ಪಿಎಸ್ಸೈನ 250 ಹುದ್ದೆಗಳನ್ನು ಆರೆಸೆಸ್ಸ್, ಎಬಿವಿಪಿ ಕಾರ್ಯಕರ್ತರಿಗೆ ನೀಡಲಾಗಿದೆ: ರಾಮಲಿಂಗಾರೆಡ್ಡಿ ಆರೋಪ

Update: 2022-04-26 13:34 GMT
 ರಾಮಲಿಂಗಾರೆಡ್ಡಿ 

ಬೆಂಗಳೂರು, ಎ. 26:  ‘ಪಿಎಸ್ಸೈನ 545 ಹುದ್ದೆಯಲ್ಲಿ 250 ಹುದ್ದೆಗಳನ್ನು ಆರೆಸೆಸ್ಸ್, ಎಬಿವಿಪಿ ಕಾರ್ಯಕರ್ತರಿಗೆ ನೀಡಲಾಗಿದೆ. ಪೊಲೀಸ್ ಇಲಾಖೆಯಲ್ಲಿ ತಮಗೆ ಬೇಕಾದ ಅಭ್ಯರ್ಥಿಗಳನ್ನು ವಾಮಮಾರ್ಗದ ಮೂಲಕ ಸೇರಿಸಲು ಪ್ರಯತ್ನಿಸುತ್ತಿದ್ದಾರೆ. ಈ ತನಿಖೆ ಸರಿಯಾಗಿ ನಡೆಯುತ್ತಿಲ್ಲ. ಸಿಎಂ ಈ ಅಕ್ರಮದಲ್ಲಿ ಭಾಗಿಯಾಗಿರುವ ಅಧಿಕಾರಿಗಳನ್ನು ಅಮಾನತುಗೊಳಿಸಿ ನ್ಯಾಯಯುತ ತನಿಖೆ ಮಾಡಬೇಕು. 70 ಸಾವಿರ ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದು, ಅರ್ಹರು ಆಯ್ಕೆಯಾಗದೆ ತಮಗೆ ಬೇಕಾದವರು, ಹಣ ಇರುವವರು ಆಯ್ಕೆಯಾಗಿದ್ದಾರೆ' ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಆರೋಪಿಸಿದ್ದಾರೆ.

ಮಂಗಳವಾರ ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪಿಎಸ್ಸೈ ನೇಮಕ ಅಕ್ರಮ ಸಂಬಂಧ ದಿವ್ಯಾ ಹಾಗರಗಿಯನ್ನು ಇದುವರೆಗೂ ಬಂಧಿಸಿಲ್ಲ. ಈ ಪ್ರಕರಣದಲ್ಲಿ ಯಾರೆಲ್ಲ ತಪ್ಪು ಮಾಡಿದ್ದಾರೋ ಅವರನ್ನು ಬಂಧಿಸಬೇಕು. ಆದರೆ ಸಣ್ಣ ಮೀನುಗಳನ್ನು ಹಿಡಿದು, ದೊಡ್ಡ ತಿಮಿಂಗಿಲಗಳ ರಕ್ಷಣೆ ಸರಿಯಲ್ಲ. ಪ್ರಕರಣ ಮುಚ್ಚಿಹಾಕಲು ಸರಕಾರ ಪ್ರಯತ್ನಿಸುತ್ತಿದೆ' ಎಂದು ಹೇಳಿದರು. 

‘ಪಿಎಸ್ಸೈ ನೇಮಕ ಅಕ್ರಮವು ಮೂರು ಹಂತಗಳಲ್ಲಿ ನಡೆದಿದ್ದು, ಮೊದಲು ಪ್ರಶ್ನೆ ಪತ್ರಿಕೆ ಕೊಡುವ ವೇಳೆ ವ್ಯವಸ್ಥಿತವಾಗಿ ತಮಗೆ ಬೇಕಾದ ಅಭ್ಯರ್ಥಿಗಳಿಗೆ ಪ್ರಶ್ನೆ ಪತ್ರಿಕೆ ಕೊಟ್ಟು ಗೊತ್ತಿರುವುದು ಬರೆದು ಉಳಿದಿದ್ದನ್ನು ಖಾಲಿ ಬಿಡಿ ಎಂದು ಹೇಳಿರುತ್ತಾರೆ. 2ನೆ ಹಂತದಲ್ಲಿ ತಮಗೆ ಬೇಕಾದವರಿಗೆ ಪ್ರಶ್ನೆ ಪತ್ರಿಕೆಯಲ್ಲಿ ಖಾಲಿ ಇರುವ ಪ್ರಶ್ನೆಗಳಿಗೆ ಇವರೇ ಉತ್ತರ ತುಂಬುತ್ತಾರೆ. 3ನೆ ಹಂತದಲ್ಲಿ ಮೌಲ್ಯಮಾಪನ ಮಾಡುವಾಗ ಹೆಚ್ಚು ಅಂಕ ನೀಡಲಾಗಿರುತ್ತದೆ' ಎಂದು ದೂರಿದರು.

ಕೇವಲ ಒಬ್ಬರಿಂದ ಇಷ್ಟೆಲ್ಲ ಮಾಡಲು ಸಾಧ್ಯವಿಲ್ಲ. ಅಕ್ರಮ ನಡೆದ ಪರೀಕ್ಷಾ ಕೇಂದ್ರ ಕಲಬುರ್ಗಿ ಬಿಜೆಪಿ ಮಹಿಳಾ ಅಧ್ಯಕ್ಷೆ ದಿವ್ಯಾ ಹಾಗರಗಿಗೆ ಸೇರಿದ್ದು, ಬಿಜೆಪಿಯ ಎಲ್ಲ ಮುಖಂಡರಿಗೆ ಸಂಪರ್ಕ ಹೊಂದಿದ್ದು, ಗೃಹ ಮಂತ್ರಿಯೂ ಅವರ ಮನೆಗೆ ಹೋಗಿದ್ದರು. ಇಲಾಖೆ ಕೆಲವು ಅಧಿಕಾರಿಗಳು ಸೇರಿಕೊಂಡು ಈ ಅಕ್ರಮ ನಡೆಸಿದ್ದು, ಇದುವರೆಗೂ ಈ ಆರೋಪಿಗಳ ಪತ್ತೆ ಹಚ್ಚಲು ಪೊಲೀಸರಿಂದ ಸಾಧ್ಯವಾಗಿಲ್ಲ' ಎಂದು ವಾಗ್ದಾಳಿ ನಡೆಸಿದರು.

‘ನೇಮಕಾತಿ ಜವಾಬ್ದಾರಿ ಹೊತ್ತಿರುವ ಎಡಿಜಿಪಿ ಅಧಿಕಾರಿಗಳನ್ನು ಅದೇ ಸ್ಥಾನದಲ್ಲಿ ಮುಂದುವರಿಸಿದ್ದು, ಇದರಿಂದ ಪ್ರಕರಣದ ಸಾಕ್ಷ್ಯಾಧಾರಗಳನ್ನು ನಾಶಪಡಿಸುವ ಸಾಧ್ಯತೆ ಹೆಚ್ಚಾಗಿದೆ. ಸಾಕ್ಷಿ ನಾಶಕ್ಕೆ ಅವರನ್ನು ಸರಕಾರ ಅದೇ ಹುದ್ದೆಯಲ್ಲಿ ಮುಂದುವರಿಸಿದೆ. ಇಷ್ಟೆಲ್ಲಾ ಅಕ್ರಮವಾದರೂ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಅಧಿಕಾರಿಗಳನ್ನು ಅಮಾನತು ಮಾಡದಿದ್ದರೂ, ವರ್ಗಾವಣೆಯಾದರೂ ಮಾಡಿ ಪಾರದರ್ಶಕ ತನಿಖೆ ನಡೆಸಬಹುದಾಗಿತ್ತು. ಆದರೆ ಸರಕಾರ ಈ ಹಗರಣವನ್ನು ಮುಚ್ಚಿಹಾಕಲು ಪ್ರಯತ್ನಿಸುತ್ತಿದೆ' ಎಂದು ಟೀಕಿಸಿದರು.

ಪ್ರಭಾವಿಗಳ ರಕ್ಷಣೆ: ‘ಈ ಅಕ್ರಮದಲ್ಲಿ ಬಿಜೆಪಿ ಪ್ರಭಾವಿ ನಾಯಕರು ಶಾಮೀಲಾಗಿದ್ದು, ಗೃಹ ಸಚಿವ ಆರಗ ಜ್ಞಾನೇಂದ್ರ ಎಲ್ಲ ಪ್ರಭಾವಿಗಳ ರಕ್ಷಣೆಗೆ ಟೊಂಕ ಕಟ್ಟಿ ನಿಂತಿದ್ದಾರೆ. ಸಚಿವರ ಪಾತ್ರ ಇದೆಯೋ ಇಲ್ಲವೋ? ಆದರೆ ಅವರ ಪಾತ್ರ ಇದೆ ಎಂಬ ಶಂಕೆ ಮಾತ್ರ ವ್ಯಕ್ತವಾಗುತ್ತಿದೆ. ಕಾರಣ, ಈ ಪರೀಕ್ಷಾ ಕೇಂದ್ರಕ್ಕೆ ಅನುಮತಿ ನೀಡಿದ್ದು ಯಾರು? ಈ ಎಲ್ಲ ಶಂಕೆಗಳನ್ನು ನಿವಾರಿಸಬೇಕು' ಎಂದು ರಾಮಲಿಂಗಾರೆಡ್ಡಿ ಆಗ್ರಹಿಸಿದರು. 

‘ದಿವ್ಯಾ ಹಾಗರಗಿ ಅವರು ತಲೆಮರೆಸಿಕೊಂಡು ಇಷ್ಟು ದಿನಗಳಾದರೂ ಬಂಧಿಸಲು ಸಾಧ್ಯವಾಗಲಿಲ್ಲ ಎಂದರೆ ಸರಕಾರವೇ ಅವರಿಗೆ ಬೆಂಬಲ ನೀಡುತ್ತಿದೆ. ಗೃಹಮಂತ್ರಿಗಳೇ ಅವರ ಮನೆಗೆ ಹೋಗಿರುವಾಗ ಪೊಲೀಸ್ ಅಧಿಕಾರಿಗಳು ಹೇಗೆ ಅವರನ್ನು ಬಂಧಿಸುತ್ತಾರೆ? ಇವರನ್ನೇ ಹಿಡಿಯಲಾಗದಿದ್ದರೆ, ಪೊಲೀಸರು ಕ್ರಿಮಿನಲ್‍ಗಳನ್ನು ಬಂಧಿಸಲು ಸಾಧ್ಯವೇ?' ಎಂದು ಅವರು ಪ್ರಶ್ನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News