ಮಾಜಿ ವಿಧಾನ ಪರಿಷತ್ ಸದಸ್ಯನ ವಿರುದ್ಧ ಕ್ರಿಮಿನಲ್ ಮೊಕದ್ದಮೆಗೆ ರಾಜ್ಯಪಾಲರ ಸಮ್ಮತಿ

Update: 2022-04-26 13:05 GMT

ಬೆಂಗಳೂರು, ಎ.26: ಮಾಜಿ ವಿಧಾನ ಪರಿಷತ್ ಸದಸ್ಯ ಶ್ರೀಕಾಂತ್ ಎಲ್ ಘೋಟ್ನೇಕರ್ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲು ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಅವರು ಅನುಮತಿ ನೀಡಿದ್ದಾರೆ.

ಲೋಕಾಯುಕ್ತರು ಮಾಡಿರುವ ಶಿಫಾರಸುಗಳನ್ನು ಅಂಗೀಕರಿಸಿರುವ ರಾಜ್ಯಪಾಲರು, ಶ್ರೀಕಾಂತ್ ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲು ಮತ್ತು ಸರಕಾರದ ಅನುದಾನವನ್ನು ವಸೂಲಿ ಮಾಡಲು ಲೋಕಾಯುಕ್ತ ವರದಿಯನ್ನು ಸಕ್ಷಮ ಅಧಿಕಾರಿಗಳಿಗೆ ಕಳುಹಿಸಲು ಆದೇಶ ಹೊರಡಿಸಿದ್ದಾರೆಂದು ತಿಳಿದುಬಂದಿದೆ.

ಲೋಕಾಯುಕ್ತರ ಸಂಶೋಧನೆಗಳು ಸೇರಿದಂತೆ ಪ್ರಕರಣದ ಸತ್ಯ ಮತ್ತು ಸಂದರ್ಭಗಳನ್ನು ಪರಿಗಣಿಸಿ, ಶ್ರೀಕಾಂತ್ ಎಲ್ ಘೋಟ್ನೇಕರ್ ಮತ್ತು ಇತರರು ಸಮುದಾಯ ಭವನ ನಿರ್ಮಾಣದ ಉದ್ದೇಶಕ್ಕಾಗಿ ರಾಜ್ಯ ಸರಕಾರದಿಂದ ಅನುದಾನವನ್ನು ಪಡೆದುಕೊಂಡಿದ್ದು, ಈ ಅನುದಾನವನ್ನು ಉದ್ದೇಶಿತ ಯೋಜನೆಗಲ್ಲದೆ ಶಾಲಾ ಕಟ್ಟಡ ನಿರ್ಮಾಣಕ್ಕೆ ಹಣವನ್ನು ಬಳಸಿಕೊಂಡಿದ್ದು, ಈ ಮೂಲಕ ಅನುದಾನದ ಹಣವನ್ನು ತಮ್ಮ ವೈಯಕ್ತಿಕ ಲಾಭಕ್ಕಾಗಿ ದುರುಪಯೋಗಪಡಿಸಿಕೊಂಡಿರುವುದು ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯ ಶ್ರೀಕಾಂತ್ ಎಲ್ ಘೋಟ್ನೇಕರ್ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಅನುಮತಿ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News