499 ನ್ಯಾಯಾಧೀಶರ ವರ್ಗಾವಣೆ: ಹೈಕೋರ್ಟ್ ಆದೇಶ
ಬೆಂಗಳೂರು, ಎ.25: ಹಿರಿಯ ಜಿಲ್ಲಾ ನ್ಯಾಯಾಧೀಶರು ಸೇರಿದಂತೆ ನ್ಯಾಯಾಂಗದ ನಾನಾ ವೃಂದಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 499 ನ್ಯಾಯಾಧೀಶರನ್ನು ವರ್ಗಾವಣೆ ಮಾಡಲಾಗಿದೆ. ಈ ಕುರಿತು ಸಿಜೆ ಅವರ ನಿರ್ದೇಶನದ ಮೇರೆಗೆ ರಿಜಿಸ್ಟ್ರ್ರಾರ್ ಜನರಲ್ ಟಿ.ಜಿ.ಶಿವಶಂಕರೇಗೌಡ ಆದೇಶ ಹೊರಡಿಸಿದ್ದಾರೆ.
ಅದರಂತೆ 16 ಜಿಲ್ಲಾ ಹಿರಿಯ ನ್ಯಾಯಾಧೀಶರನ್ನು ವರ್ಗಾವಣೆ ಮಾಡಲಾಗಿದೆ. ಹಿರಿಯ ಜಿಲ್ಲಾ ನ್ಯಾಯಾಧೀಶ ಕೆ.ಎಸ್. ಭರತ್ ಕುಮಾರ್ ಅವರನ್ನು ರಿಜಿಸ್ಟ್ರಾರ್ (ವಿಚಕ್ಷಣಾ) ಆಗಿ ನೇಮಕ ಮಾಡಲಾಗಿದೆ, ಮತ್ತೊರ್ವ ಹಿರಿಯ ಜಿಲ್ಲಾ ನ್ಯಾಯಾಧೀಶ ಜೈಶಂಕರ್ ಅವರನ್ನು ರಿಜಿಸ್ಟ್ರಾರ್ ಜನರಲ್ ನ್ಯಾಯಾಂಗ ಹುದ್ದೆಗೆ ನೇಮಕ ಮಾಡಲಾಗಿದೆ. ಈ ಎಲ್ಲ ವರ್ಗಾವಣೆ ಆದೇಶ ಮೇ. 23ರಿಂದ ಜಾರಿಗೆ ಬರಲಿವೆ.
ಪ್ರತಿವರ್ಷ ಹೈಕೋರ್ಟ್‍ಗೆ ಬೇಸಿಗೆ ರಜೆ ಆರಂಭವಾಗುವ ಹೊತ್ತಿನಲ್ಲಿ ಜಿಲ್ಲಾ ಮತ್ತು ತಾಲೂಕು ಕೋರ್ಟ್‍ಗಳಲ್ಲಿ ಕಾರ್ಯನಿರ್ವಹಿಸುವ ನ್ಯಾಯಾಂಗ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ. ಬಹುತೇಕ ಒಂದೇ ಸ್ಥಳದಲ್ಲಿ ಮೂರು ವರ್ಷ ಸೇವೆ ಸಲ್ಲಿಸಿದ್ದರೆ ವರ್ಗಾವಣೆ ಮಾಡುವುದು ನಿಶ್ಚಿತ. ಅದರಂತೆ ಈ ವರ್ಷವೂ ನಾನಾ ಹಂತದಲ್ಲಿ 499 ನ್ಯಾಯಾಂಗ ಅಧಿಕಾರಿಗಳನ್ನು ಅವರ ಹೆಸರಿನ ಮುಂದೆ ಸೂಚಿಸಿರುವ ಸ್ಥಳಗಳಿಗೆ ವರ್ಗಾವಣೆ ಮಾಡಲಾಗಿದೆ.
ವರ್ಗಾವಣೆ ಆದೇಶ ಹಾಗೂ ಹೆಚ್ಚಿನ ವಿವರಗಳು ಹೈಕೋರ್ಟ್ ವೆಬ್‍ಸೈಟ್‍ನಲ್ಲಿ ಲಭ್ಯವಿದೆ. ವರ್ಗಾವಣೆಯಾಗಿರುವವರಲ್ಲಿ 16 ಮಂದಿ ಹಿರಿಯ ಜಿಲ್ಲಾ ನ್ಯಾಯಾಧೀಶರು, 127 ಮಂದಿ ಜಿಲ್ಲಾ ನ್ಯಾಯಾಧೀಶರು ಮತ್ತು 117 ಮಂದಿ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು 239 ಸಿವಿಲ್ ನ್ಯಾಯಾಧೀಶರು ಸೇರಿದ್ದಾರೆ.