×
Ad

ಮಗನಿಗೆ ನ್ಯಾಯ ಕೇಳಲು ಇರುವ ಮಗನ ಬಲಿ ಕೊಡಬೇಕೇ?: ಮೃತನ ತಾಯಿಯ ಅಳಲು

Update: 2022-04-26 22:56 IST

ತುಮಕೂರು, ಎ.26: ಕೊಲೆಯಾದ ಮಗನಿಗೆ ನ್ಯಾಯ ದೊರಕಿಸಲು ಹೋಗಿ, ಇರುವ ಮಗನನ್ನು ಕಳೆದುಕೊಳ್ಳಬೇಕಾ? ಎಂದು ಇತ್ತೀಚಿಗೆ ಗುಬ್ಬಿ ತಾಲೂಕು ಪೆದ್ದನಹಳ್ಳಿಯಲ್ಲಿ ಕೊಲೆಗೀಡಾದ ದಲಿತ ಯುವಕ ಗಿರೀಶ್ ಅವರ ತಾಯಿ ಗೌರಮ್ಮ ವಿವಿಧ ಸಂಘಟನೆಗಳ ಮುಖಂಡರ ಎದುರು ಅಳಲು ತೋಡಿಕೊಂಡಿದ್ದಾರೆ.

ಸಂತ್ರಸ್ತ ಕುಟುಂಬದ ಜೊತೆ ನಿಲ್ಲಬೇಕಾದ ಪೆದ್ದನಹಳ್ಳಿಯ ದಲಿತ ಕುಟುಂಬಗಳು ಮೃತ ಗಿರೀಶ್ ಕುಟುಂಬದೊಂದಿಗೆ ಸಾಮಾಜಿಕ ಬಹಿಷ್ಕಾರ ಹಾಕಿದಂತೆ ವರ್ತಿಸುತ್ತಿದೆ. ಸಾಂತ್ವನ ಹೇಳಬೇಕಾದ ಗ್ರಾಮದ ಜನತೆ, ಆತನ ಸಾವಿನಿಂದ ನಮ್ಮ ಮಕ್ಕಳು ಜೈಲು ಸೇರುವಂತಾಯಿತು ಎಂದು ಹಿಡಿ ಶಾಪ ಹಾಕುತ್ತಿರುವುದಲ್ಲದೇ, ಕನಿಷ್ಠ ಸೌಜನ್ಯಕ್ಕೆ ಮಾತನಾಡಿಸುವ ಕೆಲಸ ಮಾಡುತ್ತಿಲ್ಲ. ಇದು ಗಿರೀಶ್ ಅವರ ತಾಯಿಯ ಆತಂಕ ಹೆಚ್ಚಾಗಲು ಕಾರಣವಾಗಿದೆ.

ಕಳ್ಳ ಎಂಬುದು ಕೊಲೆಗೆ ಮಾನದಂಡವಲ್ಲ: ಇಡೀ ಪ್ರಕರಣದಲ್ಲಿ ಕೇಳಿ ಬರುತ್ತಿರುವುದು ಕೊಲೆಯಾದ ಇಬ್ಬರು ಕಳ್ಳರು ಎಂದು. ಇವರಿಂದ ರೋಸಿ ಹೋದವರು ಹೀಗೆ ಮಾಡಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಇದು ನಿಜ ಎಂಬುದಾದರೆ ಕಳ್ಳತನದ ಬಗ್ಗೆ ಸಂಬಂಧಪಟ್ಟ ಠಾಣೆಗೆ ದೂರು ನೀಡಬೇಕಿತ್ತು. ತಪ್ಪು ಸಾಬೀತಾಗಿದ್ದರೆ ಶಿಕ್ಷೆಯೂ ಆಗುತ್ತಿತ್ತು. ಆದರೆ, ಇವರ ಕಳ್ಳತನವನ್ನು ತಡೆಯಲು ಕೊಲೆ ಮಾಡುವುದು ನ್ಯಾಯವೇ ಎಂಬುದು ಮೃತ ಗಿರೀಶ್‌ನ ತಾಯಿಯ ಪ್ರಶ್ನೆ.

ಪೆದ್ದನಹಳ್ಳಿ ಗಿರೀಶನ ಜೊತೆಯೇ ಕೊಲೆಯಾದ ಮಂಚಲದೊರೆ ಗಿರೀಶ್ ಅವರ ತಾಯಿ ಚಿಕ್ಕತಾಯಮ್ಮ ಅವರ ನೋವು ಮತ್ತೊಂದು ರೀತಿಯದ್ದು, ತಂದೆಯೂ ಇಲ್ಲ, ಇದ್ದೊಬ್ಬ ತಮ್ಮ ಇಲ್ಲ. ಗಂಡನೂ ಇಲ್ಲ. ಇಡೀ ಕುಟುಂಬಕ್ಕೆ ಗಂಡು ದಿಕ್ಕಿಲ್ಲದಂತಾಗಿದೆ. ಇಟ್ಟಿಗೆ ಗೂಡಿನಲ್ಲಿ ಕೆಲಸ ಮಾಡುತ್ತಿದ್ದ ನನ್ನ ತಮ್ಮನನ್ನು ಇಷ್ಟು ಕ್ರೂರವಾಗಿ ಕೊಲೆ ಮಾಡಲು, ಆತ ಮಾಡಿದ ತಪ್ಪೇನು? ನನಗೆ ದಿಕ್ಕು ಯಾರು ಎಂಬುದು ಅವರ ಪ್ರಶ್ನೆ.

ಸೌಜನ್ಯಕ್ಕೂ ಭೇಟಿ ನೀಡದ ಜನಪ್ರತಿನಿಧಿಗಳು: ಶಿವಮೊಗ್ಗದ ಹರ್ಷ ಕೊಲೆ, ಬೆಂಗಳೂರಿನ ಚಂದ್ರು ಕೊಲೆಗೆ ಸಂಬಂಧಿಸಿ ಮುಖ್ಯಮಂತ್ರಿಯೇ ಮೃತರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದ್ದಲ್ಲದೇ, 25 ಲಕ್ಷ ರೂ. ಪರಿಹಾರ ನೀಡಿದರು. ಆದರೆ, ಘಟನೆ ನಡೆದು 5 ದಿನ ಕಳೆದರೂ ಓರ್ವ ಗ್ರಾಪಂ ಸದಸ್ಯನೂ ಇಲ್ಲಿಯವರೆಗೂ ಕುಟುಂಬಸ್ಥರನ್ನು ಭೇಟಿ ನೀಡಿ ಸಾಂತ್ವನ ಹೇಳಿಲ್ಲ. ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿ, ಪ್ರಾದೇಶಿಕ ಪಕ್ಷವಾದ ಜೆಡಿಎಸ್ ಪಕ್ಷವೂ ಧ್ವನಿ ಎತ್ತಿಲ್ಲ. ಹಾಗಾದರೆ ದಲಿತ ಯುವಕರ ಪ್ರಾಣಗಳಿಗೆ ಬೆಲೆ ಇಲ್ಲವೇ ಎಂಬುದು ದಲಿತ ಮುಖಂಡರ ಪ್ರಶ್ನೆಯಾಗಿದೆ.

ನನ್ನ ತಮ್ಮನ ಸಾವಿಗೆ ನ್ಯಾಯ ದೊರೆಯಬೇಕು. ಆತ ಮ್ಯಾನುವೆಲ್ ಸ್ಕಾವೆಂಜರ್ ಕೆಲಸ ಮಾಡುತ್ತಿದ್ದ. ತಮ್ಮ ಊರಿನ ಯಾವುದೇ ಕೆಲಸಗಳಿಗೆ ಮುಂದೆ ನಿಲ್ಲುತಿದ್ದ, ಇಂತಹ ವ್ಯಕ್ತಿಯನ್ನು ಅಷ್ಟೊಂದು ಅಮಾನುಷವಾಗಿ ಕೊಲೆ ಮಾಡಲು ಮನಸ್ಸಾದರೂ ಹೇಗೆ ಬಂತು. ಹಾಗಾಗಿ ನಾವು ಎಂದಿಗೂ ಯಾರೊಂದಿಗೂ ರಾಜಿಯಾಗುವುದಿಲ್ಲ. ನ್ಯಾಯ ಸಿಗುವವರೆಗೂ ಹೋರಾಟ ನಡೆಸುತ್ತೇವೆ*.

-ಶ್ರೀಧರ್, ಪೆದ್ದನಹಳ್ಳಿ ಗಿರೀಶ್ ಸಹೋದರ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News