×
Ad

ಸಹಾಯಕ ಪ್ರೊಫೆಸರ್ ಪರೀಕ್ಷೆ ಪ್ರಶ್ನೆಪತ್ರಿಕೆ ಸೋರಿಕೆ: ಕರ್ನಾಟಕ ವಿವಿ ಉನ್ನತಾಧಿಕಾರಿ ಶಾಮೀಲು?

Update: 2022-04-27 07:29 IST

ಧಾರವಾಡ: ಕಳೆದ ತಿಂಗಳು ಬೆಳಕಿಗೆ ಬಂದ ಕರ್ನಾಟಕ ವಿವಿ ಸಹಾಯಕ ಪ್ರೊಫೆಸರ್ ಪರೀಕ್ಷೆ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮಂಗಳವಾರ ಕರ್ನಾಟಕ ವಿವಿ ರಿಜಿಸ್ಟ್ರಾರ್ (ಮೌಲ್ಯಮಾಪನ) ಅವರನ್ನು ಪ್ರಶ್ನಿಸಿದ್ದಾರೆ. ಈ ಹಿನ್ನೆಲೆಯಲ್ಲಿ ವಿವಿ ಉನ್ನತಾಧಿಕಾರಿ ಈ ಪ್ರಕರಣದಲ್ಲಿ ಷಾಮೀಲಾಗಿದ್ದಾರೆಯೇ ಎಂಬ ಅನುಮಾನ ದಟ್ಟವಾಗಿದೆ ಎಂದು deccanherald.com ವರದಿ ಮಾಡಿದೆ.

ಪ್ರಸ್ತುತ ಧಾರವಾಡದಲ್ಲಿರುವ ಡಾ.ಎಚ್.ನಾಗರಾಜ್ ಅವರು, ಭೂಗೋಳಶಾಸ್ತ್ರ ಪ್ರಶ್ನೆಪತ್ರಿಕೆ ಸಿದ್ಧಪಡಿಸಿದ್ದ ವಿಷಯ ತಜ್ಞರಾಗಿದ್ದು, ಈ ಪ್ರಶ್ನೆಪತ್ರಿಕೆ ಮಾರ್ಚ್ 14ರಂದು ಪರೀಕ್ಷೆ ಆರಂಭಕ್ಕೆ ಅರ್ಧ ಗಂಟೆ ಮುನ್ನ ಸೋರಿಕೆಯಾಗಿತ್ತು. ಕನಾಟಕದ ಪದವಿ ಕಾಲೇಜುಗಳಲ್ಲಿ ಸಹಾಯಕ ಪ್ರೊಫೆಸರ್‌ ಗಳನ್ನು ನೇಮಕ ಮಾಡಿಕೊಳ್ಳಲು ಈ ಪರೀಕ್ಷೆ ನಡೆಸಲಾಗಿತ್ತು.

ಈ ಬಗ್ಗೆ ಪ್ರತಿಕ್ರಿಯೆ ಬಯಸಿ ಮಾಡಿದ ಕರೆ ಮತ್ತು ಮೆಸೇಜ್‍ಗೆ ನಾಗರಾಜ್ ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಪ್ರಶ್ನೆಪತ್ರಿಕೆ ಸೋರಿಕೆ ಸಂಬಂಧಿಸಿದಂತೆ ಬೆಂಗಳೂರು ಪೊಲೀಸರು ರಿಜಿಸ್ಟ್ರಾರ್ ಅವರನ್ನು ಪ್ರಶ್ನಿಸಿದರು ಎನ್ನಲಾಗಿದೆ. ಅದೇ ದಿನ ಸಂಜೆ ಪೊಲೀಸರು ಅವರನ್ನು ಹಾಗೂ 32 ವರ್ಷ ವಯಸ್ಸಿನ ಸೌಮ್ಯ ಎಂಬ ಅತಿಥಿ ಉಪನ್ಯಾಸಕಿಯನ್ನು ಕೋರ್ಟ್ ವಾರೆಂಟ್ ಪಡೆದು ಅವರ ನಿವಾಸಗಳಲ್ಲಿ ಶೋಧ ನಡೆಸಲು ಕರೆದೊಯ್ದಿದ್ದಾರೆ. ಇಬ್ಬರೂ ಮೈಸೂರಿನವರು.

ಸೋಮವಾರ ಬೆಂಗಳೂರು ಪೊಲೀಸರು ಸೌಮ್ಯ ಅವರನ್ನು ಬಂಧಿಸಿದ್ದರು. ಸೌಮ್ಯ ತಮ್ಮ ಕೆಲ ಸ್ನೇಹಿತರಿಗೆ ಸೋರಿಕೆಯಾದ ಪ್ರಶ್ನೆಪತ್ರಿಕೆಯ ಕೆಲ ಪ್ರಶ್ನೆಗಳನ್ನು ವಾಟ್ಸಪ್ ಮೂಲಕ ಕಳುಹಿಸಿದ್ದರು ಎಂಬ ಶಂಕೆಯಿಂದ ಅವರನ್ನು ಬಂಧಿಸಲಾಗಿತ್ತು.

ಡಾ.ನಾಗರಾಜ್ ಅವರು ಪ್ರಶ್ನೆಪತ್ರಿಕೆ ಸಿದ್ಧಪಡಿಸಿದ ತಂಡದ ಭಾಗವಾಗಿದ್ದರು ಹಾಗೂ ಸೌಮ್ಯರ ಪಿಎಚ್‍ಡಿ ಗೈಡ್ ಆಗಿದ್ದರು ಎನ್ನುವುದನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಮೂಲಗಳು ಸ್ಪಷ್ಟಪಡಿಸಿವೆ. ಧಾರವಾಡಕ್ಕೆ ವರ್ಗಾವಣೆಯಾಗುವ ಮುನ್ನ ಅವರು ಮೈಸೂರು ವಿವಿಯಲ್ಲಿ ಭೂಗೋಳಶಾಸ್ತ್ರ ಪ್ರೊಫೆಸರ್ ಆಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News