ರೇಷ್ಮೆಗೆ ಬಂದಿರುವ ‘ಫೆಬ್ರಿನ್ ರೋಗ ನಿಯಂತ್ರಣ'ಕ್ಕೆ ಸೂಚನೆ: ಸಚಿವ ಡಾ.ನಾರಾಯಣಗೌಡ
ಬೆಂಗಳೂರು, ಎ.27: ‘ರೇಷ್ಮೆಗೆ ಮಾರಕವಾಗಿರುವ ಫೆಬ್ರಿನ್ ರೋಗಕ್ಕೆ ಶೀಘ್ರದಲ್ಲೇ ಕಡಿವಾಣ ಹಾಕಬೇಕು ಎಂದು ರೇಷ್ಮೆ , ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವ ಡಾ.ನಾರಾಯಣಗೌಡ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಬುಧವಾರ ವಿಕಾಸಸೌಧದಲ್ಲಿ ಇಲಾಖೆ ಅಧಿಕಾರಿಗಳ ಜೊತೆ ಸಭೆ ನಡೆಸಿದ ಅವರು, ‘ಫೆಬ್ರಿನ್ ರೋಗ ನಿಯಂತ್ರಣಕ್ಕೆ ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ಪಡೆದರು. ಅಲ್ಲಲ್ಲಿ ಫೆಬ್ರಿನ್ ರೋಗ ಕಾಣಿಸಿಕೊಂಡಿದ್ದು, ರೈತರನ್ನು ಸಂಕಷ್ಟಕ್ಕೆ ತಳ್ಳಿದೆ. ರೈತರಿಗೆ ಯಾವುದೇ ರೀತಿ ಸಮಸ್ಯೆ ಆಗದ ರೀತಿಯಲ್ಲಿ ಎಚ್ಚರಿಕೆವಹಿಸಬೇಕು ಎಂದು ಸೂಚಿಸಿದರು.
ಅಲ್ಲಲ್ಲಿ ಫೆಬ್ರಿನ್ ರೋಗ ಕಾಣಿಸಿಕೊಳ್ಳುತ್ತಿದ್ದರೂ ಆರಂಭದಲ್ಲೇ ಸೂಕ್ತ ಕ್ರಮಕೈಗೊಳ್ಳದ ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡ ಸಚಿವರು, ನಿರ್ಲಕ್ಷ್ಯ ಮಾಡದೇ ನಿಯಂತ್ರಿಸಬೇಕು. ರೇಷ್ಮೆ ಹುಳುಗಳಿಗೆ ತಗುಲುವ ಗಂಟುರೋಗ ತಡೆಗಟ್ಟಲು ಇಲಾಖೆಯ ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ಕೇಂದ್ರ ರೇಶ್ಮೆ ಮಂಡಳಿ, ಕೆಎಸ್‍ಎಸ್‍ಆರ್‍ಡಿಐ ಸಂಸ್ಥೆಯ ವಿಜ್ಞಾನಿಗಳೊಂದಿಗೆ 4 ತಂಡಗಳನ್ನು ರಚಿಸಲಾಗಿದೆ ಎಂದರು.
‘ವಿಜ್ಞಾನಿಗಳ ತಂಡ ಕುಣಿಗಲ್, ಮಾಗಡಿ, ಕೋಲಾರ, ಚಿಕ್ಕಬಳ್ಳಾಪುರ ಸೇರಿದಂತೆ ಹಲವೆಡೆ ಸ್ಯಾಂಪಲ್ ಸಂಗ್ರಹಿಸಲಾಗಿದೆ. ಬಿತ್ತನೆ ಪ್ರದೇಶದಲ್ಲಿ ರೋಗಪತ್ತೆ ಹಚ್ಚಲು ಹಾಗೂ ಸೋಂಕು ನಿವಾರಣೆಗೆ ಅವಶ್ಯವಿರುವ 22 ತಾಂತ್ರಿಕ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಫೆಬ್ರಿನ್ ರೋಗ ರೇಷ್ಮೆ ಬೆಳೆಗಾರರಿಗೆ ಸಂಕಷ್ಟ ತಂದಿದೆ. ಉತ್ತಮ ಬೆಳೆಯ ನಿರೀಕ್ಷೆಯಲ್ಲಿದ್ದವರಿಗೆ ಫೆಬ್ರಿನ್ ನಷ್ಟ ಉಂಟು ಮಾಡುತ್ತಿದೆ. ಫೆಬ್ರಿನ್‍ನಿಂದ ಆಗುತ್ತಿರುವ ಸಮಸ್ಯೆಗಳ ಬಗ್ಗೆ ನನ್ನ ಅರಿವಿಗೆ ಬಂದ ಕೂಡಲೇ ಅಗತ್ಯ ಕ್ರಮಕೈಗೊಳ್ಳುವಂತೆ ಸೂಚಿಸಿದ್ದೆ.
ಇವತ್ತು ಮತ್ತೊಮ್ಮೆ ಅಧಿಕಾರಿಗಳ ಜೊತೆ ಸಭೆ ನಡೆಸಿ ಪರಿಶೀಲನೆ ನಡೆಸಿ, ಶೀಘ್ರದಲ್ಲೇ ಫೆಬ್ರಿನ್ ರೋಗಕ್ಕೆ ಕಡಿವಾಣ ಹಾಕುವಂತೆ ಸೂಚಿಸಿದ್ದೇನೆ. ನಾನೇ ಖುದ್ದಾಗಿ ಭೇಟ ನೀಡಿ ಪರಿಶೀಲಿಸುತ್ತೇನೆ. ಇದರ ಜೊತೆಗೆ ಬೆಂಗಳೂರಿನ ಓಕುಳೀಪುರಂನಲ್ಲಿ ನಿರ್ಮಿಸಲು ಉದ್ದೇಶಿಸಿರುವ ರೇಶ್ಮೆ ಭವನ ನಿರ್ಮಾಣದ ಪ್ರಗತಿ, ರಾಮನಗರ ಹೈಟೆಕ್ ರೇಶ್ಮೆ ಮಾರುಕಟ್ಟೆ ನಿರ್ಮಾಣ ಪ್ರಗತಿ ಕುರಿತು, ಕಲಬುರಗಿ ಹಾಗೂ ಹಾವೇರಿಯಲ್ಲಿ ಹೈಟೆಕ್ ರೇಶ್ಮೆಗೂಡಿನ ಮಾರುಕಟ್ಟೆ ನಿರ್ಮಾಣ ಹಾಗೂ ಕೆ.ಆರ್.ಪೇಟೆ ತಾಲೂಕಿನಲ್ಲಿ ರೇಶ್ಮೆ ಪಾರ್ಕ್ ಸ್ಥಾಪನೆ ಬಗ್ಗೆ ಪ್ರಗತಿ ಪರಿಶೀಲನೆ ನಡೆಸಿದರು.
ಇದರ ಜೊತೆಗೆ ರೇಶ್ಮೆ ನೂಲು ಮತ್ತು ಸೀರೆ ಉತ್ಪಾದನೆ ಹೆಚ್ಚಳಕ್ಕೆ ಸಂಬಂಧಿಸಿದಂತೆ ಸಚಿವರು ಅಧಿಕಾರಿಗಳ ಜೊತೆ ಚರ್ಚಿಸಿದರು. ಇಟಲಿಯನ್ ಎಆರ್‍ಎಂ ಅಳವಡಿಸುವ ಸಂಬಂಧ ಚರ್ಚಿಸಲಾಯಿತು. ಮೈಸೂರು ನೇಯ್ಗೆ ಕಾರ್ಖಾನೆಯಲ್ಲಿ ಎರಡು ಶಿಫ್ಟ್‍ನಲ್ಲಿ ಕಾರ್ಯನಿರ್ವಹಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು. ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ, ಕೆಎಸ್‍ಐಸಿ ಅಧ್ಯಕ್ಷ ಎಸ್.ಆರ್.ಗೌಡ, ಕೆಎಸ್‍ಎಂಬಿ ಸವಿತಾ ಅಮರಶೆಟ್ಟಿ, ಇಲಾಖೆ ಆಯುಕ್ತೆ ಸಿಂಧು ರೂಪೇಶ್, ಕೆಎಸ್‍ಐಸಿ ಎಂಡಿ ಜೋಸ್ನಾ, ಕೆಎಸ್‍ಎಂಬಿ ಎಂಡಿ ಅನುರಾಧ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.