ಯಾವನ್ರೀ ಅವನು ಮುತಾಲಿಕ್? ಸರಕಾರ ಇಂಥವರ ಬಗ್ಗೆ ಕ್ರಮ ಕೈಗೊಳ್ಳೋಕೆ ಆಗಲ್ಲ ಅಂದ್ರೆ ಏನು?: ವಿಶ್ವನಾಥ್ ಕಿಡಿ
ಮೈಸೂರು, ಎ.25: "ಯಾವನ್ರೀ ಅವನು ಪ್ರಮೋದ್ ಮುತಾಲಿಕ್? ಒಂದು ಪಂಚಾಯತ್ ಮೆಂಬರ್ ಆಗಿದ್ದಾನ? ಅವನಿಗೆ ಏನ್ ಅನುಭವ ಇದೆ? ಸರಕಾರ ಇಂಥವರ ಬಗ್ಗೆ ಕ್ರಮ ಕೈಗೊಳ್ಳೋಕೆ ಆಗಲ್ಲ ಅಂದ್ರೆ ಏನು?" ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ವಿರುದ್ಧ ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಏಕವಚನದಲ್ಲಿ ಗುಡುಗಿದ್ದಾರೆ.
ಅಕ್ಷಯ ತೃತೀಯಕ್ಕೆ ಮುಸ್ಲಿಮರ ಚಿನ್ನಾಭರಣ ಮಳಿಗೆಗಳಿಂದ ಹಿಂದೂಗಳು ಚಿನ್ನಾಭರಣ ಖರೀದಿ ಮಾಡಬಾರದು ಎಂದು ಹೊಸ ಕ್ಯಾತೆ ತೆಗೆದಿರುವ ಪ್ರಮೋದ್ ಮುತಾಲಿಕ್ ಮತ್ತು ಸಂಘ ಪರಿವಾರದ ವಿರುದ್ಧ ಹರಿಹಾಯ್ದ ಎಚ್.ವಿಶ್ವನಾಥ್, "ಪ್ರಮೋದ್ ಮುತಾಲಿಕ್ ಯಾರು? ಅವನೇನು ಪಂಚಾಯತ್ ಮೆಂಬರ? ಅವನ ಮೇಲೆ ಕ್ರಮ ಕೈಗೊಳ್ಳೋಕೆ ಆಗಲ್ಲ ಎಂದರೆ ಏನು? ಇದೇನ್ 'ಮುತಾಲಿಕ್ ದೇಸಾಯಿ' ಸರಕಾರನಾ? ಆರೆಸ್ಸೆಸ್ ಸರಕಾರನಾ?, ವಿ.ಎಚ್.ಪಿ. ಸರಕಾರನ? ಮುತಾಲಿಕ್ ಸರಕಾರ ನಡೆಸುತ್ತಿದ್ದಾನ? ಜನತಂತ್ರ ವ್ಯವಸ್ಥೆಯಲ್ಲಿ ಸರಕಾರದ ಬಗ್ಗೆ ಏನ್ ಸಂದೇಶ ಹೋಗುತ್ತದೆ. ಮುಖ್ಯಮಂತ್ರಿ ಬೊಮ್ಮಾಯಿ ಅವರ ಇಂಥವರ ಬಗ್ಗೆ ಕ್ರಮ ಕೈಗೊಳ್ಳುವುದಕ್ಕೆ ಆಗಲ್ವ" ಎಂದು ಖಾರವಾಗಿ ಪ್ರಶ್ನಿಸಿದರು.
ರಾಜ್ಯದಲ್ಲಿ ಬುಲ್ಡೋಝರ್ ಪದ್ಧತಿ ಅನುಸರಿಸುವ ವಿಚಾರ ಕುರಿತು ಪ್ರತಿಕ್ರಿಯಿಸಿದ ಎಚ್.ವಿಶ್ವನಾಥ್, "ಬುಲ್ಡೋಝರ್ ಪದ್ಧತಿ ಅನುಸರಿಸುವುದು ಸರಿಯಲ್ಲ. ಸರಕಾರ ಜನರ ಬದುಕನ್ನು ಕಟ್ಟಬೇಕು. ಜನರ ಬದುಕನ್ನು ಕಸಿದುಕೊಳ್ಳಬಾರದು. ಸರಕಾರ ನಡೆಸುವವರು ಇತಿಹಾಸವನ್ನು ನೆನಪಿಸಿಕೊಳ್ಳಬೇಕು. ಇಲ್ಲವಾದರೆ ಸರಿಯಾದ ಬೆಲೆ ತೆರಬೇಕಾಗುತ್ತದೆ" ಎಂದು ಎಚ್ಚರಿಸಿದರು.