ಹಾವೇರಿ | ಗರ್ಭಕೋಶಕ್ಕೆ ಕತ್ತರಿ ಪ್ರಕರಣ: ಸಿಬಿಐ ತನಿಖೆಗೆ ಮಹಿಳೆಯರ ಆಗ್ರಹ
ಹಾವೇರಿ, ಎ. 26: ‘ಹೊಟ್ಟೆ ನೋವಿನ ಚಿಕಿತ್ಸೆಗೆ ತೆರಳಿದ ಬಡ ಮಹಿಳೆಯರ ಗರ್ಭಕೋಶಕ್ಕೆ ಕತ್ತರಿ ಹಾಕಿದ ವೈದ್ಯ ಡಾ.ಪಿ.ಶಾಂತ ಅವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ, ಪ್ರಕರಣ ಸಿಬಿಐ ತನಿಖೆಗೆ ಒಪ್ಪಿಸಬೇಕು' ಎಂದು ಒತ್ತಾಯಿಸಿ ಜಿಲ್ಲೆಯ ವಿವಿಧ ಗ್ರಾಮಗಳ ಮಹಿಳೆಯರು ರಾಣೆಬೆನ್ನೂರಿನಿಂದ ಶಿಗ್ಗಾವಿಯಲ್ಲಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನಿವಾಸಕ್ಕೆ ಕೈಗೊಂಡಿದ್ದ ಪಾದಯಾತ್ರೆ ಹಾವೇರಿ ತಾಲೂಕಿನ ನೆಲೋಗಲ್ಲ ಹೊರವಲಯದಲ್ಲಿ ಅರ್ಧಕ್ಕೆ ಅಂತ್ಯಗೊಂಡಿತು.
ಮಂಗಳವಾರ 250ಕ್ಕೂ ಹೆಚ್ಚು ಮಹಿಳೆಯರು ರಾಣೆಬೆನ್ನೂರಿನಿಂದ ಶಿಗ್ಗಾವಿಗೆ ಕಾಲ್ನಡಿಗೆ ಪ್ರಾರಂಭಿಸಿದ್ದು, ‘2010ರಿಂದ 2017ರವರೆಗೆ ಈ ಪ್ರಕರಣಗಳು ನಡೆದಿದ್ದವು. ಇದರ ಪರಿಣಾಮದಿಂದ 1,500ಕ್ಕೂ ಹೆಚ್ಚು ಬಡ ಮಹಿಳೆಯರು ಮಾನಸಿಕ ಹಾಗೂ ದೈಹಿಕ ನ್ಯೂನತೆಗಳಿಂದ ಬಳಲುತ್ತಿದ್ದು, ಇವರಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಆರ್ಥಿಕ ನೆರವು ನೀಡಬೇಕು ಒತ್ತಾಯಿಸಿದ್ದರು.
ಶಿಗ್ಗಾವಿಗೆ ಎ.28ರಂದು ಮುಖ್ಯಮಂತ್ರಿಗಳು ಬರಲಿದ್ದು, ಆ ಸಂದರ್ಭದಲ್ಲಿ ಗರ್ಭಕೋಶ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಮಹಿಳೆಯರು ಮತ್ತು ಹೋರಾಟದ ನೇತೃತ್ವ ವಹಿಸಿದ್ದ ಮುಖಂಡರ ನಿಯೋಗವನ್ನು ಭೇಟಿ ಮಾಡಿಸುವುದಾಗಿ ಅಧಿಕಾರಿಗಳು ನೀಡಿದ ಭರವಸೆಯ ಬಳಿಕ ಪಾದಯಾತ್ರೆಯನ್ನು ಮೊಟಕುಗೊಳಿಸಲು ಪ್ರತಿಭಟನಾಕಾರು ನಿರ್ಧರಿಸಿದರು.