×
Ad

ಗುತ್ತಿಗೆದಾರರಿಗೆ ಸಕಾಲದಲ್ಲಿ ಹಣ ಪಾವತಿಸಿ: ಹೈಕೋರ್ಟ್

Update: 2022-04-24 23:18 IST

ಬೆಂಗಳೂರು, ಎ.24: ಕಾಲಮಿತಿ, ಯಾವುದೇ ಲೋಪವಿಲ್ಲದೆ ಕಾಮಗಾರಿ ಪೂರ್ಣಗೊಳಿಸಿದ ಸಂದರ್ಭದಲ್ಲಿ ಗುತ್ತಿಗೆದಾರರಿಗೆ ಸಕಾಲದಲ್ಲಿ ಹಣ ಪಾವತಿಸಬೇಕು ಎಂದು ರಾಜ್ಯ ಸರಕಾರ ಹಾಗೂ ಸರಕಾರದ ಅಧೀನ ಸಂಸ್ಥೆಗಳಿಗೆ ಹೈಕೋರ್ಟ್ ಆದೇಶಿಸಿದೆ.

ಬ್ಯಾಟರಾಯನಪುರ ಮತ್ತು ಯಲಹಂಕ ವಿಭಾಗದಲ್ಲಿ ಯಾವುದೇ ಲೋಪವಿಲ್ಲದೆ ಬಿಬಿಎಂಪಿಯ ಗುತ್ತಿಗೆ ಕಾಮಗಾರಿಗಳನ್ನು ಪೂರ್ಣಗೊಳಿಸಿ ಹಲವು ತಿಂಗಳು ಕಳೆದಿದ್ದರೂ ಹಣ ಬಿಡುಗಡೆ ಮಾಡಿಲ್ಲ ಎಂದು ಆರೋಪಿಸಿ ಗುತ್ತಿಗೆದಾರರಾದ ಬಿ.ಬಿ.ಉಮೇಶ್ ಹಾಗೂ ಇತರರು ಅರ್ಜಿ ಸಲ್ಲಿಸಿದ್ದರು.

ಅರ್ಜಿಗಳನ್ನು ವಿಚಾರಣೆ ನಡೆಸಿದ ಹೈಕೋರ್ಟ್ ಏಕಸದಸ್ಯ ನ್ಯಾಯಪೀಠ, ಯಾವುದೇ ಲೋಪವಿಲ್ಲದೆ ಕಾಮಗಾರಿ ಪೂರ್ಣಗೊಳಿಸಿದ್ದರೂ ಗುತ್ತಿಗೆ ಹಣ ಪಾತಿಸುತ್ತಿಲ್ಲ ಎಂದು ಆಕ್ಷೇಪಿಸಿ ಗುತ್ತಿಗೆದಾರರು ಕೋರ್ಟ್ ಮೆಟ್ಟಿಲೇರುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ.

ಸರಕಾರ ಮತ್ತು ಸರಕಾರಿ ಸಂಸ್ಥೆಗಳು ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು. ಸಂವಿಧಾನದ ಹೊಣೆಗಾರಿಕೆ ನಿರ್ವಹಣೆಯಲ್ಲಿ ಸ್ಥಿರತೆ ಕಾಯ್ದುಕೊಳ್ಳಬೇಕು. ಗುತ್ತಿಗೆ ಹಣ ಪಾವತಿಸದೆ ವಿಳಂಬ ಮಾಡುತ್ತಾ ಅಪ್ರಮಾಣಿಕತೆ ಪ್ರದರ್ಶಿಸಬಾರದು. ಗುತ್ತಿಗೆದಾರರಿಗೆ ಸಕಾಲದಲ್ಲಿ ಹಣ ಪಾವತಿಸಬೇಕು ಎಂದು ನಿರ್ದೇಶಿಸಿದೆ.

ಗುತ್ತಿಗೆದಾರರು ಕಾಮಗಾರಿ ಮುಗಿಸಲು ಸಾಲ ಮಾಡಿರುವ ಸಾಧ್ಯತೆಗಳೂ ಇರುತ್ತವೆ. ಇಂತಹ ಪರಿಸ್ಥಿತಿಯಲ್ಲಿ ಕಾಮಗಾರಿ ಪೂರ್ಣಗೊಳಿಸಿದ್ದರೂ ಹಾಗೂ ಅದನ್ನು ಸಂಬಂಧಿತ ಸಂಸ್ಥೆ ದೃಢೀಕರಿಸಿ ಪ್ರಮಾಣ ಪತ್ರ ನೀಡಿದ ನಂತರವೂ ಹಣ ಬಿಡುಗಡೆಗೆ ವಿಳಂಬ ಮಾಡುವುದು ನ್ಯಾಯಸಮ್ಮತವಲ್ಲ. ಹಣಕ್ಕಾಗಿ ಗುತ್ತಿಗೆದಾರರು ಕೋರ್ಟ್ ಮೆಟ್ಟಿಲೇರಿ ಕಾನೂನು ಹೋರಾಟ ನಡೆಸುವ ಪರಿಸ್ಥಿತಿ ಸೃಷ್ಟಿಸಬಾರದು ಎಂದು ಪೀಠ ಸರಕಾರಕ್ಕೆ ಸೂಚಿಸಿದೆ.

ಇನ್ನು ಬಿಬಿಎಂಪಿ ನ್ಯಾಯಾಲಯಕ್ಕೆ ನೀಡಿರುವ ಭರವಸೆಯಂತೆ ಅರ್ಜಿದಾರರಿಗೆ ಶೀಘ್ರ ಹಣ ಬಿಡುಗಡೆ ಮಾಡಬೇಕು. ಒಂದೊಮ್ಮೆ ವಿಳಂಬವಾದರೆ ಗುತ್ತಿಗೆದಾರರಿಗೆ ಹಣ ಬಿಡುಗಡೆ ಮಾಡಬೇಕಿದ್ದ ದಿನದಿಂದ ಪ್ರತಿ ತಿಂಗಳಿಗೆ ಶೇ.2ರಷ್ಟು ಬಡ್ಡಿ ಪಾವತಿಸಬೇಕು. ಆ ಹಣವನ್ನು ಪ್ರಕರಣದಲ್ಲಿ ತಪ್ಪಿತಸ್ಥರಾಗಿರುವ ಅಧಿಕಾರಿಗಳಿಂದ ವಸೂಲಿ ಮಾಡಬೇಕು. ಈ ಆದೇಶ ಪಾಲಿಸಿದ ಬಗ್ಗೆ ಎರಡು ವಾರದಲ್ಲಿ ರಿಜಿಸ್ಟ್ರಾರ್ ಜನರಲ್‍ಗೆ ವರದಿ ಸಲ್ಲಿಸಬೇಕು ಎಂದು ಬಿಬಿಎಂಪಿಗೆ ನಿರ್ದೇಶಿಸಿದೆ. ಆದೇಶ ಪಾಲಿಸಲು ತಪ್ಪಿದರೆ ನ್ಯಾಯಾಂಗ ನಿಂದನೆ ಅಡಿ ಕ್ರಮ ಜರುಗಿಸುವುದಾಗಿಯೂ ಎಚ್ಚರಿಕೆ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News