ಶಿವಮೊಗ್ಗ | ಗಾಂಜಾ ಮತ್ತಿನಲ್ಲಿ ಇನ್ನೊಬ್ಬನ ಹತ್ಯೆಗೆ ಸಂಚು: ಮೂವರು ಆರೋಪಿಗಳ ಬಂಧನ
ಶಿವಮೊಗ್ಗ, ಎ.26: ಗಾಂಜಾ ಮತ್ತಿನಲ್ಲಿ ಇನ್ನೊಬ್ಬ ಯುವಕನ ಹತ್ಯೆಗೆ ಸಂಚು ರೂಪಿಸಿದ್ದ ಮೂವರು ಆರೋಪಿಗಳನ್ನು ದೊಡ್ಡಪೇಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಸಲ್ಮಾನ್, ಅಬ್ಬಾಸ್, ಉಸ್ಮಾನ್ ಬಂಧಿತ ಆರೋಪಿಗಳು ಎಂದು ತಿಳಿದು ಬಂದಿದೆ.
ಇತ್ತೀಚೆಗೆ ನ್ಯೂ ಮಂಡ್ಲಿ ಬಳಿ ಬೈಕ್‌ನಲ್ಲಿ ತೆರಳುತ್ತಿದ್ದ ಸಂಘಪರಿವಾರದ ಯುವಕನೊಬ್ಬನನ್ನು ಆರೋಪಿಗಳು ಅಡ್ಡಗಟ್ಟಿದ್ದರು. ಮಾರಕಾಸ್ತ್ರಗಳನ್ನು ತೋರಿಸಿ ನಿನ್ನ ಸಹೋದರ ಎಲ್ಲಿದ್ದಾನೆ? ಸಂಜೆಯೊಳಗೆ ಆತನನ್ನು ಸಾಯಿಸುತ್ತೇವೆ ಎಂದು ಬೆದರಿಕೆ ಒಡ್ಡಿದ್ದಾರೆ. ಈ ಸಂಬಂಧ ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಆರೋಪಿಗಳು ಯುವಕನ ಚಲನವಲನದ ಮೇಲೆ ನಿಗಾ ವಹಿಸಿದ್ದರು ಎಂದು ಆರೋಪಿಸಲಾಗಿದೆ. ಬೈಪಾಸ್ ರಸ್ತೆಯ ಸೇತುವೆ ಬಳಿ ಇವರು ಅನುಮಾನಾಸ್ಪದವಾಗಿ ವರ್ತಿಸುತ್ತಿದ್ದ ಆರೋಪದ ಮೇಲೆ ಪೊಲೀಸರು ಇವರನ್ನು ಬಂಧಿಸಿದ್ದರು. ಮೆಗ್ಗಾನ್ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಗಾಂಜಾ ಸೇವನೆ ಮಾಡಿರುವುದು ದೃಢವಾಗಿದೆ.
ಹೆಚ್ಚಿನ ವಿಚಾರಣೆ ನಡೆಸಿದಾಗ ಯುವಕನ ಹತ್ಯೆಗೆ ಸಂಚು ರೂಪಿಸಿರುವುದನ್ನು ಬಾಯಿ ಬಿಟ್ಟಿದ್ದಾರೆ. ಮೂವರ ವಿರುದ್ಧ ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.