ಬಹಿರಂಗವಾಗಿ ಕ್ಷಮೆ ಕೇಳುವ ಪ್ರಶ್ನೆಯೇ ಉದ್ಭವಿಸುವುದಿಲ್ಲ: ಲೀಗಲ್ ನೋಟಿಸ್ ಕುರಿತು ಎಂ.ಲಕ್ಷ್ಮಣ್ ಪ್ರತಿಕ್ರಿಯೆ
ಮೈಸೂರು: 'ನಾನು ಕೆಲವು ಮಾಹಿತಿ ಆಧಾರದ ಮೇಲೆಯೇ ಶಾಸಕ ಸಿ.ಟಿ.ರವಿ ಅವರ ಮೇಲೆ ಆರೋಪ ಮಾಡಿರುವುದು, ನಾನು ಬಹಿರಂಗವಾಗಿ ಕ್ಷಮೆ ಕೇಳುವ ಪ್ರಶ್ನೇಯೇ ಉದ್ಭವಿಸುವುದಿಲ್ಲ, ಅವರು ನೀಡಿರುವ ನೋಟಿಸ್ ಗೆ ಕಾನೂನು ಮೂಲಕವೇ ಉತ್ತರ ನೀಡುತ್ತೇನೆ' ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಸ್ಪಷ್ಟಪಡಿಸಿದ್ದಾರೆ.
ಈ ಸಂಬಂಧ ಮಂಗಳವಾರ ' ವಾರ್ತಾಭಾರತಿ' ಯೊಂದಿಗೆ ದೂರವಾಣಿ ಮೂಲಕ ಮಾತನಾಡಿದ ಅವರು, ಶಾಸಕ ಸಿ.ಟಿ.ರವಿ ನನಗೆ ಎರಡನೇ ಬಾರಿ ನೋಟಿಸ್ ನೀಡುತ್ತಿದ್ದಾರೆ. ಈ ಹಿಂದೆ ಅವರ ಕಾರು ಅಪಘಾತ ಸಂಭವಿಸಿದ್ದ ಸಮಯದಲ್ಲಿ ನನ್ನನ್ನು ಸೇರಿ ಕೆಪಿಸಿಸಿ ಕಾರ್ಯಾಧ್ಯಕ್ಷರುಗಳಾದ ರಾಮಲಿಂಗಾ ರೆಡ್ಡಿ ಮತ್ತು ಆರ್.ಧ್ರುವನಾರಾಯಣ್ ಅವರಿಗೆ ನೋಟಿಸ್ ನೀಡಿದ್ದರು. ಈಗ ಮತ್ತೆ ನನಗೆ ನೋಟಿಸ್ ನೀಡಿದ್ದಾರೆ ಎಂದು ಹೇಳಿದರು.
'ನಾನು ಕೆಲವು ಮಾಹಿತಿ ಆಧರಿಸಿ ಅವರ ಬಗ್ಗೆ ಮಾತನಾಡಿದ್ದೆ, ಇನ್ನೂ ಕೆಲವು ಮಾಹಿತಿ ಸಂಗ್ರಹಿಸುತ್ತಿದ್ದೇನೆ. ಅವರ ಅಕ್ಕ, ಭಾವ ಅವರ ತಂದೆ, ತಾಯಿ ಅವರ ಬಳಿ ಕಳೆದ 20 ವರ್ಷಗಳಿಂದ ಎಷ್ಟು ಆಸ್ತಿ ಇತ್ತು ಈಗ ಎಷ್ಟಿದೆ ಎಂಬುದನ್ನು ಸಾರ್ವಜನಿಕವಾಗಿ ಬಹಿರಂಗ ಪಡಿಸಿ ಎಂದು ಹೇಳಿದ್ದೇನೆ. ಅದಕ್ಕೆ ಅವರು ಉತ್ತರ ಕೊಡುವ ಬದಲು ನೋಟಿಸ್ ನೀಡಿದ್ದಾರೆ. ನಾನು ಸಹ ನಮ್ಮ ವಕೀಲರ ಮೂಲಕ ಉತ್ತರ ಕೊಡಲಿದ್ದೇನೆ' ಎಂದು ಹೇಳಿದರು.