×
Ad

ಸೋರಿಕೆ ಹಗರಣ: ಮೇಲ್ವಿಚಾರಣೆ ಇಲ್ಲದೇ ಪ್ರಶ್ನೆಪತ್ರಿಕೆ ತಯಾರಿ

Update: 2022-04-28 07:39 IST

ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ತನ್ನ ವಿಷಯ ತಜ್ಞರು ಯಾವುದೇ ಮೇಲ್ವಿಚಾರಣೆ ಇಲ್ಲದೇ ಸಹಾಯಕ ಪ್ರೊಫೆಸರ್ ಪರೀಕ್ಷೆಯ ಪ್ರಶ್ನೆಪತ್ರಿಕೆಗಳನ್ನು ಸಿದ್ಧಪಡಿಸಲು ಅವಕಾಶ ಮಾಡಿಕೊಟ್ಟಿತ್ತು ಎಂಬ ಅಂಶವನ್ನು ಉನ್ನತ ಮೂಲಗಳು ಬಹಿರಂಗಪಡಿಸಿವೆ ಎಂದು deccanherald.com ವರದಿ ಮಾಡಿದೆ.

ಈ ಪೈಕಿ ಭೂಗೋಳಶಾಸ್ತ್ರ ಪರೀಕ್ಷಾ ಪ್ರಶ್ನೆಪತ್ರಿಕೆ ಮಾರ್ಚ್ 14ರಂದು ಪರೀಕ್ಷೆಗೆ ಮುನ್ನ ಸೋರಿಕೆಯಾಗಿತ್ತು. ರಾಜ್ಯದ ಪದವಿ ಕಾಲೇಜುಗಳಲ್ಲಿ ಸಹಾಯಕ ಪ್ರೊಫೆಸರ್‌ ಗಳನ್ನು ನೇಮಕ ಮಾಡಿಕೊಳ್ಳುವ ಸಲುವಾಗಿ ಈ ಪರೀಕ್ಷೆ ನಡೆಸಲಾಗಿತ್ತು.

ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರಿನ ಅತಿಥಿ ಉಪನ್ಯಾಸಕಿ ಸೌಮ್ಯಾ (32) ಎಂಬಾಕೆಯನ್ನು ಬಂಧಿಸಲಾಗಿದೆ. ಆಕೆಯ ಪಿಎಚ್‍ಡಿ ಗೈಡ್ ಹಾಗೂ ಪ್ರಸ್ತುತ ಕರ್ನಾಟಕ ವಿವಿ ಮೌಲ್ಯಮಾಪನ ಕುಲಸಚಿವ ಡಾ.ಎಚ್.ನಾಗರಾಜ್ ಅವರನ್ನೂ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಗುರಿಪಡಿಸಲಾಗಿದೆ.

ಮೈಸೂರು ವಿವಿ ಕ್ಯಾಂಪಸ್‍ನ ಕೆ-ಸೆಟ್ ಪರೀಕ್ಷಾ ಹಾಲ್‍ನಲ್ಲಿ ಪ್ರಶ್ನೆಪತ್ರಿಕೆಗಳನ್ನು ಸಿದ್ಧಪಡಿಸಲು ವಿಷಯ ತಜ್ಞರಿಗೆ ಕೆಇಎ ಅವಕಾಶ ಮಾಡಿಕೊಟ್ಟಿದ್ದು, ಇಲ್ಲಿ ಸಿಸಿಟಿವಿ ಕ್ಯಾಮೆರಾ ವ್ಯವಸ್ಥೆ ಇಲ್ಲ. ಮತ್ತೆ ಕೆಲವರಿಗೆ ತಮ್ಮ ಆಯ್ಕೆಯ ಸ್ಥಳದಲ್ಲಿ ಯಾವುದೇ ಮೇಲ್ವಿಚಾರಣೆ ಇಲ್ಲದೇ ಪ್ರಶ್ನೆಪತ್ರಿಕೆ ತಯಾರಿಸಲು ಅವಕಾಶ ಮಾಡಿಕೊಡಲಾಗಿತ್ತು.

"ಇಡೀ ಪ್ರಕ್ರಿಯೆ 10-15 ದಿನಗಳ ಕಾಲ ನಡೆದಿತ್ತು. ಮೊದಲ ಹಾಗೂ ಕೊನೆಯ ಕೆಲ ದಿನಗಳ ಕಾಲ ಮಾತ್ರ ವಿಷಯ ತಜ್ಞರು ಕೆಇಎ ಕಚೇರಿಯಲ್ಲಿ ಕೆಲಸ ಮಾಡಲು ಕೋರಲಾಗಿತ್ತು" ಎಂದು ಪ್ರಶ್ನೆಪತ್ರಿಕೆ ಸಿದ್ಧಪಡಿಸಿದ ವಿಷಯ ತಜ್ಞರೊಬ್ಬರು ಹೇಳಿದ್ದಾರೆ.

ಈ ನಡುವಿನ ಅವಧಿಯಲ್ಲಿ ಯಾವುದೇ ಕಣ್ಗಾವಲು ಇಲ್ಲದೇ ಕೆಲಸ ಮಾಡಲು ಅವಕಾಶ ನೀಡಲಾಗಿತ್ತು ಎಂದು ಮತ್ತೊಬ್ಬ ತಜ್ಞರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News