುತ್ವ ಸಂಘಟನೆಯವನೂ ಬಾಯಿ ಬಿಟ್ಟಿಲ್ಲ: ಎಚ್.ಸಿ ಮಹದೇವಪ್ಪ

Update: 2022-04-24 22:00 IST
ಡಾ.ಎಚ್.ಸಿ ಮಹದೇವಪ್ಪ

ಬೆಂಗಳೂರು: 'ತುಮಕೂರಿನಲ್ಲಿ ಇಬ್ಬರು ದಲಿತ ಯುವಕರ ಹತ್ಯೆ ಪ್ರಕರಣದ ಬಗ್ಗೆ ಯಾವೊಬ್ಬ ಹಿಂದುತ್ವ ಸಂಘಟನೆಯವನೂ ಬಾಯಿ ಬಿಟ್ಟಿಲ್ಲ' ಎಂದು ಮಾಜಿ ಸಚಿವ ಡಾ.ಎಚ್.ಸಿ ಮಹದೇವಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಎಚ್.ಸಿ ಮಹದೇವಪ್ಪ ಅವರ ಟ್ವೀಟ್ ಇಂತಿದೆ...

ತುಮಕೂರಿನಲ್ಲಿ ಮೊನ್ನೆ ಇಬ್ಬರು ದಲಿತ ಯುವಕರಿಗೆ ಕಿರುಕುಳ ನೀಡಿ ಹತ್ಯೆ ಭೀಕರವಾಗಿ ಮಾಡಲಾಗಿದೆ. ತುಮಕೂರಿನ ಗಿರೀಶ್ ಮೂಡಲ ಗಿರಿಯಪ್ಪ ಮತ್ತು ಮಂಚಲದೊರೆ ನಿವಾಸಿ  ಗಿರೀಶ್ ಎಂಬುವರು ಹತ್ಯೆಯಾಗಿದ್ದು ಈ ಪೈಕಿ ಮೂಡಲಗಿರಿಯಪ್ಪನ ಮೃತದೇಹ ಹೊಲದಲ್ಲಿ ಪತ್ತೆಯಾಗಿದ್ದರೆ, ಮತ್ತೊಬ್ಬರ ದೇಹವನ್ನು ಕೆರೆಯಲ್ಲಿ ಬಿಸಾಡಿ ಹೋಗಿದ್ದಾರೆ.

ಗುರುವಾರ ರಾತ್ರಿ ಗ್ರಾಮಸ್ಥರು ಸ್ಥಳೀಯ ದೇವರ ಉತ್ಸವ ನಡೆಸುತ್ತಿದ್ದಾಗ ಪ್ರಕರಣದ ಪ್ರಮುಖ ಆರೋಪಿಯಾದ ನಂದೀಶ್ ಎಂಬುವನು ಮೃತ ಗಿರೀಶ್ ಅವರ ಮನೆಗೆ ಹೋಗಿ, ಮನವೊಲಿಸಿ ಕರೆದುಕೊಂಡು ಬಂದಿದ್ದಾನೆ. ನಂತರ ತನ್ನ ಸ್ನೇಹಿತರು ಕಾಯುತ್ತಿದ್ದ ಸ್ಥಳಕ್ಕೆ ಕರೆದುಕೊಂಡು ಹೋಗಿದ್ದು, ಹಂತಕರು ಆತನಿಗೆ ಒಣಗಿದ ತೆಂಗಿನ ಮರದ ಗರಿಗಳಿಗೆ ಬೆಂಕಿ ಹಚ್ಚಿ ದಲಿತ ಯುವಕರಿಗೆ ಸುಡುವ ಮೂಲಕ ಕಿರುಕುಳ ನೀಡಿದ್ದಾರೆ. ತದನಂತರ ಕ್ಲಬ್ ಗೆ ಕರೆದೊಯ್ಡು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಮೂಡಲಗಿರಿಯಪ್ಪ ಸ್ಥಳದಲ್ಲಿಯೇ ಮೃತಪಟ್ಟರೆ, ಮತ್ತೋರ್ವ ಗಿರೀಶ್ ಮೃತದೇಹ ಕೆರೆಯಲ್ಲಿ ಪತ್ತೆಯಾಗಿದೆ.

ಇಷ್ಟಾದರೂ ಕೂಡಾ ಇಲ್ಲಿಯವರೆಗೂ ಯಾವೊಬ್ಬ ಹಿಂದುತ್ವ ಸಂಘಟನೆಯವನೂ ಕೂಡಾ ಈ ಬಗ್ಗೆ ಏನಾಗಿದೆ ಎಂದು ಬಾಯಿ ಬಿಟ್ಟಿಲ್ಲ. ಅವರೆಲ್ಲರೂ ಯಾರದ್ದೋ ಮನೆಯ ಮೇಲೆ ಬುಲ್ಡೋಜರ್ ಹತ್ತಿಸುವ ಸಿದ್ಧತೆಯಲ್ಲಿ ಇದ್ದಾರೆ.

'ಇನ್ನು ಈ ಹಿಂದೆ ನಮ್ಮ ದೇವನೂರು ಮಹಾದೇವ ಅವರು ಹೇಳಿದಂತೆ " ದಲಿತರು ಸತ್ತಾಗ ಯಾವ ಪ್ರಾಣಿ ದಯಾ ಸಂಘದವರೂ ಬರಲಿಲ್ಲ" ಎನ್ನುವ ಮಾತು ಈ ಪ್ರಕರಣಕ್ಕೆ ಸರಿಯಾಗಿ ಹೊಂದುತ್ತಿದೆ. ಆದರೂ ಯಾರಿಗೂ ಲೆಕ್ಕಕ್ಕೆ ಇಲ್ಲದ ಈ ಸಾವುಗಳು ನನ್ನಲ್ಲಿ ತೀವ್ರ ಬೇಸರ ಮತ್ತು ಅಸಹಾಯಕತೆಯನ್ನು ಮೂಡಿಸಿವೆ. ಹಿಂದೂ ಹಿಂದೂ ನಾವೆಲ್ಲಾ ಮುನ್ನೂರಾ ಒಂದು ಎಂದು ಅಷ್ಟಿಲ್ಲದೇ ನಾನು ಹೇಳುತ್ತೇನೆಯೇ?'  ಎಂದು ಸಂಘಪರಿವಾರವನ್ನು ಎಚ್.ಸಿ ಮಹದೇವಪ್ಪ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News