ನಟ ಅಜಯ್ ದೇವಗನ್ 'ಹಿಂದಿ ರಾಷ್ಟ್ರೀಯ ಭಾಷೆ' ಹೇಳಿಕೆಗೆ ಸಿಡಿದೆದ್ದ ಕನ್ನಡಿಗರು

Update: 2022-04-27 18:17 GMT
photo-pti

ಬೆಂಗಳೂರು: ಬಾಲಿವುಡ್‌ ನಟ ಅಜಯ್‌ ದೇವಗನ್‌ ಅವರ 'ಹಿಂದಿ ರಾಷ್ಟ್ರ ಭಾಷೆ' ಹೇಳಿಕೆಗೆ ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಸೇರಿದಂತೆ ಹಲವರು ಪ್ರತಿಕ್ರಿಯಿಸಿದ್ದು,  'ಹಿಂದಿ ಎಂದೆಂದಿಗೂ ನಮ್ಮ ರಾಷ್ಟ್ರೀಯ ಭಾಷೆಯಾಗುವುದಿಲ್ಲ' ಎಂದಿದ್ದಾರೆ. 

ಹಿಂದಿ ನಮ್ಮ ರಾಷ್ಟ್ರ ಭಾಷೆಯಲ್ಲ ಎಂದು ಇತ್ತೀಚೆಗೆ ಸುದೀಪ್‌ ನೀಡಿದ್ದ ಹೇಳಿಕೆಗೆ ಬಾಲಿವುಡ್‌ ನಟ ಅಜಯ್‌ ದೇವಗನ್ ಪ್ರತಿಕ್ರಿಯೆ  ವಿವಾದ ಸೃಷ್ಟಿಸಿದೆ. 

“ಸಹೋದರ ಸುದೀಪ್‌, ನಿಮ್ಮ ಪ್ರಕಾರ ಹಿಂದಿ ನಮ್ಮ ರಾಷ್ಟ್ರ ಭಾಷೆಯಲ್ಲ ಎಂದಾದರೆ ನಿಮ್ಮ ಮಾತೃಭಾಷೆಯ ಸಿನಿಮಾಗಳನ್ನು ಹಿಂದಿಗೆ ಡಬ್ ಮಾಡಿ ಯಾಕೆ ಬಿಡುಗಡೆ ಮಾಡುತ್ತೀರಿ? ಹಿಂದಿ ನಮ್ಮ ಮಾತೃಭಾಷೆ ಮತ್ತು ರಾಷ್ಟ್ರಭಾಷೆ ಆಗಿದ್ದು, ಇಂದೂ ಮತ್ತು ಎಂದೆಂದಿಗೂ ಹಾಗೆಯೇ ಇರುತ್ತದೆ.” ಎಂದು ಅಜಯ್‌ ದೇವಗನ್ ಟ್ವೀಟ್‌ ಮಾಡಿದ್ದರು.

''ಹಿಂದಿ ಹಿಂದೆಯೂ ನಮ್ಮ ರಾಷ್ಟ್ರ ಭಾಷೆ ಆಗಿರಲಿಲ್ಲ. ಮುಂದೆಯೂ ಆಗುವುದಿಲ್ಲ ನಮ್ಮ ರಾಷ್ಟ್ರ ಭಾಷೆ ಆಗುವುದೂ ಇಲ್ಲ. ನಮ್ಮ ರಾಷ್ಟ್ರದ ಭಾಷಾ ವೈವಿಧ್ಯತೆಯನ್ನು ಗೌರವಿಸುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯವಾಗಿದೆ. ಪ್ರತಿಯೊಂದು ಭಾಷೆಗೂ ತನ್ನದೇ ಆದ ಭವ್ಯ ಇತಿಹಾಸವಿದ್ದು, ಆ ಭಾಷೆಯ ಜನರಿಗೆ ಹೆಮ್ಮೆ ತರುವಂತಿದೆ. ನಾನು ಕನ್ನಡಿಗನಾಗಿರುವುದಕ್ಕೆ ಹೆಮ್ಮೆ ಪಡುತ್ತೇನೆ''ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

''ಸುದೀಪ್ ಅವರು, ಹಿಂದಿ ರಾಷ್ಟ್ರಭಾಷೆಯಲ್ಲ ಎಂದು ಹೇಳಿರುವುದು ಸರಿ ಇದೆ. ಅವರ ಮಾತಿನಲ್ಲಿ ತಪ್ಪು ಹುಡುಕುವಂಥದ್ದು ಏನೂ ಇಲ್ಲ. ನಟ ಅಜಯ್ ದೇವಗನ್ ಅತಿರೇಖದಿಂದ ಪ್ರತಿಕ್ರಿಯಿಸಿ ಅಧಿಕ ಪ್ರಸಂಗತನ ಮೆರೆದಿದ್ದಾರೆ. ದೇಶ ಭಾಷೆಗಳಲ್ಲಿ ಹಿಂದಿಯೂ ಒಂದಷ್ಟೇ. ಕನ್ನಡ, ತೆಲುಗು, ತಮಿಳು, ಮಲೆಯಾಳಂ, ಮರಾಠಿಯಂತೆ ಅದೂ ಒಂದು ಭಾಷೆ ಮಾತ್ರ. ಭಾರತ ಬಹು ಭಾಷೆಗಳ ತೋಟ. ಬಹು ಧರ್ಮ, ಬಹು ಭಾಷೆ, ಬಹು ಸಂಸ್ಕೃತಿಗಳ ಬೀಡು. ಇದನ್ನು ಕದಡುವ ಪ್ರಯತ್ನ ಬೇಡ. ಹೆಚ್ಚು ಜನ ಮಾತನಾಡುತ್ತಾರೆ ಎಂದ ಮಾತ್ರಕ್ಕೆ ಹಿಂದಿ ಎಲ್ಲರ ಭಾಷೆಯಲ್ಲ. ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಕೇವಲ 9ಕ್ಕಿಂತ ಕಡಿಮೆ ರಾಜ್ಯಗಳಲ್ಲಿ ಹಿಂದಿ 2ನೇ ಭಾಷೆ, ಇಲ್ಲವೇ 3ನೇ ಭಾಷೆ ಅಥವಾ ಅದೂ ಆಗಿಲ್ಲ. ಹೀಗಿದ್ದ ಮೇಲೆ ಅಜಯ್ ದೇವಗನ್ ಮಾತುಗಳು ಎಷ್ಟು ಸರಿ. ಡಬ್ ಮಾಡಬೇಡಿ ಎಂದರೆ ಏನರ್ಥ?'' ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ. 

ನಟ ನೀನಾಸಂ ಸತೀಶ್‌ ಪ್ರತಿಕ್ರಿಯಿಸಿ, 'ಹಿಂದಿ ಭಾಷೆಯ ನೆಲದಲ್ಲಿ ಕನ್ನಡ ಸಿನೆಮಾಗಳ ಪ್ರಯಾಣದ ಬಗ್ಗೆ ಹಂಚಿಕೊಂಡಿದ್ದಾರೆ. 'ಹತ್ತಾರು ವರ್ಷಗಳಿಂದ ನಿಮ್ಮ ಹಿಂದಿ ಸಿನಿಮಾಗಳು ಕನ್ನಡ ನೆಲದಲ್ಲಿ ಹಣ ಮಾಡಿವೆ, ಈಗಷ್ಟೆ ನಮ್ಮ ಕನ್ನಡ ಸಿನಿಮಾಗಳು ಅಲ್ಲಿಗೆ ಕಾಲಿಟ್ಟಿವೆ, ನಮ್ಮಂತೆ ನೀವು ನಮ್ಮನ್ನು, ನಮ್ಮ ಭಾಷೆಯನ್ನು ಗೌರವಿಸಿ. ಹಿಂದಿ ಎಂದಿಗೂ ನಮ್ಮ ರಾಷ್ಟ್ರ ಭಾಷೆಯಲ್ಲ' ಎಂದು ಹಂಚಿಕೊಳ್ಳುವ ಜೊತೆಗೆ ಕಿಚ್ಚ ಸುದೀಪ್‌ ಅವರನ್ನು ಟ್ಯಾಗ್‌ ಮಾಡಿ, ನಿಮ್ಮ ಧ್ವನಿಗೆ ನಮ್ಮ ಧ್ವನಿ' ಎಂದಿದ್ದಾರೆ.

'ಸಂವಿಧಾನದ article 348 ರ ಪ್ರಕಾರ, ಹಿಂದಿಯನ್ನು ಹಿಂದಿ ರಾಜ್ಯದ ಹೈಕೋರ್ಟಿನ ಆಡಳಿತ ಭಾಷೆ ಮಾಡಲಾಗಿದೆ, ಕನ್ನಡವನ್ನು ಕರ್ನಾಟಕದ ಹೈಕೋರ್ಟಿನ ಆಡಳಿತ ಭಾಷೆಯನ್ನಾಗಿ ಮಾಡಬಹುದು ಆದರೆ ಆಗಿಲ್ಲ. ಕಾರಣ ಅಜಯ್ ದೇವಗನ್ ಅಲ್ಲ, ಹಿಂದಿ ಸಾಮ್ರಾಜ್ಯಶಾಹಿ ಭಾರತ ಒಕ್ಕೂಟ ಸರಕಾರ' ಎಂದು ಅರುಣ್ ಜಾವಗಲ್ ಹೇಳಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News