ಪಿಎಸ್ ಐ ನೇಮಕಾತಿ ಅಕ್ರಮ: ಆರೋಪಿಗಳಿಗೆ ನಿರೀಕ್ಷಣಾ ಜಾಮೀನು ನೀಡದಂತೆ ಸಿಐಡಿಯಿಂದ ಅರ್ಜಿ
ಬೆಂಗಳೂರು, ಎ.25: ಪಿಎಸ್ಸೈ ನೇಮಕಾತಿ ಅಕ್ರಮ ಪ್ರಕರಣದ ರೂವಾರಿ ಎನ್ನಲಾದ ದಿವ್ಯಾ ಹಾಗರಗಿ ಹಾಗೂ ಈಕೆಯ ಸಹಚರರಿಗೆ ನಿರೀಕ್ಷಣಾ ಜಾಮೀನು ನೀಡದಂತೆ ಸಿಐಡಿ ಅಧಿಕಾರಿಗಳು ನ್ಯಾಯಾಲಯಕ್ಕೆ ತಕರಾರು ಅರ್ಜಿ ಸಲ್ಲಿಸಿದ್ದಾರೆ ಎಂದು ವರದಿಯಾಗಿದೆ.
ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ತಲೆಮರೆಸಿಕೊಂಡಿರುವ ಆರೋಪಿ ದಿವ್ಯಾ ಹಾಗರಗಿ ಹಾಗೂ ಈಕೆಯ ಶಾಲೆಯ ಪ್ರಾಂಶುಪಾಲ ಕಾಶಿನಾಥ್ ಮತ್ತು ಮಂಜುನಾಥ ಮೇಳಕುಂದಿ, ಅರ್ಚನಾ ಹೊನಗೇರಿ, ಸುನಂದಾ ಅಜ್ಞಾತ ಸ್ಥಳಕ್ಕೆ ತೆರಳಿದ್ದಾರೆ ಎನ್ನಲಾಗಿದೆ.
ಇದೀಗ ನೀರಿಕ್ಷಣಾ ಜಾಮೀನು ಕೋರಿ ಕಲಬುರ್ಗಿ ಜಿಲ್ಲಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಆದರೆ, ಪ್ರಕರಣ ಗಂಭೀರ ಸ್ವರೂಪ ಪಡೆದುಕೊಂಡಿದ್ದು, ಆರೋಪಿಗಳ ಪಾತ್ರವೂ ದೊಡ್ಡದಾಗಿರುವ ದೂರುಗಳು ಕೇಳಿಬಂದಿರುವ ಕಾರಣಕ್ಕಾಗಿ ನಿರೀಕ್ಷಣಾ ಜಾಮೀನಿಗೆ ಸಿಐಡಿ ತಕರಾರು ಅರ್ಜಿ ಸಲ್ಲಿಸಿದೆ.
ಇದು ಸಂಘಟಿತ ಅಪರಾಧ, ಜಾಮೀನು ಮಂಜೂರು ಆದರೆ, ಸಾಕ್ಷಿ ನಾಶಪಡಿಸುವ ಸಾಧ್ಯತೆ ಇದೆ. ಕಾರಣ ಈ ಐವರಿಗೆ ನಿರೀಕ್ಷಣಾ ಜಾಮೀನು ನೀಡಬೇಡಿ ಎಂದು ಕಲಬುರ್ಗಿಯ ಒಂದನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯಕ್ಕೆ ಸಿಐಡಿ ತಕರಾರು ಅರ್ಜಿ ಸಲ್ಲಿಸಿದೆ.
ತನಿಖೆ ಚುರುಕು: ಪ್ರಕರಣದ ತನಿಖೆಯನ್ನು ಸಿಐಡಿ ಮತ್ತಷ್ಟು ತೀವ್ರಗೊಳಿಸಿದ್ದು, ಸಿಐಡಿ ಉನ್ನತ ಮಟ್ಟದ ಅಧಿಕಾರಿಗಳು ಕಲಬುರ್ಗಿಯಲ್ಲಿಯೇ ವಾಸ್ತವ್ಯ ಹೂಡಿ ತನಿಖೆ ಮುಂದುವರೆಸಿದ್ದಾರೆ.
ಬಂಧನಕ್ಕೆ ಒಳಗಾಗಿರುವ ರುದ್ರೇ ಗೌಡ ಅನ್ನು ವಿಚಾರಣೆ ನಡೆಸಲಾಗಿದೆ. ಈತ ಪಿಎಸ್ಸೈ ನೇಮಕಾತಿ ಪರೀಕ್ಷೆಯಲ್ಲದೇ ಎಫ್‍ಡಿಎ, ಎಸ್‍ಡಿಎ, ಸಹಾಯಕ ಇಂಜಿನಿಯರ್ ಹುದ್ದೆ ಸೇರಿ ವಿವಿಧ ನೇಮಕಾತಿ ಪರೀಕ್ಷೆಗಳಲ್ಲಿ ರುದ್ರೇಗೌಡ ಡಿ.ಪಾಟೀಲ ಮತ್ತವರ ತಂಡ ಕ್ರಮ ಎಸಗಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಅಭ್ಯರ್ಥಿಗಳು ಹಾಜರು
ಪರೀಕ್ಷೆ ಅಕ್ರಮ ಪ್ರಕರಣ ಸಂಬಂಧ ಸೋಮವಾರವೂ ಪಿಎಸ್ಸೈ ಪರೀಕ್ಷೆಯಲ್ಲಿ ಉತ್ತೀರ್ಣರಾದ ಹಲವು ಅಭ್ಯರ್ಥಿಗಳು ಇಲ್ಲಿನ ಸಿಐಡಿ ಕಚೇರಿಗೆ ವಿಚಾರಣೆಗೆ ಹಾಜರಾಗಿ, ತಮ್ಮ ಹೇಳಿಕೆ ಮತ್ತು ಓಎಂಆರ್ ಪ್ರತಿಯನ್ನು ಸಲ್ಲಿಕೆ ಮಾಡಿದರು.
ಪ್ರಿಯಾಂಕ್ ಖರ್ಗೆ ಗೈರು
ಪ್ರಕರಣ ಸಂಬಂಧ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಅವರು ಸೋಮವಾರ ಸಿಐಡಿ ವಿಚಾರಣೆಗೆ ಗೈರಾಗಿದ್ದಾರೆ. ಎರಡು ದಿನಗಳ ಹಿಂದೆ ನೋಟಿಸ್ ನೀಡಿದ್ದ ಸಿಐಡಿ ಎ.25ರಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿ ಪ್ರಿಯಾಂಕ್ ಖರ್ಗೆ ಅವರಿಗೆ ನೋಟಿಸ್ ನೀಡಲಾಗಿತ್ತು. ಆದರೆ, ಅವರು ಹಾಜರಾಗಲಿಲ್ಲ. ಲಿಖಿತ ಪತ್ರದ ರೂಪದಲ್ಲಿಯೇ ಉತ್ತರಿಸುವುದಾಗಿ ಅವರು ಹೇಳಿಕೆ ನೀಡಿರುವುದಾಗಿ ತಿಳಿದುಬಂದಿದೆ.