ಓ ಮೆಣಸೇ....

Update: 2022-04-24 19:30 GMT

ಬಿಜೆಪಿ ತನ್ನ ತಪ್ಪನ್ನು ಸಮರ್ಥಿಸಿಕೊಳ್ಳುವುದು ಕೆಟ್ಟ ಬೆಳವಣಿಗೆ -ಡಾ.ಜಿ.ಪರಮೇಶ್ವರ್, ಮಾಜಿ ಡಿಸಿಎಂ
ಇತ್ತೀಚೆಗೆ ಬಿಜೆಪಿಯ ತಪ್ಪುಗಳನ್ನು ಕಾಂಗ್ರೆಸ್ ನಾಯಕರು ಸಮರ್ಥಿಸುತ್ತಿದ್ದಾರಲ್ಲ, ಇದು ಯಾವ ಬೆಳವಣಿಗೆ?

ನಾನು ಯಾವ ಪಕ್ಷದವರ ವಿರುದ್ಧವೂ ಪರ್ಸೆಂಟೇಜ್ ಆರೋಪ ಮಾಡುವುದಿಲ್ಲ -ದೇವೇಗೌಡ, ಮಾಜಿ ಪ್ರಧಾನಿ
ಬಹುಶಃ ನಿಮ್ಮ ಪರ್ಸೆಂಟೇಜ್ ವಿವರ ಹೊರಬೀಳುವ ಭಯವಿರಬೇಕು.

ಮುಂದಿನ ಚುನಾವಣೆ ತಯಾರಿಗಾಗಿ ಕಾಂಗ್ರೆಸ್‌ನವರು ಈಶ್ವರಪ್ಪರನ್ನು ಟಾರ್ಗೆಟ್ ಮಾಡುತ್ತಿದ್ದಾರೆ -ಆರ್.ಅಶೋಕ್, ಸಚಿವ
ಆತ್ಮಹತ್ಯೆ ಪತ್ರದಲ್ಲಿ ಈಶ್ವರಪ್ಪರ ಹೆಸರನ್ನು ಕಾಂಗ್ರೆಸ್‌ನವರೇ ಬರೆದಿರಬಹುದೆ?

ರಾಜ್ಯದಲ್ಲಿ ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರಲು ಪ್ರಧಾನಿ ಮೋದಿ ಹೆಸರೊಂದೇ ಸಾಲದು -ಬಿ.ಎಲ್.ಸಂತೋಷ್, ಬಿಜೆಪಿ ನಾಯಕ
ಶೇ.40 ಪರ್ಸೆಂಟೇಜ್‌ನಲ್ಲಿ ನಿಮ್ಮ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಎಷ್ಟು ಕೊಡಬೇಕು, ಹೇಳಿ.

5 ವರ್ಷ ಜೆಡಿಎಸ್‌ಗೆ ಅಧಿಕಾರ ಕೊಡಿ, 75 ವರ್ಷಗಳಿಂದ ರಾಜ್ಯಕ್ಕೆ ಆಗಿರುವ ಅನ್ಯಾಯವನ್ನು ಸರಿಪಡಿಸುತ್ತೇನೆ -ಎಚ್.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ
ಬಿಜೆಪಿ ತನ್ನ ಏಳು ವರ್ಷಗಳಲ್ಲಿ ರಾಜ್ಯಕ್ಕೆ ಮಾಡಿದ ಅನ್ಯಾಯವನ್ನು ಸರಿಪಡಿಸುವ ಉತ್ಸಾಹವೇಕೆ ಇಲ್ಲ?

ಕಾಂಗ್ರೆಸ್ ಹೇಳಿದವರನ್ನೆಲ್ಲ ಬಂಧಿಸುತ್ತಾ ಹೋದರೆ ಅವರನ್ನು ಇಡಲು ರಾಜ್ಯದ ಜೈಲುಗಳು ಸಾಕಾಗುವುದಿಲ್ಲ -ಕೋಟ ಶ್ರೀನಿವಾಸ ಪುಜಾರಿ, ಸಚಿವ
ರೆಸಾರ್ಟ್‌ಗಳನ್ನೇ ಜೈಲುಗಳನ್ನಾಗಿ ಪರಿವರ್ತಿಸಿದರೆ ಹೇಗೆ?

ಸಣ್ಣ ಸಣ್ಣ ವಿಷಯಕ್ಕೆ ಮುಸ್ಲಿಮರು ಕೆರಳದಂತೆ ಸಮುದಾಯದ ಮುಖಂಡರು ಅವರಿಗೆ ತಿಳಿ ಹೇಳಬೇಕು -ಸಿ.ಟಿ.ರವಿ, ಶಾಸಕ
ಒಟ್ಟಿನಲ್ಲಿ ಕೆರಳಿಸುವುದು ನಿಮ್ಮ ಹಕ್ಕು , ಅಲ್ಲವೆ?

ಇನ್ನು ಮುಂದೆ ಜೆಡಿಎಸ್ ಪಕ್ಷವನ್ನು ಯಾರೂ ಒಕ್ಕಲಿಗ ಪಕ್ಷ ಎಂದು ಹೇಳಬಾರದು -ದೇವೇಗೌಡ, ಮಾಜಿ ಪ್ರಧಾನಿ
ಅಪ್ಪ-ಮಕ್ಕಳ ಪಕ್ಷ ಎಂದು ಅಧಿಕೃತವಾಗಿ ಘೋಷಿಸಲಾಗುತ್ತದೆಯೆ?

ಮೇ 4ರ ಬಳಿಕ ನಮ್ಮ (ಜೆಡಿಎಸ್) ಕೆಲಸ ಆರಂಭವಾದರೆ ವಿಧಾನಸಭೆ ಚುನಾವಣೆ ಬಳಿಕ ನಿಲ್ಲಲಿದೆ -ಸಿ.ಎಂ.ಇಬ್ರಾಹೀಂ, ಜೆಡಿಎಸ್ ಅಧ್ಯಕ್ಷ
ಚುನಾವಣೆಯಲ್ಲಿ ಗೆದ್ದ ಬಳಿಕ ಜನರ ಕೆಲಸ ಮಾಡುವ ಅಗತ್ಯವಾದರೂ ಏನಿದೆ?

ಗೃಹ ಸಚಿವರು ಆ ಹುದ್ದೆಗೆ ತಕ್ಕಂತೆ ಖಡಕ್ ಇಲ್ಲದಿರುವುದರಿಂದ ಅವರನ್ನು ಶೀಘ್ರ ಬದಲಿಸಬೇಕು -ಬಸನಗೌಡ ಪಾಟೀಲ್ ಯತ್ನಾಳ್, ಶಾಸಕ
ಮನೆ ಒಡೆಯುವ ಕೆಲಸವನ್ನು ಪರಿಣಾಮಕಾರಿಯಾಗಿ ಮಾಡುತ್ತಿಲ್ಲ ಎನ್ನುವ ಖೇದವಿರಬೇಕು.

ದೇಶದ ಪ್ರತಿಯೊಬ್ಬ ನಾಗರಿಕರಿಗೂ ಅವರವರಿಗೆ ಇಷ್ಟದ ಆಹಾರವನ್ನು ತಿನ್ನಲು ಸ್ವಾತಂತ್ರವಿದೆ -ಮುಖ್ತಾರ್ ಅಬ್ಬಾಸ್ ನಖ್ವಿ, ಕೇಂದ್ರ ಸಚಿವ
ಆಹಾರವನ್ನೆಲ್ಲ ಹಂತಹಂತವಾಗಿ ಕಿತ್ತುಕೊಂಡ ಬಳಿಕ ಮಾಡುವ ಸಮಾಧಾನವಿದು.

ಇ-ಸಂಜೀವಿನಿ ಸೇವೆಯಲ್ಲಿ ರಾಜ್ಯ ಮೈಲುಗಲ್ಲು ಸಾಧಿಸಿದೆ -ಡಾ.ಸುಧಾಕರ್, ಸಚಿವ
ಕೊರೋನದಿಂದ ಸತ್ತವರ ಸಂಖ್ಯೆ ನೋಡಿದರೆ ಗೋರಿಗಲ್ಲು ನೆನಪಾಗುತ್ತದೆ.

ಭಾರತ ಹಿಂದೂ ರಾಷ್ಟ್ರವಾಗಿ ಉಳಿಯಲು ಪ್ರತಿ ಹಿಂದೂ ದಂಪತಿ ಕನಿಷ್ಠ ನಾಲ್ಕು ಮಕ್ಕಳನ್ನು ಹೆರಬೇಕು -ಸಾದ್ವಿ ರಿತಂಬರಾ, ಹಿಂದುತ್ವವಾದಿ ನಾಯಕಿ
ಸನ್ಯಾಸತ್ವ ತ್ಯಜಿಸುವ ಉದ್ದೇಶವೇನಾದರೂ ಇದೆಯೆ?

ಮಾಜಿ ಸಚಿವ ಈಶ್ವರಪ್ಪರ ಮೇಲೆ ಶ್ರೀರಾಮ ದೇವರ ಶ್ರೀರಕ್ಷೆ ಸದಾ ಇರಲಿ -ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಪೇಜಾವರ ಮಠ
40 ಶೇಕಡ ಕಮಿಶನ್‌ನಲ್ಲಿ ನಿಮ್ಮ ಪಾಲೆಷ್ಟು?

ಕಳ್ಳನಿಗೆ ಸಹಾಯ ಮಾಡುವುದೇ ಜೆಡಿಎಸ್ ಸಂಸ್ಕೃತಿ -ಸಿದ್ದರಾಮಯ್ಯ, ಮಾಜಿ ಸಿಎಂ
ಕುಮಾರಸ್ವಾಮಿ ಮುಖ್ಯಮಂತ್ರಿಯಾಗಲು ಕಾಂಗ್ರೆಸ್ ಸಹಾಯ ಮಾಡಿರುವುದನ್ನು ನೆನಪಿಸಿಕೊಳ್ಳಿ.

ಮಠಗಳಿಂದ ಕಮಿಷನ್ ಪಡೆಯುವ ವಿಚಾರ ನನ್ನ ಕಣ್ಣಿಗಂತೂ ಗೋಚರಿಸಿಲ್ಲ -ಮುರುಗೇಶ್ ನಿರಾಣಿ, ಸಚಿವ
ಕಣ್ಣಿಗೆ ಕಾಣುವಂತೆ ಯಾರಾದರೂ ಕಮಿಷನ್ ಪಡೆಯುತ್ತಾರೆಯೆ?

ಸರಣಿ ಸೋಲುಗಳಿಂದ ಸೊರಗಿರುವ ಕಾಂಗ್ರೆಸ್‌ಗೆ ಪ್ರಶಾಂತ್ ಕಿಶೋರ್‌ರಂತಹ ಚುನಾವಣಾ ರಣತಂತ್ರ ನಿಪುಣರ ಅಗತ್ಯ ಇದೆ -ವೀರಪ್ಪ ಮೊಯ್ಲಿ, ಮಾಜಿ ಮುಖ್ಯಮಂತ್ರಿ
ಸರಣಿ ಸೋಲುಗಳಿಗೆ ಕಾರಣರಾಗಿರುವ ಕೆಲವು ಮಾಜಿಗಳನ್ನು ಕಾಂಗ್ರೆಸ್‌ನಿಂದ ಹೊರಗಿಡುವುದು ರಣತಂತ್ರದ ಮೊದಲ ಭಾಗವಾಗಬೇಕು.

ಶಾಲಾ ವಿದ್ಯಾರ್ಥಿಗಳಿಗೆ ಪ್ರಸಕ್ತ ಸಾಲಿನಿಂದ ನೈತಿಕ ಶಿಕ್ಷಣ ಬೋಧನೆ ಆರಂಭಿಸಲಾಗುವುದು -ಬಿ.ಸಿ.ನಾಗೇಶ್, ಸಚಿವ
ಅನೈತಿಕ ಸಿಡಿಗಳ ಮೂಲಕ ಸಿಕ್ಕಿ ಬಿದ್ದ ಬಿಜೆಪಿ ನಾಯಕರಿಗೆ ಈ ಬೋಧನೆಯ ಅಗತ್ಯ ತುಂಬಾ ಇದೆ.

ಧಾರ್ಮಿಕ ಕೇಂದ್ರಗಳು ಸಮಾಜ ವಿರೋಧಿ ಕೃತ್ಯಕ್ಕೆ ಬಳಸುವ ಸ್ಥಳವಲ್ಲ -ಸುನೀಲ್ ಕುಮಾರ್, ಸಚಿವ
ಮತ್ತೇಕೆ ಅವುಗಳನ್ನು ಸಮಾಜ ವಿರೋಧಿ ಕೃತ್ಯಕ್ಕೆ ಬಳಸುತ್ತಿದ್ದೀರಿ?

ರಶ್ಯ ಸೇನೆ ವಿಶ್ವದ ಅತ್ಯಂತ ಅನಾಗರಿಕ, ಅಮಾನವೀಯ ಸೇನೆಯಾಗಿ ವಿಶ್ವದ ಇತಿಹಾಸದಲ್ಲಿ ಗುರುತಿಸಲ್ಪಡಲಿದೆ -ವೊಲೊಡಿಮಿರ್ ಝೆಲೆನ್‌ಸ್ಕಿ, ಉಕ್ರೇನ್ ಅಧ್ಯಕ್ಷ
ಆದರೆ ಅದಕ್ಕಾಗಿ ಉಕ್ರೇನ್ ತೆರಬೇಕಾದ ಶುಲ್ಕ ಮಾತ್ರ ತುಂಬಾ ದುಬಾರಿಯಾದುದು.

ಉತ್ತರ ಪ್ರದೇಶ ಮಾದರಿಯಲ್ಲಿ ದೇಶದ್ರೋಹಿಗಳ ಹೆಡೆಮುರಿ ಕಟ್ಟುವ ಕೆಲಸವಾಗಬೇಕು -ರೇಣುಕಾಚಾರ್ಯ, ಶಾಸಕ
ಕೇರಳದ ಮಾದರಿಯಲ್ಲಿ ರಾಜ್ಯವನ್ನು ಅಭಿವೃದ್ಧಿಯ ಕಡೆಗೆ ಕೊಂಡೊಯ್ಯುವ ಬಗ್ಗೆ ಮಾತನಾಡಿ.

ರಾಷ್ಟ್ರಭಕ್ತಿ ಕಾಂಗ್ರೆಸ್‌ನವರ ರಕ್ತದ ಕಣದಲ್ಲಿ ಬೆರೆತಿದೆ -ಸಿದ್ದರಾಮಯ್ಯ, ಮಾಜಿ ಸಿಎಂ
ಯಾವ ಲ್ಯಾಬ್‌ನಲ್ಲಿ ಪರೀಕ್ಷೆ ಮಾಡಿಕೊಂಡಿರಿ?

ನನಗೆ ಗೃಹಖಾತೆ ಕೊಟ್ಟರೆ ಅದನ್ನು ಸಮರ್ಥವಾಗಿ ನಿಭಾಯಿಸುವ ಶಕ್ತಿ ಇದೆ -ಬಿ.ಸಿ.ಪಾಟೀಲ್, ಸಚಿವ
ಇರುವ ಖಾತೆಯನ್ನು ಎಷ್ಟರಮಟ್ಟಿಗೆ ನಿಭಾಯಿಸುತ್ತಿದ್ದೀರಿ, ಎನ್ನುವುದನ್ನು ಹೇಳಿ.

ಭಾರತದಲ್ಲಿ ಎಲ್ಲೆಡೆ ಸ್ವಾಗತಕ್ಕೆ ನನ್ನ ಪೋಸ್ಟರ್ ನೋಡಿ ನಾನೇ ಸಚಿನ್ ತೆಂಡೂಲ್ಕರ್, ಅಮಿತಾಬ್ ಬಚ್ಚನ್ ಆಗಿದ್ದೇನೆ ಎಂದು ಭಾಸವಾಯಿತು -ಬೋರಿಸ್ ಜಾನ್ಸನ್, ಬ್ರಿಟನ್ ಪ್ರಧಾನಿ
ನೀವೇ ಬಿತ್ತಿ ಹೋದ ಗುಲಾಮಗಿರಿಯ ಸಂಕೇತ ಅದು.

Writer - ಪಿ.ಎ.ರೈ

contributor

Editor - ಪಿ.ಎ.ರೈ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ…
ಓ ಮೆಣಸೇ
ಓ ಮೆಣಸೇ...!
ಓ ಮೆಣಸೇ...
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...