×
Ad

ಚಿಕ್ಕಮಗಳೂರು | ಮೂರು ವರ್ಷ ಕಳೆದರೂ ಅತಿವೃಷ್ಟಿ ಸಂತ್ರಸ್ತರಿಗೆ ಸಿಗದ ಪರಿಹಾರ: ದಯಾಮರಣ ಕೋರಿ ರಾಷ್ಟ್ರಪತಿಗೆ ಪತ್ರ

Update: 2022-04-26 20:52 IST

ಚಿಕ್ಕಮಗಳೂರು, ಎ.26: ಕಳೆದ ಮೂರು ವರ್ಷಗಳ ಹಿಂದೆ ಜಿಲ್ಲೆಯಲ್ಲಿ ಸಂಭವಿಸಿದ ಭಾರೀ ಮಳೆ, ಭೂಕುಸಿತದ ಪರಿಣಾಮ ಮನೆ ಮತ್ತು ಜಮೀನು ಕಳೆದುಕೊಂಡಿದ್ದ ಮೂಡಿಗೆರೆ ತಾಲೂಕಿನ ಮಲೆಮನೆ ಗ್ರಾಮದ 5 ಕುಟುಂಬಗಳು 3 ವರ್ಷಗಳಾದರೂ ಪರಿಹಾರ ದೊರೆಯದ ಪರಿಣಾಮ ಬೇಸತ್ತು ದಯಾಮರಣ ನೀಡುವಂತೆ ಕೋರಿ ರಾಷ್ಟ್ರಪತಿಗೆಗೆ ಪತ್ರ ಬರೆದಿದ್ದಾರೆ.

ಜಿಲ್ಲೆಯಲ್ಲಿ 2019ರಲ್ಲಿ ಸಂಭವಿಸಿದ ಅತಿವೃಷ್ಟಿ ಪರಿಣಾಮ ಮೂಡಿಗೆರೆ ತಾಲೂಕಿನ ಮಲೆಮನೆ ಗ್ರಾಮದಲ್ಲಿ  ಭೂಕುಸಿತದಿಂದಾಗಿ ಗುಡ್ಡವೊಂದು ಕುಸಿದ ಪರಿಣಾಮ ಗ್ರಾಮದಲ್ಲಿದ್ದ ಮನೆಗಳ ಪೈಕಿ 5 ಮನೆಗಳು ಸಂಪೂರ್ಣವಾಗಿ ಮಣ್ಣು ಹಾಗೂ ಮಳೆ ನೀರಿನಲ್ಲಿ ಕೊಚ್ಚಿಹೋಗಿದ್ದವು. ಇಲ್ಲಿನ ರೈತರ ಬದುಕಿಗೆ ಆಧಾರದವಾಗಿದ್ದ ಸುಮಾರು 40 ಎಕರೆ ಕಾಫಿ, ಅಡಿಕೆ ತೋಟ ಮತ್ತು ಜಮೀನೂ ನಾಶವಾಗಿದ್ದವು. ಮನೆ ಜಮೀನು ಕಳೆದುಕೊಂಡು ಸಂತ್ರಸ್ಥರಾದ ಕುಟುಂಬಗಳಿಗೆ ಜಿಲ್ಲಾಡಳಿತ ಹಾಗೂ ಸರಕಾರ ಸೂಕ್ತ ಪರಿಹಾರ, ಮನೆ, ಜಮೀನು ನೀಡುವುದಾಗಿ ಭರವಸೆಯನ್ನೂ ನೀಡಿತ್ತು. 

ಆದರೆ ಅತಿವೃಷ್ಟಿ ಸಂಭವಿಸಿ 3 ವರ್ಷ ಕಳೆದರೂ ಪರಿಹಾರಕ್ಕಾಗಿ ಕುಟುಂಬಗಳ ಚಾತಕ ಪಕ್ಷಿಯಂತೆ ಕಾದುಕುಳಿತ್ತಿದ್ದಾರೆ. ಸದ್ಯ ಮೂರು ವರ್ಷಗಳಾದರೂ ಪರಿಹಾರ ದೊರೆಯದಿರುವುದರಿಂದ ಮಲೆಮನೆ ಗ್ರಾಮದ 5 ಕುಟುಂಬಗಳು ಸಾಮೂಹಿಕ ಆತ್ಮಹತ್ಯೆಗೆ ನಿರ್ಧರಿಸಿದ್ದು, ಕಳೆದ 2019-20ನೇ ಸಾಲಿನಲ್ಲಿ ಸುರಿದ ಭಾರೀ ಮಳೆಗೆ ಮಧುಗುಂಡಿ, ಅಲೇಖಾನ್‍ಹೊರಟ್ಟಿ, ಮಲೆಮನೆ ಮೇಗೂರು, ಜಾವಳಿ ಮಲೆಮನೆ, ದುರ್ಗದಹಳ್ಳಿ,ಹಲಗಡಕ ಎಸ್ಟೇಟ್‍ನ್ ಬಹುತೇಕ ಕುಟುಂಬಗಳ ಮನೆಗಳನ್ನು ಕಳೆದುಕೊಂಡಿದ್ದ ಅತಿವೃಷ್ಟಿ ಸಂತ್ರಸ್ತರಾಗಿ ಬೀದಿಗೆ ಬಿದ್ದಿದ್ದರು. ಮಳೆಯ ಆರ್ಭಟಕ್ಕೆ ಗುಡ್ಡಕುಸಿದ ನೀರು ಮನೆಯೊಳಗೆ ನುಗ್ಗತೊಡಗಿದಾಗ ಮಲೆಮನೆ ಗ್ರಾಮದಲ್ಲಿ ಕೆಲವರು ಓಡಿಬಂದು ಪ್ರಾಣಉಳಿಸಿಕೊಂಡರೆ ವಯಸ್ಸಾದವರು ದೇವರಮೇಲೆ ಭಾರಹಾಕಿ ಮನೆಯ ಅಟ್ಟವನ್ನೇರಿ  ಪ್ರಾಣ ಉಳಿಸಿಕೊಂಡಿದ್ದರು.

ಸಂತ್ರಸ್ಥರನ್ನು ಬಿದರಹಳ್ಳಿಯ ಮೊರಾರ್ಜಿ ವಸತಿಶಾಲೆಯಲ್ಲಿ ಆಶ್ರಯ ನೀಡಲಾಗಿತ್ತು. ಕೆಲವರು ಊರಿಗೆ ಹೋಗಲು ನಿರ್ಧರಿಸಿದರೆ, ಮತ್ತೆ ಕೆಲವರು ಬಾಡಿಗೆಯಲ್ಲಿ ವಾಸಿಸಲಾರಂಭಿಸಿದರು. ಜಿಲ್ಲಾಡಳಿತ ಸಂಪೂರ್ಣ ಮಾಹಿತಿಯನ್ನು ಸರಕಾರಕ್ಕೆ ಒದಗಿಸಿದ್ದು, ಆಗ ಮುಖ್ಯಮಂತ್ರಿಯಾಗಿದ್ದ ಬಿ.ಎಸ್.ಯಡಿಯೂರಪ್ಪ ಮಲೆಮನೆಗೆ ಭೇಟಿನೀಡಿ, ಪರಿಸ್ಥಿತಿಯನ್ನು ಕಣ್ಣಾರೆ ಕಂಡು ಕೂಡಲೇ ಪರಿಹಾರ ಒದಗಿಸುವ ಭರವಸೆಯನ್ನು ನೀಡಿದ್ದರು. ಸಂಸದೆ ಶೋಭಾಕರಂದ್ಲಾಜೆ, ಶಾಸಕರಾದ ಸಿ.ಟಿ.ರವಿ, ಎಂ.ಪಿ.ಕುಮಾರಸ್ವಾಮಿ ಕೂಡ ಸ್ಥಳಕ್ಕೆ ಭೇಟಿ ನೀಡಿ ಪರಿಹಾರದ ಭರವಸೆ ನೀಡಿದ್ದರು.

ಮನೆ ಮತ್ತು ಜಮೀನು ಕಳೆದುಕೊಂಡಿದ್ದ  ಸಂತ್ರಸ್ಥರು ಸ್ವಲ್ಪ ದಿವಸ ನೆಂಟರಿಷ್ಟರು ಮತ್ತು ಆಪ್ತರ ಮನೆಯಲ್ಲಿ ಆಶ್ರಯ ಪಡೆದರೆ, ಸರಕಾರ ಬಾಡಿಗೆ ಮನೆ ಹಣಭರಿಸುವುದಾಗಿ ತಿಳಿಸಿದ್ದರಿಂದ ಮತ್ತೆ ಕೆಲವರು ಬಾಡಿಗೆ ಮನೆಪಡೆದು ಜೀವನ ನಡೆಸಲಾರಂಭಿಸಿದರು. ಒಂದು ವರ್ಷದ ಬಾಡಿಗೆ ಹಣ ನೀಡುವುದಾಗಿ ತಿಳಿಸಿದ್ದ ಸರಕಾರ ಕೇವಲ 5 ತಿಂಗಳ ಬಾಡಿಗೆ ನೀಡಿ ಕೈತೊಳೆದುಕೊಂಡಿತು. ಸಂತ್ರಸ್ಥರಿಗೆ ಮನೆನಿವೇಶನ ಮತ್ತು ಭೂಮಿ ನೀಡಲು ಮುಂದಾಗಿದ್ದು, ಬೆಟ್ಟದಮನೆ ಮತ್ತು ಬಿ.ಹೊಸಳ್ಳಿಯಲ್ಲಿ ಭೂಮಿ ಗುರುತಿಸಿದ್ದು, ಒಟ್ಟು 94 ಜನರಿಗೆ ಹಕ್ಕುಪತ್ರವನ್ನು ನೀಡಲಾಗಿದೆ.

ಕೆಲವರು ಅತಿವೃಷ್ಟಿ ಪ್ರದೇಶದಿಂದ ಹೊರಬರಲು ನಿರ್ಧರಿಸಿದರೆ ಮತ್ತೆ ಕೆಲವರು ತಾವು ಈ ಹಿಂದೆ ವಾಸಿಸುತ್ತಿದ್ದ ಜಾಗದಲ್ಲೆ ಮನೆಗಳನ್ನು ನಿರ್ಮಿಸಿಕೊಂಡು ಜೀವನ ಮಾಡಲು ಮತ್ತು ಜಿಲ್ಲಾಡಳಿತ ನೀಡಿರುವ ನಿವೇಶನಕ್ಕೂ ಮತ್ತು ಜಮೀನು ಸಾಗುವಳಿಗೆ ಬಹುದೂರ ಇರುವುದರಿಂದ ಜಿಲ್ಲಾಡಳಿತ ನೀಡಿರುವ ನಿವೇಶನದಲ್ಲಿ ಮನೆಕಟ್ಟಿಕೊಳ್ಳಲು ಮುಂದಾಗಿರಲಿಲ್ಲ. ಕೆಲವರು ಸ್ಥಳಾಂತರಕ್ಕೆ ಒಪ್ಪದೆ ಅಲ್ಲೇ ಉಳಿದುಕೊಂಡಿದ್ದರು. ಸಂತ್ರಸ್ಥರಿಗೆ ಜಮೀನು ನೀಡಲು ಖಾಸಗಿಯಾಗಿ ಜಮೀನು ಖರೀದಿಸಲು 282 ಎಕರೆ ಜಮೀನಿಗೆ 10152 ಲಕ್ಷ ರೂ.ಗಳಿಗೆ ಜಿಲ್ಲಾಡಳಿತ ಪ್ರಸ್ತಾವ ಸಲ್ಲಿಸಿದ್ದು, ಪ್ರವಾಹದಿಂದ ಕೃಷಿ ಭೂಮಿ ಕಳೆದುಕೊಂಡವರಿಗೆ ಬದಲಿ ಭೂಮಿ ನೀಡಲು ತಗುಲುವ ವೆಚ್ಚ ಭರಿಸಲು ಅವಕಾಶವಿಲ್ಲದಿರುವುದರಿಂದ ಬದಲಿ ಭೂಮಿ ಖರೀದಿಗೆ ಅನುದಾನ ಬಿಡುಗಡೆ ಮಾಡಲು ಸಾಧ್ಯವಿಲ್ಲವೆಂದು ಸರಕಾರ ಜಿಲ್ಲಾಡಳಿತಕ್ಕೆ ತಿಳಿಸಿ ಕೈತೊಳೆದುಕೊಂಡಿದೆ. ಸತತ ಮೂರು ವರ್ಷ ಹೋರಾಟ ನಡೆಸಿ, ಕಚೇರಿಗೆ ವರ್ಷನುಗಟ್ಟಲೆ ಅಲೆದರೂ ಸಮರ್ಪಕ ಪರಿಹಾರ ದೊರೆತ್ತಿಲ. ಪರಿಣಾಮ ಸಂತ್ರಸ್ಥರನ್ನು ಸರಕಾರ ನಡುನೀರಿನಲ್ಲಿ ಕೈಬಿಟ್ಟಂತಾಗಿದೆ. 

ಚಿಕ್ಕಮಗಳೂರು ಜಿಲ್ಲೆಗೆ ಭೇಟಿ ನೀಡಿದ ಕಂದಾಯ ಸಚಿವ ಆರ್.ಅಶೋಕ್ ಸಮಸ್ಯೆ ಬಗೆಹರಿಸುವ ಬಗ್ಗೆ ಮಾತುಗಳನ್ನಾಡಿದ್ದರೂ ಯಾವುದೋ ಕಾರ್ಯಗತಕ್ಕೆ ಬಂದಂತೆ ಕಾಣುತ್ತಿಲ್ಲ. ರಾಷ್ಟ್ರಪತಿಗಳಿಗೆ ಪತ್ರ ಬರೆದು ದಯಾಮರಣಕ್ಕೆ ಸಂತ್ರಸ್ಥರು ಸದ್ಯ ಮನವಿ ಸಲ್ಲಿಸಿದ್ದು, ಸರಕಾರ ಇನ್ನಾದರೂ ಎಚ್ಚೆತ್ತುಕೊಂಡು ಸಂತ್ರಸ್ತರ ನೋವಿಗೆ ಸ್ಪಂದಿಸಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News