ಅಧಿಕಾರಿ ವರ್ಗಾವಣೆ ಮೂಲಕ ತಪ್ಪಾಗಿದೆ ಎಂದು ಸರಕಾರ ಒಪ್ಪಿಕೊಂಡಿದೆ: ಪ್ರಿಯಾಂಕ್ ಖರ್ಗೆ

Update: 2022-04-27 18:32 GMT

ಬೆಂಗಳೂರು, ಎ. 27: ‘ಪಿಎಸ್ಸೈ ನೇಮಕಾತಿ ಅಕ್ರಮದಲ್ಲಿ ಭಾಗಿಯಾಗಿರುವ ಅಧಿಕಾರಿಗಳನ್ನು ಅದೇ ಹುದ್ದೆಯಲ್ಲಿ ಮುಂದುವರಿಸಿದರೆ ನಿಷ್ಪಕ್ಷಪಾತ ತನಿಖೆ ನಡೆಯಲು ಹೇಗೆ ಸಾಧ್ಯ? ಎಂದು ಪ್ರಶ್ನಿಸಿದ್ದೆ. ಆ ಅಧಿಕಾರಿ ಬೇರೆಡೆಗೆ ವರ್ಗಾವಣೆ ಮಾಡಲು ಈ ಸರಕಾರಕ್ಕೆ ಹದಿನೈದು ದಿನಗಳು ಬೇಕಾಯಿತೇ?' ಎಂದು ಮಾಜಿ ಸಚಿವ ಹಾಗೂ ಚಿತ್ತಾಪುರ ಕ್ಷೇತ್ರದ ಶಾಸಕ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.

ಬುಧವಾರ ಇಲ್ಲಿನ ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ‘ಇಂದು ಏಕೆ ಆದೇಶ ಹೊರಡಿಸಲಾಗಿದೆ ಎಂಬ ಮಾಹಿತಿಯೂ ಬಂದಿದೆ. ಆ ಮೂಲಕ ಸರಕಾರ ಎಲ್ಲೋ ಒಂದು ಕಡೆ ಈ ಹಗರಣ ನಡೆದಿದೆ, ಅಧಿಕಾರಿಗಳು ಭಾಗಿಯಾಗಿದ್ದಾರೆ, ಸರಕಾರದ ಪಾಲುದಾರಿಕೆ ಇದೆ ಎಂದು ಒಪ್ಪಿಕೊಳ್ಳುತ್ತಿರುವಂತಿದೆ' ಎಂದು ಹೇಳಿದರು.

‘ದಿವ್ಯಾ ಹಾಗರಗಿ, ಡಿ.ಕೆ.ಶಿವಕುಮಾರ್ ಅವರ ಜತೆಗಿರುವ ಫೋಟೋವನ್ನು ನಿನ್ನೆ ಬಿಜೆಪಿ ಬಿಡುಗಡೆ ಮಾಡಿದೆ. ಆದರೆ, 2018ರಲ್ಲಿ ಹೈದರಾಬಾದ್ ಕರ್ನಾಟಕ ಭಾಗದ ನರ್ಸಿಂಗ್ ಕಾಲೇಜು ವಿಚಾರಕ್ಕೆ ಅಂದಿನ ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾಗಿರುವ ಬಗ್ಗೆ ಅವರೆ ಹಾಕಿಕೊಂಡಿದ್ದಾರೆ. ಬಿಜೆಪಿ ಐಟಿ ಸೆಲ್ ತಮಗೆ ಬೇಕಾದ ವಿಚಾರ ಮಾತ್ರ ನೋಡುತ್ತಾರೆ. ದಿವ್ಯಾ ಯಾರ ಜತೆ ಫೋಟೋ ತೆಗೆಸಿಕೊಂಡಿದ್ದಾರೆ ಎಂಬುದು ಬೇರೆ ವಿಚಾರ. ಅವರು ಬಿಜೆಪಿ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆಯಾಗಿದ್ದು, ದಿಶಾ ಸಮಿತಿ ಸದಸ್ಯರಾಗಿ, ರಾಜ್ಯ ನಸಿರ್ಂಗ್ ಕೌನ್ಸಿಲ್ ಸದಸ್ಯರಾಗಿ ನಾಮನಿರ್ದೇಶನ ಮಾಡಿದ್ದರು. ಅವರು ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷಕ್ಕೆ ಸೇರಿದ್ದರಾ ಎಂಬುದು ಬೇರೆ ವಿಚಾರ. ಅವರಿಗೆ ನಿಜವಾಗಲೂ ಕಾಳಜಿ ಇದ್ದರೆ, ಅವರೊಬ್ಬರು ಆರೋಪಿ. ಪರೀಕ್ಷೆ ಬರೆದ 56 ಸಾವಿರ ಅಭ್ಯರ್ಥಿಗಳು ಕಂಗಾಲಾಗಿದ್ದು, ಆರೋಪಿಯನ್ನು ಬಂಧಿಸುವ ಬದಲು, ಇವರ ಜತೆ ಫೋಟೋ ಇದೆ ಎಂದು ಹೇಳುವುದರಲ್ಲಿ ಯಾವ ಅರ್ಥವಿದೆ' ಎಂದು ಟೀಕಿಸಿದರು.

‘ಅವರ ಮಗನ ಮದುವೆಗೆ ಆಮಂತ್ರಣ ನೀಡಲು ಬಂದಿದ್ದರು. ನನ್ನ ಜತೆಗಿನ ಫೋಟೋ ಇರಬಹುದು. ಮೋದಿ ಅವರ ಜತೆಗೂ ಫೆÇೀಟೋ ಇರಬಹುದು. ಹಾಗೆಂದು ನೀವು ತನಿಖೆ ಮಾಡುವುದನ್ನು ನಿಲ್ಲಿಸುತ್ತೀರಾ? 57 ಸಾವಿರ ಜನರ ಭವಿಷ್ಯವನ್ನು ಕತ್ತಲಿಗೆ ದೂಡುತ್ತೀರಾ? ಸರಕಾರ ಈ ವಿಚಾರದಲ್ಲಿ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು. ಬಿಜೆಪಿ ಐಟಿ ಸೆಲ್ ಹೇಳುವುದಕ್ಕೆಲ್ಲ ಉತ್ತರ ನೀಡುತ್ತಿದ್ದರೆ ನಮಗೆ ಅದೊಂದೆ ಕೆಲಸವಾಗುತ್ತದೆ’ ಎಂದು ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದರು. 

‘ಕೇಂದ್ರ ಸರಕಾರ ತನ್ನ ಜವಾಬ್ದಾರಿ ಮರೆತಿದೆ. ಸೆಸ್ ಮೂಲಕ ಸಂಗ್ರಹಿಸಿರುವ 27ಲಕ್ಷ ಕೋಟಿ ರೂ. ಹಣವನ್ನು ಜನರಿಗೆ ಉಪಯೋಗವಾಗುವಂತೆ ಹಂಚಿಕೆ ಮಾಡಲಿ. ಕರ್ನಾಟಕಕ್ಕೆ 15ನೆ ಹಣಕಾಸು ಅನುದಾನದಲ್ಲಿ ಅನ್ಯಾಯವಾಗುತ್ತಿದ್ದು, ಜಿಎಸ್ಟಿ ಪಾಲಿನಲ್ಲೂ ಅನ್ಯಾಯವಾಗುತ್ತಿದ್ದು, ಕನ್ನಡಿಗರನ್ನು ಸಾಲಗಾರರನ್ನಾಗಿ ಮಾಡಲಾಗುತ್ತಿದೆ. ಆ ಬಗ್ಗೆ ಮಾತನಾಡದೇ, ಕಾಂಗ್ರೆಸ್ ಸರಕಾರಗಳು ಇಳಿಕೆ ಮಾಡಿಲ್ಲ, ಎಂಬ ಉಡಾಫೆ ಮಾತುಗಳ ಮೂಲಕ ಪ್ರಧಾನಿ ಮೋದಿ ಜವಾಬ್ದಾರಿಯಿಂದ ಜಾರಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ’ ಎಂದು ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News