×
Ad

269 ಕೋಟಿ ರೂ. ನಷ್ಟ: ನಿವೃತ್ತ ಸಿಎಸ್ ಸೇರಿ 6 ಮಂದಿ ವಿರುದ್ಧ ಎಸಿಬಿ ತನಿಖೆಗೆ ಕೋರ್ಟ್ ಆದೇಶ

Update: 2022-04-26 21:57 IST

ಬೆಂಗಳೂರು, ಎ.26: ಅಕ್ರಮವಾಗಿ ಬ್ಯಾಂಕ್ ಖಾತೆಗಳನ್ನು ತೆರೆದು ರಾಜ್ಯದ ಬೊಕ್ಕಸಕ್ಕೆ 269 ಕೋಟಿ ನಷ್ಟ ಉಂಟು ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ನಿವೃತ್ತ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್ ಸೇರಿ ಆರು ಮಂದಿ ಅಧಿಕಾರಿಗಳ ವಿರುದ್ಧ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಭ್ರಷ್ಟಾಚಾರ ನಿಗ್ರಹ ದಳಕ್ಕೆ (ಎಸಿಬಿ) ಆದೇಶಿಸಿದೆ.

ಕೋಲಾರದ ಮಾಸ್ತಿ ಲೇಔಟ್‍ನ ಸಾಮಾಜಿಕ ಕಾರ್ಯಕರ್ತ ಎಸ್. ನಾರಾಯಣಸ್ವಾಮಿ ಸಲ್ಲಿಸಿರುವ ಖಾಸಗಿ ದೂರನ್ನು ಆಧರಿಸಿ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಕೆ.ಲಕ್ಷ್ಮಿನಾರಾಯಣ ಭಟ್ ಈ ಆದೇಶ ನೀಡಿದ್ದಾರೆ.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ (ಆರ್‍ಡಿಪಿಆರ್) ಪ್ರಧಾನ ಕಾರ್ಯದರ್ಶಿಗಳಾಗಿದ್ದ ಮೂವರು ಐಎಎಸ್ ಅಧಿಕಾರಿಗಳು, ಇಲಾಖೆ ಹೆಚ್ಚುವರಿ ಕಾರ್ಯದರ್ಶಿಯಾಗಿದ್ದ ಡಾ.ಬೋರೇಗೌಡ, ಗ್ರಾಮೀಣ ನೀರು ಸರಬರಾಜು ವಿಭಾಗದ ಉಪ ಕಾರ್ಯದರ್ಶಿಯಾಗಿದ್ದ ರಾಮಕೃಷ್ಣ, ಅಂದಿನ ಸಿಂಡಿಕೇಟ್ ಬ್ಯಾಂಕ್ (ಈಗ ಕೆನರಾ ಬ್ಯಾಂಕ್ ಜೊತೆ ವಿಲೀನವಾಗಿದೆ) ಮ್ಯಾನೇಜರ್ ಸೀಲಂ ಗಿರಿ ವಿರುದ್ಧ ರಾಜ್ಯ ಬೊಕ್ಕಸದ 3405.21 ಕೋಟಿ ಮೊತ್ತವನ್ನು ದುರ್ಬಳಕೆ ಮಾಡಿಕೊಂಡ ಆರೋಪ ಹೊರಿಸಲಾಗಿದೆ.

ಆರೋಪಿತ ಅಧಿಕಾರಿಗಳು 2009–10ರಿಂದ 2014–15ರ ನಡುವೆ ಈ ಬೃಹತ್ ಮೊತ್ತವನ್ನು ದುರ್ವಿನಿಯೋಗ ಮಾಡಿಕೊಂಡಿದ್ದಾರೆ ಎಂದು ಲೆಕ್ಕ ಪರಿಶೋಧನಾ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಆರು ಜನ ಆರೋಪಿಗಳು ಒಪ್ಪಂದಕ್ಕೆ ವಿರುದ್ಧವಾಗಿ ಆರು ಬ್ಯಾಂಕ್ ಖಾತೆಗಳನ್ನು ತೆರೆದಿದ್ದಾರೆ. ಅಂತೆಯೇ ಬ್ಯಾಂಕ್ ಮ್ಯಾನೇಜರ್ ಕೂಡಾ ಒಪ್ಪಂದದ ನಿಯಮಗಳಿಗೆ ವಿರುದ್ಧವಾಗಿ 98 ಖಾತೆಗಳನ್ನು ತೆರೆದಿದ್ದಾರೆ. ಈ ಮೂಲಕ 269 ಕೋಟಿ ಮೊತ್ತವನ್ನು ಬೊಕ್ಕಸಕ್ಕೆ ನಷ್ಟ ಉಂಟು ಮಾಡಿದ್ದಾರೆ ಎಂಬ ಸಾಕ್ಷಿಗಳ ಹೇಳಿಕೆ ಅನುಸಾರ ನ್ಯಾಯಾಧೀಶರು ಪ್ರಕರಣದ ತನಿಖೆಗೆ ಆದೇಶಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News