ರಾಜಕೀಯದಲ್ಲಿ ಧರ್ಮ, ಜಾತೀಯತೆ ಮೇಲುಗೈ ಸಾಧಿಸುತ್ತಿದೆ: ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಆತಂಕ
ಮೈಸೂರು,ಎ.27: 'ರಾಜಕಾರಣದಲ್ಲಿ ಧರ್ಮವನ್ನು ಬೆರಸಬಾರದು. ಆದರೆ, ರಾಜಕೀಯದಲ್ಲಿ ಧರ್ಮ, ಜಾತೀಯತೆ ಮೇಲುಗೈ ಸಾಧಿಸುತ್ತಿದೆ' ಎಂದು ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಆತಂಕ ವ್ಯಕ್ತಪಡಿಸಿದರು.
ಮೈಸೂರು ವಿವಿ ಸಂಶೋಧಕರ ಸಂಘ, ದಲಿತ ವಿದ್ಯಾರ್ಥಿ ಒಕ್ಕೂಟ ಸಹಯೋಗದಲ್ಲಿ ಮಾನಸ ಗಂಗೋತ್ರಿಯ ಬಿಎಂಶ್ರೀ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರ 131ನೇ ಜನ್ಮದಿನಾಚರಣೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಭಾರತದ ಅಖಂಡತೆಯ ಸಾರ್ವಭೌಮತ್ವದ ತಳಹದಿ ಭಾರತೀಯ ಸಂವಿಧಾನ, ಈ ತಳಹದಿಯನ್ನು ಧರ್ಮ, ಜಾತೀಯತೆ, ಮತಾಂಧ ಶಕ್ತಿಗಳು ಭಂಗ ತರುತ್ತಿವೆ. ಧರ್ಮವನ್ನು ರಾಜಕಾರಣದಲ್ಲಿ ಬೆರೆಸಬಾರದು. ಆದರೆ, ರಾಜಕೀಯದಲ್ಲಿ ಧರ್ಮ, ಜಾತೀಯತೆ ಮೇಲುಗೈ ಸಾಧಿಸುತ್ತಿದೆ ಎಂದು ಹೇಳಿದರು.
ಬಾಬಾ ಸಾಹೇಬ್ ಡಾ.ಬಿ.ಆರ್. ಅಂಬೇಡ್ಕರ್ ಭಾರತೀಯತೆ ಎತ್ತಿ ಹಿಡಿದ ಮಹಾನ್ ನಾಯಕ. ಅವರಿಗೆ ಭಾರತೀಯತೆ ಮೂಲಗುರಿ ಮತ್ತು ಉದ್ದೇಶವಾಗಿತ್ತು ಎಂದು ಹೇಳಿದರು.
ಅಂಬೇಡ್ಕರ್ ಅವರು ಶ್ರೇಷ್ಠ ರಾಷ್ಟ್ರೀಯವಾದಿ. ಯಾವ ಧರ್ಮ, ಜಾತಿಯನ್ನು ದ್ವೇಷದಿಂದ ಕಂಡಿಲ್ಲ. ಎಲ್ಲ ಸವಾಲುಗಳನ್ನು, ನೋವುಗಳನ್ನು ಅಹಿಂಸಾತ್ಮಕ ಮಾರ್ಗದಿಂದಲೇ ಎದುರಿಸಿ ಭಾರತೀಯತೆಗೆ ಘನತೆ, ಗೌರವ ತಂದುಕೊಟ್ಟ ನಾಯಕ ಎಂದು ನುಡಿದರು.
ಅಂಬೇಡ್ಕರ್ ಹುಟ್ಟುಹಬ್ಬದಂದು ಅಸಮಾನತೆ ಸಮಾಜ ತೊಡೆದು ಹಾಕಿ ಸಮ ಸಮಾಜ ಹೆಜ್ಜೆ ಹಾಕಲು ಅಂಬೇಡ್ಕರ್ ಕೊಟ್ಟ ಮಾರ್ಗದರ್ಶನ ಅವಶ್ಯ ಎಂದು ವಿಶ್ವಸಂಸ್ಥೆ ಹೇಳಿದೆ. ಇವತ್ತಿನ ಪ್ರಪಂಚ ಎದುರಿಸುತ್ತಿರುವ ಧಾರ್ಮಿಕ, ಆರ್ಥಿಕ, ರಾಜಕೀಯ ಸವಾಲುಗಳಿಗೆ ಅಂಬೇಡ್ಕರ್ ಅವರ ಬಳಿ ಉತ್ತರವಿದೆ ಎಂದರು.
ಡಿಸಿಪಿ ಪ್ರದೀಪ್ ಗುಂಟಿ ಮಾತನಾಡಿ, ಮನುಷ್ಯ ಮನುಷ್ಯರ ಜಾತಿ ಗೋಡೆ ಇಲ್ಲ. ಮನಸ್ಥಿತಿಯಲ್ಲಿದೆ ಎಂದು ಅಂಬೇಡ್ಕರ್ ಹೇಳಿದ್ದಾರೆ. ಜಾತಿ ಗೋಡೆಗಳನ್ನು ವಿಭಜಿಸಿ ಮುಂದಕ್ಕೆ ಯಾವ ರೀತಿ ಹೋಗಬೇಕು ಎಂಬುದನ್ನು ಬಾಬಾ ಸಾಹೇಬರು ತೋರಿಸಿದ್ದಾರೆ ಎಂದರು.
ಅಂಬೇಡ್ಕರ್ ಅವರಿಗೆ ಶಾಲೆಯಲ್ಲಿ ಕುಳಿತುಕೊಳ್ಳುವ, ನೀರು ಕುಡಿಯುವ ಅವಕಾಶ ಇಲ್ಲ. ಆದರೆ, ಇವತ್ತು ಪ್ರತಿ ಸರ್ಕಾರಿ ಕಚೇರಿ, ಪ್ರತಿ ಊರಿನಲ್ಲೂ ಅಂಬೇಡ್ಕರ್ ಪ್ರತಿಮೆ ಇದೆ. ಇರಬೇಕು. ತಮ್ಮ ಎಲ್ಲ ಕಷ್ಟ, ಅವಮಾನಗಳನ್ನು ಮೀರಿ ಬೆಳೆದಿದ್ದರಿಂದ ಇದು ಸಾಧ್ಯವಾಯಿತು ಎಂಬುದನ್ನು ವಿದ್ಯಾರ್ಥಿಗಳು ತಿಳಿಯಬೇಕು ಎಂದರು.
ವಿದ್ಯಾರ್ಥಿಗಳು ಬಡತನ, ಜಾತಿ, ಅವಕಾಶ ಇಲ್ಲ ಎಂದು ಹೇಳಬಾರದು. ಅಂಬೇಡ್ಕರ್ ಎದುರಿಸಿದ ಪರಿಸ್ಥಿತಿ ಇದೆ0iÉುೀ? ಜ್ಞಾನವೇ ಶಕ್ತಿ ಎಂದು ಅಂಬೇಡ್ಕರ್ ನಂಬಿದ್ದರು. ಇದು ಮಾದರಿಯಾಗಬೇಕು. ಚೆನ್ನಾಗಿ ಓದಿ ತಮ್ಮ , ತಮ್ಮ ಕ್ಷೇತ್ರಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿ ಎಂದರು.
ಸಂಶೋಧಕರ ಸಂಘ ಹಲವು ಹೋರಾಟಗಳನ್ನು ಮಾಡಿದೆ ಎಂದು ತಿಳಿಸಿದ್ದಾರೆ. ಇದೇ ಮುಖ್ಯವಾಗಬಾರದು. ಉತ್ತಮ ಸಂಶೋಧಕರು, ರಾಜಕಾರಣಿಗಳು, ಆಡಳಿತಗಾರರನ್ನು ರೂಪಿಸುವತ್ತ ಸಂಘ ಮುಂದಾಗಬೇಕು ಎಂದು ಸಲಹೆ ನೀಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಸಂಶೋಧಕರ ಸಂಘದ ಗೌರವ ಅಧ್ಯಕ್ಷ ಮಹೇಶ್ ಸೋಸ್ಲೆ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಉಚಿತವಾಗಿ ಲ್ಯಾಪ್‍ಟ್ಯಾಪ್ ವಿತರಿಸಲಾಗಿದೆ. ಅದೇ ರೀತಿ ಎಲ್ಲ ವರ್ಗದ ಜಾತಿಯ ಮಕ್ಕಳಿಗೂ ಲ್ಯಾಪ್‍ಟ್ಯಾಪ್ ನೀಡಬೇಕು ಎಂದು ಕುಲಪತಿಗಳಿಗೆ ಮನವಿ ಮಾಡಿದರು.
ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಅಂಬೇಡ್ಕರ್ ಸಂಶೋಧನಾ ಮತ್ತು ವಿಸ್ತರಣ ಕೇಂದ್ರದ ನಿರ್ದೇಶಕ ಪ್ರೊ.ಜೆ.ಸೋಮಶೇಖರ್ ಮುಖ್ಯ ಭಾಷಣ ಮಾಡಿದರು. ಮಾಜಿ ಶಾಸಕ ಜಯಣ್ಣ, ಸಿಂಡಿಕೇಟ್ ಸದಸ್ಯೆ ಡಾ.ಚೈತ್ರಾ ನಾರಾಯಣ, ಅಂಬೇಡ್ಕರ್ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಮುನಿರಾಜು, ದಲಿತ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷ ಮಣಿಕಂಠಸ್ವಾಮಿ, ಸಂಶೋಧಕರ ಸಂಘ ಅಧ್ಯಕ್ಷ ನಟರಾಜ ಶಿವಣ್ಣ ಉಪಸ್ಥಿತರಿದ್ದರು.
ಜವಾಹರ್ ಲಾಲ್ ನೆಹರೂ ಬಲಿಷ್ಠ ವಿರೋಧ ಪಕ್ಷ ಇರಬೇಕು ಎನ್ನುತ್ತಿದ್ದರು. ಈಗಿನ ಪ್ರಧಾನಿ ಮೋದಿ ಅವರು ವಿರೋಧ ಪಕ್ಷಗಳೇ ಇರಬಾರದು ಎನ್ನುತ್ತಿದಾರೆ. ದೇಶ ಯಾವ ಕಡೆ ಹೋಗುತ್ತಿದೆ? ಹಿಟ್ಲರ್‍ನ ಸರ್ವಾಧಿಕಾರಿ ಧೋರಣೆ, ಪ್ರಶ್ನಿಸುವವರನ್ನು ಜೈಲಿಗೆ ಕಳುಹಿಸಲಾಗುತ್ತಿದೆ. ಇದು ಅಪಾಯಕಾರಿ.
-ಡಾ.ಎಚ್.ಸಿ.ಮಹದೇವಪ್ಪ, ಮಾಜಿ ಸಚಿವ.