ಬಿಸಿಲ ಧಗೆ: ಕುಡಿಯುವ ನೀರಿನ ಸಮಸ್ಯೆ

Update: 2022-04-26 05:12 GMT

ರಾಜ್ಯದ ಬಹುತೇಕ ಕಡೆ ಬಿಸಿಲಿನ ಧಗೆ ಹೆಚ್ಚುತ್ತಿದೆ. ಅದರಲ್ಲೂ ಉತ್ತರ ಕರ್ನಾಟಕದ ವಿಶೇಷವಾಗಿ ಕಲ್ಯಾಣ ಕರ್ನಾಟಕದ ಭಾಗದಲ್ಲಿ ಕಳೆದ ಒಂದು ತಿಂಗಳಿನಿಂದಲೇ ಕೆಂಡದಂಥ ಬಿಸಿಲಿನಿಂದ ಜನಸಾಮಾನ್ಯರು ಕಂಗಾಲಾಗಿದ್ದಾರೆ. ದಿನವಿಡೀ ಬಿಸಿಗಾಳಿ ಬೀಸುತ್ತಿದೆ. ಎಪ್ರಿಲ್ ಮುಗಿಯುತ್ತಾ ಬಂತು. ಮಳೆಗಾಲ ಸರಿಯಾಗಿ ಆರಂಭವಾಗಲು ಇನ್ನೂ ಒಂದೂವರೆ ತಿಂಗಳಾದರೂ ಕಾಯಬೇಕು. ಈಮಧ್ಯೆ ಕಲ್ಯಾಣ ಕರ್ನಾಟಕದ ಅನೇಕ ಕಡೆ ಕುಡಿಯುವ ನೀರಿನ ತೀವ್ರ ಅಭಾವ ಕಾಣಿಸಿಕೊಂಡಿದೆ. ಕಲ್ಯಾಣ ಕರ್ನಾಟಕದ ಆರು ಜಿಲ್ಲೆಗಳ ಜೊತೆಗೆ ಬಿಜಾಪುರ, ಗದಗ, ಧಾರವಾಡ, ಬಾಗಲಕೋಟೆ ಮುಂತಾದ ಜಿಲ್ಲೆಗಳಲ್ಲೂ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಂಡಿದೆ. ಈಗ ಸುಮಾರು 500ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ.

ಉತ್ತರ ಕರ್ನಾಟಕ ಭಾಗದ ಬಹುತೇಕ ಹಳ್ಳಿಗಳಲ್ಲಿ ಬಿಸಿಲಿನ ಧಗೆಯ ಜೊತೆಗೆ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ. ಹಗರಣಗಳ ಭಾರದಿಂದ ತತ್ತರಿಸಿ ಹೋಗಿರುವ ರಾಜ್ಯದ ಬಿಜೆಪಿ ಸರಕಾರ ಈ ಬಗ್ಗೆ ಸರಿಯಾದ ಗಮನವನ್ನು ಕೊಡುತ್ತಿಲ್ಲ. ಮೀಸಲಾತಿ ಗೊಂದಲದಿಂದಾಗಿ ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್‌ಗಳು ಚುನಾವಣೆ ನಡೆಯದೇ ಅಸ್ತಿತ್ವ ಕಳೆದುಕೊಂಡಿವೆ. ಜನ ಪ್ರತಿನಿಧಿಗಳು ಅಂದರೆ ಶಾಸಕರೂ ಜನರ ಕೈಗೆ ಸಿಗುತ್ತಿಲ್ಲ. ಹೀಗಾಗಿ ಜನಸಾಮಾನ್ಯರು ತಮ್ಮ ಕಷ್ಟ ಕಾರ್ಪಣ್ಯಗಳನ್ನು ಯಾರಲ್ಲಿ ಹೇಳಬೇಕು ಎಂಬುದೇ ಗೊತ್ತಾಗುತ್ತಿಲ್ಲ.

ಹಳ್ಳಿಗಳ ಜನಸಾಮಾನ್ಯರ ಮನೆ ಬಾಗಿಲಿಗೆ ನೀರು ಪೂರೈಸುವ ಸರಕಾರದ ಭರವಸೆಗಳು ಇನ್ನೂ ಈಡೇರಿಲ್ಲ. ಮಳೆಗಾಲದಲ್ಲಿ ಹೇಗೋ ನಡೆದು ಹೋಗುತ್ತದೆ. ಕುಡಿಯುವ ನೀರಿನ ಸಮಸ್ಯೆ ಉಂಟಾಗುವುದು ಬೇಸಿಗೆಯಲ್ಲಿ. ಜಲಮೂಲಗಳು ಬೇಸಿಗೆಯಲ್ಲಿ ಬತ್ತಿ ಹೋಗುತ್ತವೆ. ಹೀಗಾಗಿ ಜನಸಾಮಾನ್ಯರು ಹನಿ ನೀರಿಗಾಗಿ ಪರದಾಡುವಂತಾಗುತ್ತದೆ. ಕಳೆದ ವರ್ಷ ನಿರೀಕ್ಷೆ ಮೀರಿ ರಾಜ್ಯಾದ್ಯಂತ ಮಳೆಯಾಗಿದೆ ಎಂಬುದು ನಿಜ. ಸದಾ ಮಳೆಯ ಅಭಾವದಿಂದ ತೊಂದರೆ ಗೊಳಗಾಗುವ ಚಿಕ್ಕ ಬಳ್ಳಾಪುರ, ಕೋಲಾರ, ಚಿತ್ರದುರ್ಗ, ತುಮಕೂರಿನಂಥ ಜಿಲ್ಲೆಗಳಲ್ಲಿ ಸಾಕಷ್ಟು ಮಳೆ ಸುರಿದು ಕೆರೆ ಕಟ್ಟೆಗಳು ತುಂಬಿರಬಹುದು. ಹಾಗೆಂದು ಸರಕಾರ ಕುಡಿಯುವ ನೀರಿನ ಸಮಸ್ಯೆಯ ಬಗ್ಗೆ ನಿರ್ಲಕ್ಷ ಮಾಡಬಾರದು.

ರಾಜ್ಯ ಸರಕಾರ ತನ್ನ ಆಂತರಿಕ ಸಮಸ್ಯೆಗಳೇನೇ ಇರಲಿ ಬೇಸಿಗೆ ಬಂದಾಗ ತಕ್ಷಣ ಎಚ್ಚೆತ್ತು ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸದಂತೆ ನಿಗಾ ವಹಿಸಬೇಕು. ಕುಡಿಯುವ ನೀರಿನ ಸಮಸ್ಯೆ ಕಾಣಿಸಿಕೊಳ್ಳುವ ಹಳ್ಳಿಗಳ ಪಟ್ಟಿಯನ್ನು ಮಾಡಿ ಅಂಥ ಹಳ್ಳಿಗಳಿಗೆ ತಕ್ಷಣ ನೀರು ಪೂರೈಸುವ ಏರ್ಪಾಡು ಮಾಡಬೇಕು. ಬೆಂಗಳೂರಿನಲ್ಲಿ ಕುಳಿತು ಯಾವುದೇ ಸಮಸ್ಯೆ ಇಲ್ಲ ಎಂದು ತಮ್ಮ ಪಾಡಿಗೆ ತಾವಿದ್ದರೆ ಮುಂಬರುವ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರ ಸ್ವರೂಪದಲ್ಲಿ ಉಲ್ಬಣಿಸಬಹುದು. ಕೆಲ ವರ್ಷಗಳ ಹಿಂದೆ ಕುಡಿಯುವ ನೀರಿನ ಸಮಸ್ಯೆ ಉಂಟಾದಾಗ ರೈಲು ಬೋಗಿಗಳ ಮೂಲಕ ನೀರು ಪೂರೈಸಿದ್ದನ್ನು ಮರೆಯಬಾರದು. ಈಗ ಹಾಗಾಗದಂತೆ ಎಚ್ಚರಿಕೆ ವಹಿಸಬೇಕು.

ಬೇಸಿಗೆ ಮತ್ತು ಮಳೆಗಾಲಗಳು ಬಂದಾಗ ಅವುಗಳನ್ನು ಎದುರಿಸಲು ನಮ್ಮ ಸರಕಾರಗಳು ಸರಿಯಾಗಿ ಸಿದ್ಧತೆಯನ್ನು ಮಾಡಿಕೊಳ್ಳುವುದಿಲ್ಲ. ಪ್ರಸಕ್ತ ವರ್ಷ ಮುಂಗಾರು ಮಳೆ ವಾಡಿಕೆಯಂತೆ ಆಗುತ್ತದೆ ಹಾಗೂ ಕೆಲವೆಡೆ ಜಾಸ್ತಿ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ಮುನ್ಸೂಚನೆ ನಿಜವಾದರೆ ಕೃಷಿ ಮತ್ತು ಕೃಷಿ ಸಂಬಂಧಿ ಚಟುವಟಿಕೆಗಳು ಚುರುಕಾಗುತ್ತವೆ. ಇದರಿಂದ ಹಣದುಬ್ಬರ ನಿಯಂತ್ರಣಕ್ಕೆ ಬಂದು ಆರ್ಥಿಕ ಪರಿಸ್ಥಿತಿ ಚೇತರಿಸಬಹುದು. ಇದಕ್ಕಾಗಿ ಸರಕಾರ ಮಳೆಗಾಲದ ಸಿದ್ಧತೆಯನ್ನು ಈಗಲೇ ಮಾಡಿಕೊಳ್ಳುವುದು ಸೂಕ್ತ.

ಮಳೆಗಾಲದಲ್ಲಿ ರೈತರಿಗೆ ತೊಂದರೆಯಾಗದಂತೆ ರಾಜ್ಯದ ಎಲ್ಲಾ ಕಡೆ ಬಿತ್ತನೆ ಬೀಜ ಮತ್ತು ಗೊಬ್ಬರದ ದಾಸ್ತಾನನ್ನು ಸಂಗ್ರಹಿಸಿ ಇಟ್ಟುಕೊಳ್ಳಬೇಕು. ಜಿಲ್ಲಾವಾರು ಪರಿಸ್ಥಿತಿಯ ಅಧ್ಯಯನದ ಆಧಾರದಲ್ಲಿ ಅದಕ್ಕೆ ತಕ್ಕಂತೆ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಿ ಕಾರ್ಯೋನ್ಮುಖವಾಗಬೇಕು.

ಹವಾಮಾನ ಇಲಾಖೆಯ ಮುನ್ಸೂಚನೆಯ ಪ್ರಕಾರ ಜುಲೈ ತಿಂಗಳಲ್ಲಿ ಭಾರೀ ಪ್ರಮಾಣದಲ್ಲಿ ಮಳೆ ಬೀಳುವುದರಿಂದ ಸರಕಾರ ಕೆರೆ ಕಟ್ಟೆಗಳ ಹೂಳನ್ನು ತೆಗೆಸಲು ಈಗಲೇ ತುರ್ತು ಕ್ರಮಗಳನ್ನು ಕೈಗೊಳ್ಳಬೇಕು. ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ಕೃಷಿ ಹೊಂಡಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ನಿರ್ಮಿಸುವ ಮೂಲಕ ಮಳೆ ನೀರು ಸಂಗ್ರಹಕ್ಕೆ ಕ್ರಮ ಕೈಗೊಳ್ಳಬೇಕು.
ಹೀಗೆ ಸರಕಾರ ಮುಂಚೆಯೇ ಎಚ್ಚೆತ್ತು ಬೇಸಿಗೆ ಹಾಗೂ ಮಳೆಗಾಲಗಳನ್ನು ಎದುರಿಸಲು ಸೂಕ್ತ ಕ್ರಮಗಳನ್ನು ಕೈಗೊಂಡರೆ ಜನಸಾಮಾನ್ಯರು ತೊಂದರೆಗೊಳಗಾಗುವುದು ತಪ್ಪುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News