×
Ad

ಎ.28ಕ್ಕೆ ಎಸ್ ಡಿ ಎಂ ಸಿ ಸಂಸ್ಥಾಪನಾ ದಿನಾಚರಣೆ-ನಾಗರಿಕ ಸನ್ನದು ಬಿಡುಗಡೆ

Update: 2022-04-27 13:35 IST
        ನಿರಂಜನಾರಾಧ್ಯ.ವಿ.ಪಿ 

ಬೆಂಗಳೂರು: ದೇಶದಲ್ಲಿಯೇ ಮೊದಲ ಬಾರಿಗೆ ರಾಜ್ಯದಲ್ಲಿ ಶಾಲಾ ಹಂತದಲ್ಲಿ ಜಾರಿಗೊಂಡ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳು  28.04.2022 ಕ್ಕೆ  21 ವರ್ಷಗಳನ್ನು ಮುಗಿಸಿ 22 ನೇ ವರ್ಷಕ್ಕೆ ಕಾಲಿಡುತ್ತಿವೆ . ಕರ್ನಾಟಕದಲ್ಲಿ ಶಾಲಾ ಹಂತದ ಶಾಲಾಭಿವೃದ್ಧಿ ಹಾಗು ಮೇಲುಸ್ತುವಾರಿ ಸಮಿತಿಗಳು ಜಾರಿಗೆ ಬಂದು 21 ವರ್ಷಗಳು ಮುಗಿದಿವೆ .ಈ ದಿನವನ್ನು ಶಾಲಾಭಿವೃದ್ಧಿ ಹಾಗು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆ ರಾಜ್ಯದಲ್ಲಿ ಪ್ರತೀವರ್ಷ  'ಎಸ್ ಡಿ ಎಂ ಸಿ ಸಂಸ್ಥಾಪನಾ ದಿನವನ್ನಾಗಿ' ಆಚರಿಸುತ್ತಿದೆ ಎಂದು ಶಾಲಾಭಿವೃದ್ಧಿ -ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆ ತಿಳಿಸಿದೆ.  

ಕಳೆದ ಎರಡು ದಶಕದಿಂದ ಎಸ್ ಡಿ ಎಂ ಸಿ ಸಮನ್ವಯ ವೇದಿಕೆ  ಶಾಲಾ ಹಂತದಲ್ಲಿ ಎಸ್ ಡಿ ಎಂ ಸಿಗಳನ್ನು  ಗಟ್ಟಿಗೊಳಿಸಿ ಪ್ರತಿಯೊಂದು ಸರ್ಕಾರಿ ಶಾಲೆಯನ್ನು ನೆರೆಹೊರೆಯ ಸಮಾನ ಶಾಲೆಯನ್ನಾಗಿ ಪರಿವರ್ತಿಸಿ ಎಲ್ಲಾ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ಒದಗಿಸುವ  ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದೆ. ಶಾಲೆಗೆ ಸರ್ಕಾರದಿಂದ ಒದಗಿಸುವ ಶಾಲಾ ಅನುದಾನಗಳನ್ನು ಬಳಸಿ ಶಾಲೆಗಳನ್ನು ಅಭಿವೃದ್ಧಿಪಡಿಸುವುದು, ಶಾಲೆಗಳ ಮೂಲಭೂತ ಸೌಕರ್ಯಗಳನ್ನು ಉತ್ತಮ ಪಡಿಸಲು ದಾನಿಗಳಿಂದ ಸಂಪನ್ಮೂಲಗಳನ್ನು ಸಂಗ್ರಹಿಸುವುದು, ಸರ್ಕಾರದ ಅನುದಾನದಿಂದ ಮಕ್ಕಳಿಗೆ ಗುಣಮಟ್ಟದ ಷೂ, ಸಮವಸ್ತ್ರ , ಬೈಸಿಕಲ್ ಇತ್ಯಾದಿಗಳನ್ನು ಒದಗಿಸುವುದು, ಶಾಲಾ ಹಂತದಲ್ಲಿನ ಬಿಸಿಯೂಟದ ಗುಣಮಟ್ಟವನ್ನು ಹೆಚ್ಚಿಸಲು ಶ್ರಮಿಸುವುದು, ಹೀಗೆ ಹತ್ತು ಹಲವು ಕೆಲಸಗಳಲ್ಲಿ ಎಸ್ ಡಿ ಎಂಸಿ ತೊಡಗಿಸಿಕೊಂಡ  ಪರಿಣಾಮ , ಇಂದು ಸರ್ಕಾರಿ ಶಾಲೆಗಳು ದೊಡ್ಡಮಟ್ಟದಲ್ಲಿ ಸುಧಾರಣೆಯಾಗುತ್ತಿವೆ. ಆದರೆ, ಸಾಗಬೇಕಾದ ದಾರಿ ಇನ್ನೂ ದೂರವಿದೆ. ಸಂವಿಧಾನಾತ್ಮಕವಾಗಿ ಶಿಕ್ಷಣ ಹಕ್ಕು ಕಾಯಿದೆಯನ್ನು ಪೂರ್ಣವಾಗಿ ಮತ್ತು  ಪ್ರಕರಣ 4,9,21,22  ಮತ್ತು 29 ನ್ನು ನಿರ್ಧಿಷ್ಟವಾಗಿ ಜಾರಿಗೊಳಿಸಲು ಅವಿರತವಾಗಿ ಶ್ರಮಿಸುತ್ತಿವೆ. 
                                                                                                                                                                        ನಾಳೆ , ಅಂದರೆ 28.04.2022 ರಂದು ಆಚರಿಸುತ್ತಿರುವ 21 ನೇ ವಾರ್ಷಿಕ  ಸಂಸ್ಥಾಪನಾ ದಿನವನ್ನು ಶಾಲಾಭಿವೃದ್ಧಿ ಹಾಗು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆ “ಎಲ್ಲಾ ಮಕ್ಕಳಿಗೆ ಸಮಾನ ಗುಣಮಟ್ಟದ ಶಾಲಾ ಶಿಕ್ಷಣದ ಸಾರ್ವತ್ರೀಕರಣಕ್ಕಾಗಿ ನಾಗರೀಕ ಸನ್ನದನ್ನು ಜಾರಿಗೊಳಿಸಲು ಒತ್ತಾಯಿಸುವ ದಿನವನ್ನಾಗಿ ಆಚರಿಸುತ್ತಿದೆ .ಇದಕ್ಕಾಗಿ ತನ್ನದೇ ಆದ ನಾಗರೀಕ ಸನ್ನದನ್ನು ರೂಪಿಸಿ ಅಂದು ಸಂಬಂಧಿಸಿದ ಅಧಿಕಾರಿಗಳ ಮೂಲಕ ಸರ್ಕಾರಕ್ಕೆ ಸಲ್ಲಿಸುತ್ತಿದೆ. 

ಜೊತೆಗೆ ಮುಂದಿನ 2023 ರ ಚುನಾವಣೆಯಲ್ಲಿ ಪ್ರತಿಯೊಂದು ಸರ್ಕಾರಿ ಶಾಲೆಯನ್ನು ನೆರೆಹೊರೆಯ ಸಮಾನ ಶಾಲೆಯನ್ನಾಗಿ ಪರಿವರ್ತಿಸಿ ಎಲ್ಲಾ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ಒದಗಿಸುವ ವಿಷಯವನ್ನು ಒಂದು ಪ್ರಮುಖ ಚುನಾವಣೆಯ ವಿಷಯನ್ನಾಗಿಸುವ ನಿಟ್ಟಿನಲ್ಲಿ ವೇದಿಕೆ ಸಿದ್ಧತೆ ನಡೆಸಿದೆ. ಮುಂದಿನ ಚುನಾವಣಾ ವೇಳೆಗೆ ಯಾರು ಸರಕಾರಿ ಶಾಲೆ ಮತ್ತು ಎಸ್ಡಿಎಂಸಿಯನ್ನು ಗಟ್ಟಿಗೊಳಿಸಲು ಬದ್ಧವಾಗಿದ್ದರೋ ಅವರಿಗೆ ಮಾತ್ರ ಮತ ಹಾಕಬೇಕು ಎಂಬ ಚಿಂತನೆಯನ್ನು ನಡೆಸಿದೆ  . ಈ ನಿಟ್ಟಿನಲ್ಲಿ 2023 ರ ಚುನಾವಣೆಯಲ್ಲಿ ಯಾರು ಸರಕಾರಿ ಶಾಲೆ ಮತ್ತು ಎಸ್ಡಿಎಂಸಿಯನ್ನು ಗಟ್ಟಿಗೊಳಿಸಲು ಬದ್ಧವಾಗಿದ್ದಾರೆ ಹಾಗು ಯಾರು ಕಾಯಾ ವಾಚಾ ಮನಸಾ ಪ್ರತೀ ಸರ್ಕಾರಿ ಶಾಲೆಯನ್ನು ನೆರೆಹೊರೆಯ ಸಮಾನ ಶಾಲೆಯನ್ನಾಗಿಸಿ ಎಲ್ಲಾ ಮಕ್ಕಳಿಗೆ ಗುಣಮಟ್ಟ ಶಿಕ್ಷಣ ಒದಗಿಸಲು ಬದ್ಧರಾಗಿದ್ದಾರೋ ಅವರಿಗೆ ಮಾತ್ರ ನಮ್ಮ  ಮತ  ಎಂಬುದನ್ನು  ವೇದಿಕೆ ಈಗಿನಿಂದಲೇ ಸಾರಿ ಸಾರಿ ಹೇಳಬೇಕೆಂದು ತನ್ನ ಸದಸ್ಯರಿಗೆ ಕರೆ ನೀಡುತ್ತದೆ. 

ಈ ಮಧ್ಯೆ  ಕಳೆದ ನಾಲ್ಕಾರು ತಿಂಗಳಿಂದ ನಮ್ಮ ರಾಜ್ಯದಲ್ಲಿ ಅದರಲ್ಲೂ ವಿಶೇಷವಾಗಿ ಶಿಕ್ಷಣ ವಲಯದಲ್ಲಿನ ಬೆಳವಣಿಗೆಗಳು ವೇದಿಕೆಗೆ ಆತಂಕ ಮೂಡಿಸಿವೆ. ಶಾಂತಿ, ಪ್ರೀತಿ, ಸೌಹಾರ್ದತೆ , ಸಹಬಾಳ್ವೆ , ಸಹಕಾರ , ಸಮನ್ವಯತೆ ಇರಬೇಕಾದ ಜಾಗದಲ್ಲಿ ದ್ವೇಷ, ಅಸೂಯೆ , ಒಡೆದಾಟ , ಭಯ-ಬೆದರಿಕೆ ಹುಟ್ಟಿಸುವ ಕೆಲಸಗಳು ನಡೆಯುತ್ತಿವೆ . ಶಿಕ್ಷಣ ಕ್ಷೇತ್ರದಲ್ಲಿ ಹಿಜಾಬ್, ಪಠ್ಯ ಬದಲಾವಣೆ, ನೀತಿ ಶಿಕ್ಷಣ, ಇತ್ಯಾದಿಗಳ  ಹೆಸರಿನಲ್ಲಿ ಶಿಕ್ಷಣವನ್ನು  ಧಾರ್ಮೀಕರಣ ಹಾಗು ರಾಜಕೀಯಕರಣಗೊಳಿಸಿ , ಮಕ್ಕಳಲ್ಲಿ ಪರಸ್ಪರ  ದ್ವೇಷ ಬಿತ್ತಿ-ಬೆಳೆಸುವ ಕೆಲಸಗಳು ನಿರಂತರವಾಗಿ ನಡೆಯುತ್ತಿವೆ. ಶಿಕ್ಷಣ ಕ್ಷೇತ್ರ ರಾಜಕೀಯದಿಂದ ಹೊರತಾಗಿದ್ದು , ಮಕ್ಕಳಲ್ಲಿ ವೈಜ್ಞಾನಿಕ, ಜಾತ್ಯತೀತ ಹಾಗು ಸಾಂವಿಧಾನಿಕ ಮೌಲ್ಯಗಳನ್ನು ಬೆಳೆಸುವ ನಿಟ್ಟಿನಲ್ಲಿ ಶಿಕ್ಷಣ ವ್ಯವಸ್ಥೆ ರೂಪಗೊಳ್ಳಬೇಕಿದೆ.  ನಮ್ಮ ಕರ್ನಾಟಕ ಕುವೆಂಪುರವರು ಕಂಡಂತೆ  “ಸರ್ವಜನಾಂಗದ ಶಾಂತಿಯ ತೋಟ”. ಅದನ್ನು ಶಾಂತಿಯ ತೋಟವಾಗಿಯೇ  ಉಳಿಸಬೇಕು . ಅದನ್ನು “ದ್ವೇಷದ ತೋಟವನ್ನಾಗಿಸಲು”ಹೊರಟಿರುವವರ ಬಗ್ಗೆ ಎಸ್ ಡಿ ಎಂಸಿ ಗಳು  ಎಚ್ಚರಿಕೆಯಿಂದ ಇರಬೇಕು . ಇದರ ಭಾಗವಾಗಿ ಶಾಲಾ ಹಂತದಲ್ಲಿ ಎಲ್ಲ ಸಮುದಾಯದ ಗೆಳೆಯರನ್ನು ಒಳಗೊಂಡ ಶಾಂತಿ ಮತ್ತು ಸೌಹಾರ್ದತಾ ಸಮಿತಿಗಳನ್ನು ರಚಿಸಬೇಕೆಂದು ವೇದಿಕೆ ಈ ಸಂದರ್ಭದಲ್ಲಿ ಕರೆ ನೀಡುತ್ತದೆ  . 
                                                                                                                                                                ಮತ್ತೊಂದು ಆತಂಕದ ವಿಷವೆಂದರೆ , ಶಿಕ್ಷಣ ಇಲಾಖೆಯ ಮೇಲಿನ ವಿವಿಧ ಹಂತಗಳಲ್ಲಿ ನಡೆಯುವ ಭ್ರಷ್ಠಾಚಾರವನ್ನು ಎಸ್ ಡಿ ಎಂ ಸಿಗೆ ತಲೆಗೆ ಕಟ್ಟುವ ಮತ್ತು ಎಸ್ ಡಿ ಎಂ ಸಿ ಗಳು ಏನೂ ಮಾಡುತ್ತಿಲ್ಲವೆಂಬ ಸುಳ್ಳು ಆರೋಪಗಳನ್ನು ಮಾಡಲಾಗುತ್ತಿದೆ . ಜೊತೆಗೆ ಶಾಲಾ ಹಂತದಲ್ಲಿ , ಅನಗತ್ಯವಾಗಿ ಶಾಸಕರು ಶಾಲೆಯ ಆಗುಹೋಗುಗಳಲ್ಲಿ ರಾಜಕೀಯ ಹಸ್ತಕ್ಷೇಪ ಮಾಡುತ್ತಿದ್ದು , ಮಕ್ಕಳು ಶಾಲೆಗಳಲ್ಲಿ ಓದದಿದ್ದರು ಕಾನೂನನಿಗೆ ವಿರುದ್ಧವಾಗಿ  ಅವರ ಅಧಿಕಾರವನ್ನು  ದುರ್ಬಳಕೆ ಮಾಡಿಕೊಂಡು ಪಕ್ಷದ ಕಾರ್ಯಕರ್ತರನ್ನು ಎಸ್ ಡಿ ಎಂ ಸಿ ಸದಸ್ಯರು ಮತ್ತು ಪದಾಧಿಕಾರಿಗಳನ್ನಾಗಿ ನಾಮನಿರ್ದೇಶನ ಮಾಡುವ ಕೆಲಸದಲ್ಲಿ ತೊಡಗಿದ್ದಾರೆ. ಇದು ಕಾನೂನುಬಾಹಿರ ಹಾಗು ಶಿಕ್ಷಣ ಹಕ್ಕು ಕಾಯಿದೆಯ ಸ್ಪಷ್ಟ ಉಲ್ಲಂಘನೆಯಾಗಿದೆ.ಆದರೆ, ಎಸ್ ಡಿ ಎಂ ಸಿಗಳು ಇದಕ್ಕಾಗಿ ಹೊರತಾಗಿದ್ದು , ಸರ್ಕಾರಿ ಶಾಲೆಗಳನ್ನು ಗಟ್ಟಿಗೊಳಿಸಲು ಶಕ್ತಿಮೀರಿ ಪ್ರಯತ್ನಿಸುತ್ತಿವೆ.  ಅದು ಶಾಲಾ ಹಂತದಲ್ಲಿ ಕಾರ್ಯನಿರ್ವಹಿಸುವ ನಮ್ಮ ಎಲ್ಲಾ ಶಿಕ್ಷಕರಿಗೆ ತಿಳಿದಿದೆ.  ಎಸ್ ಡಿ ಎಂ ಸಿ ಸದಸ್ಯರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಕಳಿಸದಿದ್ದರೆ ಶಿಕ್ಷಣ ಇಲಾಖೆಗೆ ಅಸ್ತಿತ್ವವೇ ಇಲ್ಲವೆಂಬುದನ್ನು ಇಲಾಖೆ ಅರಿಯಬೇಕಿದೆ ಎಂದು ಸಮಿತಿ ತಿಳಿಸಿದೆ. 

28.04.2022 ರಂದು  ಎಸ್ಡಿಎಂಸಿ  21  ನೇ ವರ್ಷದ ಸಂಸ್ಥಾಪನಾ ದಿನದ  ಎಲ್ಲಾ ಮಕ್ಕಳಿಗೆ ಸಮಾನ ಗುಣಮಟ್ಟದ ಶಾಲಾ ಶಿಕ್ಷಣದ ಸಾರ್ವತ್ರೀಕರಣಕ್ಕಾಗಿ ಕರ್ನಾಟಕ ರಾಜ್ಯ  ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆಯು ಒಂದು  ನಾಗರೀಕ ಸನ್ನದನ್ನು ತಯಾರಿಸಿದ್ದು ಅದನ್ನು  ಬಿಡುಗಡೆ  ಮಾಡುತ್ತಿದೆ ಎಂದು ಶಾಲಾಭಿವೃದ್ಧಿ -ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆಯ ಮಹಾ ಪೋಷಕ ಹಾಗೂ ಶಿಕ್ಷಣ ತಜ್ಞ ನಿರಂಜನಾರಾಧ್ಯ.ವಿ.ಪಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ. 

ನಾಗರಿಕ ಸನ್ನದಿನ ಬೇಡಿಕೆಗಳು ಕೆಳಗಿನಂತಿವೆ

1. ಸರ್ಕಾರ ಶಿಕ್ಷಣವನ್ನು ತಾತ್ವಿಕವಾಗಿ ಒಂದು ಸಾಮಾಜಿಕ ಒಳಿತು ಮತ್ತು ಸಾಮಾಜಿಕ ಪರಿವರ್ತನೆಯ  ಸಾಧನವನ್ನಾಗಿ ಪರಿಗಣಿಸಬೇಕು.

2. ಭಾರತದ ಸಂವಿಧಾನ ಹಾಗು ಇತರೆ ಅಂತರಾಷ್ಟ್ರೀಯ ಕಾನೂನು/ ಒಡಂಬಡಿಕೆ/ ಒಪ್ಪಂದ/ ಘೋಷಣೆಗಳ ಚೌಕಟ್ಟಿನಲ್ಲಿ ಶಿಕ್ಷಣವನ್ನು ಮೂಲಭೂತ ಹಕ್ಕು ಎಂಬುದನ್ನು ಗುರುತಿಸಿ ಗೌರವಿಸಿ , ಆ ಮೂಲಕ  ಮೂಲಭೂತ ಹಕ್ಕನ್ನು  ಸಾಕಾರಗೊಳಿಸಲು ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು.
                                                                                                                                                                        3. ಶಿಕ್ಷಣ ಸಾಮಾಜಿಕ ಒಳಿತು ಎಂಬ ಹಿನ್ನೆಲೆಯಲ್ಲಿ ಅದನ್ನು ಸಾಕಾರಗೊಳಿಸುವ ಭಾಗವಾಗಿ ಸರ್ಕಾರ ಅಗತ್ಯ ಸಂಪನ್ಮೂಲಗಳನ್ನು ಒದಗಿಸಬೇಕು .ಈ ನಿಟ್ಟಿನಲ್ಲಿ, ಕೇಂದ್ರ ಸರ್ಕಾರ ತನ್ನ ರಾಷ್ಟ್ರೀಯ ಒಟ್ಟು ಉತ್ಪನ್ನದಲ್ಲಿ (ಜಿ.ಡಿ.ಪಿ) ಕನಿಷ್ಠ ಶೇಕಡಾ 10 ಹಾಗು ರಾಜ್ಯ ಸರ್ಕಾರಗಳು ತಮ್ಮ ಆಯವ್ಯಯದಲ್ಲಿ ಕನಿಷ್ಟ ಶೇಕಡಾ 25 ರಷ್ಟನ್ನು ಶಿಕ್ಷಣಕ್ಕೆ ಮೀಸಲಿಡಬೇಕು 
                                                                                                                                                                         4. ಶಿಕ್ಷಣವನ್ನು ಕೇವಲ ಓದು ಬರಹ ಲೆಕ್ಕಾಚಾರಕ್ಕೆ ಮಾತ್ರ ಸೀಮಿತಗೊಳಿಸದೆ ಸಮಾಜಕ್ಕೆ ಉತ್ತಮ ನಾಗರೀಕರನ್ನು ನೀಡುವ ಮತ್ತು ಪ್ರಜಾಸತ್ತೆಯನ್ನು ಬಲವರ್ಧನೆಗೊಳಿಸುವ ಪ್ರಜಾಸತ್ತಾತ್ಮಕ ಪ್ರಕ್ರಿಯೆಯನ್ನಾಗಿಸಬೇಕು  .ಈ ನಿಟ್ಟಿನಲ್ಲಿ , ಹಾಲಿ ಮಾಹಿತಿ ಒದಗಿಸುವ ವಿಧಾನದ ಬದಲು ರಚನಾವಾದದ ಮೂಲಕ ಈಗಾಗಲೇ ಮಕ್ಕಳಲ್ಲಿರುವ ಭಾಷಾ ಸಾಮರ್ಥ್ಯ,  ವೃತ್ತಿಪರ ಕೌಶಲ್ಯ, ಒಳಹು, ಕಲಿಕೆ ಮತ್ತು ಅನುಭವಗಳನ್ನು ಆಧರಿಸಿ ಜ್ಞಾನ ಕಟ್ಟಿಕೊಡುವ ಹೊಸ ವಿಧಾನಗಳನ್ನು ಬಳಸಲು ¸ ಸಮರ್ಥವಾದ ವೃತ್ತಿ ಪರಿಣಿತಿಯಿರುವ ಶಿಕ್ಷಕರನ್ನು ರೂಪಿಸಲು ಶಿಕ್ಷಕರ ಶಿಕ್ಷಣದಲ್ಲಿ ಸಮಗ್ರ ಬದಲಾವಣೆ ತರಬೇಕು. 
                                                                                                                                                                        5. ಇಂದಿನ ಸಾಮಾಜಿಕ ಆರ್ಥಿಕ ಸಾಂಸ್ಕೃತಿಕ ಮತ್ತು ಜಾಗತಿಕ ಅಗತ್ಯಗಳಿಗೆ ಅನುಗುಣವಾಗಿ ಹುಟ್ಟಿನಿಂದ 18 ವರ್ಷದ ಎಲ್ಲಾ ಮಕ್ಕಳಿಗೆ ವರ್ಗ ಭೇದ ಜಾತಿ ಧರ್ಮ ಸಾಮಾಜಿಕ-ಆರ್ಥಿಕ ಬೇಧ ಭಾವವಿಲ್ಲದೆ ಆರೈಕೆ , ರಕ್ಷಣೆ ಹಾಗು ಗುಣಾತ್ಮಕ ಶಿಕ್ಷಣವನ್ನು ಹುಟ್ಟಿನಿಂದ ಮೂರು ವರ್ಷದ ಮಕ್ಕಳಿಗೆ  ನೆರೆಹೊರೆಯ ತತ್ವದ ಶಿಶುಪಾಲನಾ ಕೇಂದ್ರ , 4 ರಿಂದ 10 ವರ್ಷದ ಮಕ್ಕಳಿಗೆ ಪೂರ್ವ- ಪ್ರಾಥಮಿಕ  ಶಿಕ್ಷಣದಿಂದ ನಾಲ್ಕನೇ ತರಗತಿಯವರೆಗೆ ನೆರೆಹೊರೆಹೊರೆಯ  ಪ್ರಾಥಮಿಕ ಶಾಲೆಯಲ್ಲಿ ಬುನಾದಿ ಶಿಕ್ಷಣ ಮತ್ತು 11 ರಿಂದ 18 ವರ್ಷದ ಮಕ್ಕಳಿಗೆ  ಐದನೇ ತರಗತಿಯಿಂದ 12ನೇ ತರಗತಿಯವರೆಗೆ ಪಂಚಾಯತಿ/ವಾರ್ಡ ಮಟ್ಟದ ನೆರೆಹೊರೆಯ ಸಮಾನ ಶಾಲೆಯಲ್ಲಿ ಗುಣಮಟ್ಟದ ಶಾಲಾ ಶಿಕ್ಷಣವನ್ನು ಒದಗಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು 
                                                                                                                                                                        6. ಸಮಾನ ಶಾಲೆಗಳಲ್ಲಿ ಶಿಕ್ಷಣ ಮಾಧ್ಯಮ ಕಡ್ಡಾಯವಾಗಿ ಮಗುವಿನ ಮಾತೃ ಭಾಷೆಯಲ್ಲಿದ್ದು ಆಂಗ್ಲ ಭಾಷೆ ಅಥವಾ ನಮ್ಮ ಸಂವಿಧಾನದಲ್ಲಿ ಗುರುತಿಸಿರುವ  ಎಲ್ಲಾ 22 ರಾಷ್ಟ್ರೀಯ ಭಾಷೆಗಳ ಪೈಕಿ ಮಗು ಕಲಿಯಲು ಇಚ್ಛಿಸುವ ಒಂದು ಅಥವಾ ಹೆಚ್ಚಿನ ಭಾಷೆಗಳನ್ನು  ಪ್ರಭುತ್ವದ ಮಟ್ಟಕ್ಕೆ ಕಲಿಸಲು  ಅಗತ್ಯ ಕ್ರಮ ಕೈಗೊಳ್ಳಬೇಕು.
                                                                                                                                                                        7. ಸರ್ಕಾರಿ/ ಸಾರ್ವಜನಿಕ ಶಾಲೆಗಳ ಬಗ್ಗೆ ಜನ ಸಾಮಾನ್ಯರು ಭರವಸೆ ಕಳೆದುಕೊಂಡಿರುವ ಹಿನ್ನಲೆಯಲ್ಲಿ ಭರವಸೆಯನ್ನು  ಪುನರ್ ಮೂಡಿಸುವ ಭಾಗವಾಗಿ ಎಲ್ಲಾ ಜನ ಪ್ರತಿನಿಧಿಗಳು ಮತ್ತು  ಸರ್ಕಾರಿ ನೌಕರರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ದಾಖಲಿಸಬೇಕೆಂಬುದನ್ನು ಕಡ್ಡಾಯಗೊಳಿಸಬೇಕು .
                                                                                                                                                                        8. ಶಿಕ್ಷಣದ ಖಾಸಗೀಕರಣ ವ್ಯಾಪರೀಕರಣ ಹಾಗೂ ಶಿಕ್ಷಣವನ್ನು ಮಾರುಕಟ್ಟೆಯನ್ನಾಗಿಸುವ ಸರಕನ್ನಾಗಿಸುವ ಎಲ್ಲಾ ಪ್ರಯತ್ನಗಳನ್ನು ಸರ್ಕಾರ ಹತ್ತಿಕ್ಕಬೇಕು 
                                                                                                                                                                       9. ಸರ್ಕಾರ ಸಮಾನ ಗುಣಮಟ್ಟದ ಶಿಕ್ಷಣ ಒದಗಿಸುವ ಪ್ರಕ್ರಿಯೆಗೆ ಸಹಾಯಕವಾಗಿ ಭಾಗವಹಿಸಲು ಇಚ್ಚೆಪಡುವ ಖಾಸಗಿ ವ್ಯಕ್ತಿ/ಸಂಸ್ಥೆಗಳು ತಮ್ಮ ಕಾರ್ಪೋರೇಟ್ ಸಾಮಾಜಿಕ ಜವಾಬ್ದಾರಿಯ  ಭಾಗವಾಗಿ ಉದಾರವಾಗಿ ಸರ್ಕಾರ ಸ್ಥಾಪಿಸುವ ಸಮಾನ ಶಾಲಾ ಶಿಕ್ಷಣ ವ್ಯವಸ್ಥೆಯ ಮೂಲ ದತ್ತಿ ನಿಧಿಗೆ ಆರ್ಥಿಕ ಸಹಾಯವನ್ನು  ಒದಗಿಸುವ ಮೂಲಕ ಸರ್ಕಾರದ  ಪ್ರಕ್ರಿಯೆಗೆ  ಪೂರಕವಾಗಿ ಭಾಗವಹಿಸಲು ಸರ್ಕಾರ ಸೂಕ್ತ  ಸಾಂಸ್ಥಿಕ ವ್ಯವಸ್ಥೆಯನ್ನು ರೂಪಿಸಬೇಕು  
                                                                                                                                                                        10. ಅವಸರವಾಗಿ ರಾಷ್ಟ್ರೀಯ ಶಿಕ್ಷಣ ನೀತಿ 2020ನ್ನು ಜಾರಿಗೊಳಿಸುವುದನ್ನು ಸ್ಥಗಿತಗೊಳಿಸಿ , ಎರಡೂ ಸದನದಲ್ಲಿ ಈ ನೀತಿಯ ಸಾಧಕ-ಬಾಧಕಗಳ ಬಗ್ಗೆ ಚರ್ಚಿಸಿಬೇಕು. 

11. ದೀರ್ಘಕಾಲದಲ್ಲಿ ಸಾಂವಿಧಾನಿಕ ಹಾಗು ಇತರೆ ಮಾನವ ಹಕ್ಕುಗಳ ಒಡಂಬಡಿಕೆ / ಘೋಷಣಗಳ  ಮೌಲ್ಯಗಳಿಗೆ  ಅನುಗುಣವಾಗಿ ಒಂದು ಬಲಿಷ್ಠ ಶಿಕ್ಷಣ ವ್ಯವಸ್ಥೆಯ  ಮೂಲಕ ಸಂವಿಧಾನದ ಮೂಲ ಆಶಯದಂತೆ ಸಾರ್ವಭೌಮ ಸಮಾಜವಾದಿ ಪ್ರಜಾಸತ್ತಾತ್ಮಕ ಗಣರಾಜ್ಯವನ್ನು ಸಮಾನತೆ ಮತ್ತು ಸಾಮಾಜಿಕ ನ್ಯಾಯದ ನೆಲೆಯಲ್ಲಿ ಕಟ್ಟಿಕೊಳ್ಳಲು ಅಗತ್ಯವಾದ ಧೀರ್ಘಕಾಲಿಕ  ಕರ್ನಾಟಕ ರಾಜ್ಯ ಶಿಕ್ಷಣ ನೀತಿಯನ್ನು ರೂಪಿಸಲು ಸಾವಯವ ಶಿಕ್ಷಣ ತಜ್ಞರನ್ನೊಳಗೊಂಡ  (ಎಸ್ಡಿಎಂಸಿ, ಶಿಕ್ಷಕರು ಅಂಗನವಾಡಿ ಹಾಗು ಪ್ರಾಯೋಗಿಕವಾಗಿ ಕೆಳಹಂತದಲ್ಲಿ ಕೆಲಸ ಮಾಡುತ್ತಿರುವ ಶಿಕ್ಷಣ ತಜ್ಞರು) ಸಮಾನ ಶಾಲಾ ಶಿಕ್ಷಣ ಆಯೋಗವನ್ನು ರಚಿಸಬೇಕು.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News