×
Ad

ಪ್ರಿಯಾಂಕ್ ಖರ್ಗೆ ಫಲಾಯನವಾದ ನೀತಿ ಅನುಸರಿಸುತ್ತಿದ್ದಾರೆ: ಗೃಹ ಸಚಿವ ಆರಗ ಜ್ಞಾನೇಂದ್ರ

Update: 2022-04-25 22:35 IST

ಬೆಂಗಳೂರು, ಎ. 25: ‘ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಅವರು ತಮ್ಮ ಬಳಿ ಇರಬಹುದಾದ ಪಿಎಸ್ಸೈ ಹುದ್ದೆಗಳ ಅಕ್ರಮ ನೇಮಕಾತಿಗೆ ಸಂಬಂಧಿಸಿದಂತೆ ಸಾಕ್ಷ್ಯಾಧಾರಗಳನ್ನು ಹಾಗೂ ಮಾಹಿತಿಗಳನ್ನು ಸಿಐಡಿ ಅಧಿಕಾರಿಗಳ ಜೊತೆಗೆ ಹಂಚಿಕೊಳ್ಳಬೇಕೆಂದು ಅವರಿಗೆ ನೋಟಿಸ್ ನೀಡಲಾಗಿದೆ' ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಇಂದಿಲ್ಲಿ ಸ್ಪಷ್ಟಣೆ ನೀಡಿದ್ದಾರೆ.

ಸೋಮವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಮಾಜಿ ಸಚಿವರು ಹಾಗೂ ಹಾಲಿ ಶಾಸಕರೂ ಆಗಿರುವ ಪ್ರಿಯಾಂಕ್ ಅವರು, ತಮ್ಮ ಬಳಿ ಅಕ್ರಮ ನೇಮಕಾತಿಗೆ ಸಂಬಂಧಿಸಿದಂತೆ ಬಹಳಷ್ಟು ಸಾಕ್ಷ್ಯಾಧಾರಗಳೂ, ವ್ಯಕ್ತಿಗಳ ಹೆಸರುಗಳು ಗೊತ್ತು ಎಂದು ಮುಂದೆ ಬಿಂಬಿಸಿಕೊಂಡಿದ್ದರು. ಆದರೆ, ಇದೀಗ ಸಿಐಡಿ ಅಧಿಕಾರಿಗಳ ಮುಂದೆ ಹಾಜರಾಗಲು ಹಿಂಜರಿಯುತ್ತಿದ್ದಾರೆ' ಎಂದು ಟೀಕಿಸಿದರು. 

‘ಅವರು ತಮ್ಮ ಹೊಣೆಗಾರಿಕೆಯನ್ನು ಮರೆತು, ತಮ್ಮಲ್ಲಿ ಯಾವುದೇ ಸಾಕ್ಷ್ಯಾಧಾರಗಳಿಲ್ಲ, ಕೇವಲ ಸಾಮಾಜಿಕ ಜಾಲತಾಣದಲ್ಲಿರುವ ಮಾಹಿತಿಯನ್ನು ಮಾತ್ರ ಪ್ರಕಟಿಸಿದ್ದೆ ಎಂಬ ಬಾಲಿಶ ಹೇಳಿಕೆ ನೀಡಿದ್ದಾರೆ. ಸಿಐಡಿ ಅಧಿಕಾರಿಗಳ ಮುಂದೆ ಹಾಜರಾಗಿ ಪ್ರಿಯಾಂಕ್ ಖರ್ಗೆಯವರು ತನಿಖೆಗೆ ಸಹಕರಿಸುವುದರ ಬದಲು, ಪಲಾಯನವಾದ ನೀತಿಯನ್ನು ಅನುಸರಿಸಿದ್ದಾರೆ' ಎಂದು ಆರಗ ಜ್ಞಾನೇಂದ್ರ ದೂರಿದರು.

‘ಪ್ರಾಮಾಣಿಕವಾಗಿ ಪರೀಕ್ಷೆ ಬರೆದರೂ, ಹುದ್ದೆಯಿಂದ ವಂಚಿತರಾದ ಅಭ್ಯರ್ಥಿಗಳಿಗೆ, ನ್ಯಾಯ ಒದಗಿಸಲು, ಸಿಐಡಿ ತನಿಖೆಗೆ ನಾನೇ ಸ್ವತಃ ಆಸಕ್ತಿ ತೋರಿಸಿ, ಮುಖ್ಯಮಂತ್ರಿ ಜತೆ ಸಮಾಲೋಚಿಸಿ, ತನಿಖೆಗೆ ಆದೇಶ ನೀಡಿದ್ದೆ. ಬಡ ಕುಟುಂಬದಿಂದ ಬಂದಂತಹ ಸಾವಿರಾರು ಪ್ರಾಮಾಣಿಕ ಹಾಗೂ ಪ್ರತಿಭಾವಂತ ಆಕಾಂಕ್ಷಿಗಳು, ಮೂಲೆ ಗುಂಪಾದರೆ, ಸಮಾಜಕ್ಕೆ ಆಗುವ ನಷ್ಟದ ಅಂದಾಜನ್ನು ಮಲ್ಲಿಕಾರ್ಜುನ ಖರ್ಗೆಯವರು, ಅರಿಯಬೇಕಿತ್ತು' ಎಂದು ಆರಗ ಜ್ಞಾನೇಂದ್ರ ತಿಳಿಸಿದರು.

ಆಪ್ತರನ್ನು ರಕ್ಷಿಸುವ ಇರಾದೆ

‘ಸಿಐಡಿ ಅಧಿಕಾರಿಗಳ ಮುಂದೆ ಹಾಜರಾಗಿ ಸಾಕ್ಷ್ಯಾಧಾರಗಳನ್ನು ನೀಡದೆ ಇರುವ ನಿರ್ಧಾರದ ಹಿಂದೆ, ಬಂಧನಕ್ಕೆ ಒಳಗಾಗಿರುವ ತಮ್ಮ ಆಪ್ತರನ್ನು ರಕ್ಷಿಸುವ ಇರಾದೆ ಇದೆ ಎಂಬ ಸಂಶಯ ಮೂಡುತ್ತದೆ. ತನಿಖೆಯು ನಿಷ್ಪಕ್ಷಪಾತವಾಗಿ ನಡೆಯುತ್ತಿದ್ದು, ಅಕ್ರಮದಲ್ಲಿ ಒಳಗಾಗಿದವರು ಎಷ್ಟೇ ದೊಡ್ಡವರಾದರೂ ರಕ್ಷಿಸುವ ಪ್ರಶ್ನೆಯಿಲ್ಲ'

-ಆರಗ ಜ್ಞಾನೇಂದ್ರ ಗೃಹ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News