ಕಾಫಿ ಬೆಳೆಗಾರರು ಒತ್ತುವರಿ ಮಾಡಿದ ಸರಕಾರಿ ಭೂಮಿ ಲೀಸ್‍ಗೆ ನೀಡುವ ನಿಟ್ಟಿನಲ್ಲಿ ಶೀಘ್ರ ಕಾಯ್ದೆ: ಸಚಿವ ಆರ್.ಅಶೋಕ್

Update: 2022-04-28 14:05 GMT

ಚಿಕ್ಕಮಗಳೂರು: ಸರಕಾರಿ ಭೂಮಿಯನ್ನು ಒತ್ತುವರಿ ಮಾಡಿ ಕಾಫಿಯಂತಹ ಬೆಳೆ ಬೆಳೆದು ಸರಕಾರಕ್ಕೆ ಆದಾಯ ನೀಡುತ್ತಿರುವ ಬೆಳೆಗಾರರ ಒತ್ತುವರಿ ಭೂಮಿ ಸಮಸ್ಯೆಯ ಪರಿಹಾರಕ್ಕೆ ಕಾಯ್ದೆ ರೂಪಿಸುವ ಮೂಲಕ ಅವರನ್ನು ಭೂಗಳ್ಳರೆಂಬ ಹಣೆಪಟ್ಟಿಯಿಂದ ಮುಕ್ತಿಗೊಳಿಸಲಾಗುವುದು. ಒತ್ತುವರಿ ಭೂಮಿಯನ್ನು ಕಾಫಿ ಬೆಳೆಗಾರರಿಗೆ ಲೀಸ್‍ಗೆ ನೀಡುವ ನಿಟ್ಟಿನಲ್ಲಿ ಸರಕಾರ ಶೀಘ್ರ ಸಕಾರಾತ್ಮಕ ನಿರ್ಣಯ ಕೈಗೊಳ್ಳಲಿದೆ ಎಂದು ಕಂದಾಯ ಸಚಿವ ಆರ್.ಅಶೋಕ್  ಭರವಸೆ ನೀಡಿದ್ದಾರೆ.

ನಗರದ ಕುವೆಂಪು ಕಲಾಮಂದಿರದಲ್ಲಿ ಕರ್ನಾಟಕ ಗ್ರೋವರ್ಸ್ ಅಸೋಶಿಯೇಶನ್, ಯುನೈಟೆಡ್ ಪ್ಲಾಂಟರ್ಸ್ ಅಸೋಸಿಯೇಷನ್ ಹಾಗೂ ಕಾಫಿ ಬೆಳೆಗಾರರ ಒಕ್ಕೂಟ ಇವರ ಸಂಯುಕ್ತಾಶ್ರಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕಾಫಿ ಬೆಳೆಗಾರರ ಬೃಹತ್ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಳೆದ 70ರಿಂದ 80 ವರ್ಷಗಳಿಂದ ಮಲೆನಾಡು ಭಾಗದ ಕಾಫಿ ಬೆಳೆಗಾರರು ಸರಕಾರಿ ಭೂಮಿಯನ್ನು ಸಾಗುವಳಿ ಮಾಡಿಕೊಂಡು ಬಂದಿದ್ದಾರೆ.

ಆದರೆ ಕಾಫಿ ಬೆಳೆಗಾರರ ವಶದಲ್ಲಿರುವ ಒತ್ತುವರಿ ಸಾಗುವಳಿ ಭೂಮಿಯನ್ನು ಇಂದಿಗೂ ಸಕ್ರಮ ಮಾಡಿಕೊಡಲು ಸರಕಾರದಿಂದಲೂ ಆಗಿಲ್ಲ. ಇಂತಹ ಸರಕಾರಿ ಭೂಮಿಯನ್ನು ಒತ್ತುವರಿದಾರರಿಗೇ 10-30 ವರ್ಷಗಳವರೆಗೆ ಗುತ್ತಿಗೆ ನೀಡಬೇಕೆಂಬ ಬೇಡಿಕೆ ಸರಕಾರದ ಮುಂದಿಡಲಾಗಿದೆ. ಈ ಬೇಡಿಕೆ ಸಂಬಂಧ ರಾಜ್ಯ ಸರಕಾರ ಬೆಳೆಗಾರರು ಮೆಚ್ಚಿಕೊಳ್ಳುವ ರೀತಿಯಲ್ಲಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

ಒತ್ತುವರಿ ಭೂಮಿ ಸಮಸ್ಯೆ, ಸರ್ಫೇಯಿಸಿ ಕಾಯ್ದೆ, ಭೂ ಕಬಳಿಕೆ ಕಾಯ್ದೆ, ಅತಿವೃಷ್ಟಿ, ಬೆಲೆ ಇಳಿಕೆಯಂತಹ ಗಂಭೀರ ಸಮಸೈಗಳಿಂದಾಗಿ ಬೆಳೆಗಾರರು ಸಂಕಷ್ಟದ ದಿನಗಳನ್ನು ಎದುರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಬೆಳೆಗಾರರ ನೋವು ಆಲಿಸಲು ಇಲ್ಲಿಗೆ ಬಂದಿದ್ದೇನೆ. ಬುಧವಾರ ಹಾಸನದಲ್ಲಿ ಬೆಳೆಗಾರರ ಸಮಸ್ಯೆ ಆಲಿಸಿದ್ದು, ಇಂದು ಚಿಕ್ಕಮಗಳೂರಿಗೆ ಭೇಟಿನೀಡಿದ್ದೇನೆ. ಕೊಡಗು ಜಿಲ್ಲೆಯ ಕಾಫಿ ಬೆಳೆಗಾರರ ಸಮಸ್ಯೆಯನ್ನೂ ಆಲಿಸುತ್ತೇನೆ ಎಂದ ಅವರು, ಸಣ್ಣ ಕಾಫಿ ಬೆಳೆಗಾರರು 10 ಗುಂಟೆಯಿಂದ 15 ಎಕರೆವರೆಗೂ ಸರಕಾರಿ ಭೂಮಿಯನ್ನು ಒತ್ತುವರಿ ಮಾಡಿಕೊಂಡಿದ್ದಾರೆ. ಕೆಲವು ಕಂಪೆನಿ ಎಸ್ಟೇಟ್‍ಗಳು ನೂರಾರು ಎಕರೆ ಸರಕಾರಿ ಭೂಮಿಯನ್ನು ಒತ್ತುವರಿ ಮಾಡಿಕೊಂಡಿವೆ. ಜೀವನಕ್ಕೆ ಒತ್ತುವರಿ ಮಾಡಿಕೊಂಡವರು ಸದ್ಯ ಭೂಗಳ್ಳರೆಂಬ ಹಣೆಪಟ್ಟಿ ಕಟ್ಟಿಕೊಳ್ಳುವಂತಾಗಿದೆ. ಇದನ್ನು ಕಳಚಲು ಇಂದಿನಿಂದಲೇ ಪ್ರಯತ್ನಿಸಲಾಗುವುದು ಎಂದು ಹೇಳಿದರು.

ಮಲೆನಾಡು ಭಾಗದ ಶಾಸಕರ ಮನವಿ ಮೇರೆಗೆ ಕಂದಾಯ ಇಲಾಖೆಯಲ್ಲಿರುವ ಒತ್ತುವರಿಗೆ ಸಂಬಂಧಿಸಿದ ಅರ್ಜಿಯನ್ನು ನೋಡಿದಾಗ ಕೆಲವು ಅರ್ಜಿಗಳು ಅವಸಾನದ ಅಂಚನ್ನು ತಲುಪಿದ್ದವು. ಅವುಗಳನ್ನೆಲ್ಲ ಪರಿಶೀಲಿಸಿ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಒತ್ತುವರಿಯನ್ನು ಎಕರೆಯ ಮೇಲೆ(ಸ್ಲ್ಯಾಬ್)ಅನುಕೂಲ ಮಾಡಿಕೊಡಲಾಗುವುದು ಎಂದು ಭರವಸೆ ನೀಡಿದ ಸಚಿವ ಆರ್.ಅಶೋಕ್, ರೈತರು ಮತ್ತು ಬೆಳೆಗಾರರು ಒತ್ತುವರಿ ಮಾಡಿರುವ ಜಮೀನಿನ ಮೇಲೆ ಬೆಳೆಸಾಲ ಪಡೆಯಲು ಅನುಕೂಲವಾಗುವಂತೆ ಕಾಯ್ದೆ ರೂಪಿಸುತ್ತೇವೆ. ಈ ವೇಳೆ ಬಡವರನ್ನು ನಿರ್ಲಕ್ಷ್ಯ ಮಾಡುವ ಪ್ರಶ್ನೆಯೇ ಇಲ್ಲ, ದಲಿತರಿಗೆ ನಿವೇಶನ, ಶಾಲೆ,ಆಸ್ಪತ್ರೆ, ಸ್ಮಶಾನ, ಆಟದ ಮೈದಾನಕ್ಕೂ ಭೂಮಿ ನೀಡಬೇಕೆಂಬ ವಿಷಯವನ್ನು ಗಮನದಲ್ಲಿಟ್ಟುಕೊಂಡು ಕಾಯ್ದೆ ರೂಪಿಸಲಾಗುವುದು ಎಂದು ಸ್ಪಷ್ಟಪಡಿಸಿದರು.

ರಾಜ್ಯ ಸರಕಾರ 94ಸಿ, 94ಸಿಸಿಯಲ್ಲಿ ಅರ್ಜಿ ಸಲ್ಲಿಸಿದವರಿಗೆ ನಿವೇಶನ ನೀಡುತ್ತಿದೆ. ಇನಾಂಭೂಮಿಗೆ ಸಂಬಂಧಿಸಿದಂತೆ ಅರ್ಜಿ ಸಲ್ಲಿಸಿದವರಿಗೂ ಅನುಕೂಲಮಾಡಿಕೊಡುತ್ತಿದ್ದೇವೆ. ಕಂದಾಯ ಭೂಮಿ ಒತ್ತುವರಿಮಾಡಿರುವವರು ಬೆಂಗಳೂರಿಗೆ ಬರಬೇಕಿಲ್ಲ, ಒತ್ತುವರಿಗೆಎ ಸಮಸ್ಯೆ ನಿವಾರಣೆಗೆ ಜಿಲ್ಲಾಧಿಕಾರಿಗೆ ಅಧಿಕಾರ ನೀಡಲಾಗುವುದು ಎಂದು ತಿಳಿಸಿದರು.

ಶಾಸಕ ಸಿ.ಟಿ.ರವಿ ಮಾತನಾಡಿ, ಸಾಲಮಾಡಿದರೂ ಸ್ವಾಭಿಮಾನದಿಂದ ಬದುಕುವ ಕಾಫಿ ಬೆಳೆಗಾರರು ಭೂಗಳ್ಳರಲ್ಲ. ಗೌರವಯುತವಾಗಿ ಬದುಕಲು ಕಾನೂನು ರೂಪಿಸಬೇಕೆಂದು ಕಂದಾಯ ಸಚಿವರನ್ನು ಒತ್ತಾಯಿಸಿದ ಅವರು, 3ಎಕರೆವರೆಗೆ ಒತ್ತುವರಿ ಮಾಡಿರುವವರು 5416 ಮಂದಿ ಜಿಲ್ಲೆಯಲ್ಲಿದ್ದಾರೆ. 10 ಎಕರೆವರೆಗಿನ ಒತ್ತುವರಿದಾರರು 1925 ಮಂದಿ, ಅದಕ್ಕಿಂತ ಮೇಲ್ಪಟ್ಟು ಒತ್ತುವರಿ ಮಾಡಿರುವವರ ಸಂಖ್ಯೆ 230 ಇದ್ದು, ಒಟ್ಟಾರೆ ಜಿಲ್ಲೆಯಲ್ಲಿ ಅನಧಿಕೃತ ಸಾಗುವಳಿದಾರರು 17635 ಮಂದಿ ಇದ್ದಾರೆ ಎಂದು ಮಾಹಿತಿ ನೀಡಿದರು.

ಕಾಫಿಯನ್ನು ಪ್ರಧಾನಮಂತ್ರಿ ಫಸಲ್‍ಭಿಮಾಯೋಜನೆ ವ್ಯಾಪ್ತಿಗೆ ಒಳಪಡಿಸಲು ಅನುಕೂಲವಾಗುವಂತೆ ಕೇಂದ್ರ ಸರಕಾರಕ್ಕೆ ಪ್ರಸ್ತಾವ ಸಲ್ಲಿಸಬೇಕು. ಕಾಫಿ ಬೆಳೆಗಾರರು ತಮ್ಮ ಅಸ್ತಿತ್ವಕ್ಕಾಗಿ ಹೋರಾಟ ಮಾಡುತ್ತಿದ್ದಾರೆ. ಒತ್ತುವರಿದಾರರನ್ನು ಕಳ್ಳರಂತೆ ಬಿಂಬಿಸಲಾಗುತ್ತಿದೆ. ಕರ್ನಾಟಕ ಭೂ ಕಬಳಿಕೆ ಕಾಯ್ದೆಯಿಂದ ಕಾಫಿ ಬೆಳೆಗಾರರನ್ನು ಹೊರಗಿಡಬೇಕು ಎಂದು ಇದೇ ವೇಳೆ ಸಿ.ಟಿ.ರವಿ ಆಗ್ರಹಿಸಿದರು.

ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಡಿ.ಎನ್.ಜೀವರಾಜ್ ಮಾತನಾಡಿ, ಡೀಮ್ಡ್ ಅರಣ್ಯಕ್ಕೆ ಅಂತ್ಯಹಾಡಬೇಕು ಎಂದರು.

ವಿಧಾನಪರಿಷತ್ ಸದಸ್ಯ ಎಂ.ಕೆ.ಪ್ರಾಣೇಶ್, ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ, ಬೇಲೂರು ಶಾಸಕ ಲಿಂಗೇಶ್, ವಿಧಾನಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ ಮಾತನಾಡಿದರು. ಮಾಜಿ ಸಚಿವ ಬಿ.ಬಿ.ನಿಂಗಯ್ಯ, ಬೆಳೆಗಾರ ಒಕ್ಕೂಟದ ಅಧ್ಯಕ್ಷ ಮೋಹನ್‍ಕುಮಾರ್, ಒಕ್ಕಲಿಗ ನಿಗಮದ ಅಧ್ಯಕ್ಷ ಕೃಷ್ಣಪ್ಪ, ಕೆಪಿಎ ಮುಖಂಡರಾದ ಜಫ್ರಿ ರೆಬೆಲ್ಲೊ, ರಾಮನಾಥ, ಒಕ್ಕಲಿಗರ ಸಂಘದ ಅಧ್ಯಕ್ಷ ಟಿ.ರಾಜಶೇಖರ್, ಬಿಜೆಪಿ ಜಿಲ್ಲಾಧ್ಯಕ್ಷ ಎಚ್.ಸಿ.ಕಲ್ಮರಡಪ್ಪ, ಬೆಳೆಗಾರರ ಒಕ್ಕೂಟದ ಮಾಜಿ ಅಧ್ಯಕ್ಷ ಬಿ.ಸಿ.ಜಯರಾಂ, ಕೆಜಿಎಫ್ ಕಾರ್ಯದರ್ಶಿ ಕೃಷ್ಣಪ್ಪ, ಜಿಲ್ಲಾಧಿಕಾರಿ ಕೆ.ಎನ್.ರಮೇಶ್, ಉಪವಿಭಾಗಾಧಿಕಾರಿ ಡಾ.ನಾಗರಾಜ್ ಉಪಸ್ಥಿತರಿದ್ದರು.

ರಾಜ್ಯದಲ್ಲಿ ಶೇ.20ರಷ್ಟು ಪರಿಭಾವಿತ ಅರಣ್ಯವಿದ್ದು, ಬಹುತೇಕ ಕಂದಾಯ ಭೂಮಿಯಾಗಿದೆ. 90 ಸಾವಿರ ಎಕರೆ ಡೀಮ್ಡ್ ಅರಣ್ಯವನ್ನು ಕಂದಾಯ ಇಲಾಖೆ ಹಿಂಪಡೆಯಲಿದೆ. ಈ ಕುರಿತು ನ್ಯಾಯಾಲಯಕ್ಕೆ ಪ್ರಮಾಣ ಪತ್ರವನ್ನು ಸಲ್ಲಿಸಲಾಗಿದೆ. ಪರಿಭಾವಿತ ಅರಣ್ಯ ಕುರಿತು ಅರಣ್ಯಾಧಿಕಾರಿಗಳೊಂದಿಗೆ 5 ಸಭೆಗಳನ್ನು ನಡೆಲಾಗಿದೆ. ಅಧಿಕಾರಿಗಳೇ ಸೃಷ್ಟಿಸಿದ ಅರಣ್ಯ ಇದಾಗಿದೆ. ಕಂದಾಯ ಇಲಾಖೆಗೆ ಭೂಮಿ ವಾಪಸ್ ಪಡೆದ ಬಳಿಕ ಉಳುಮೆ ಮಾಡುತ್ತಿದ್ದ ರೈತರಿಗೆ ಅದನ್ನು ಬಿಟ್ಟುಕೊಡಲಾಗುವುದು.
- ಆರ್.ಅಶೋಕ್, ಕಂದಾಯ ಸಚಿವ

ವೃದ್ಧಾಪ್ಯ, ವಿಧವಾ ವೇತನ ಪಡೆಯಲು ತೊಂದರೆ ಅನುಭವಿಸುತ್ತಿರುವುದನ್ನು ಮನಗಂಡಿದ್ದು, ಸಮಸ್ಯೆ ನಿವಾರಣೆಗೆ 40 ಕಂಟ್ರೋಲ್ ರೂಮ್‍ಗಳನ್ನು ತೆರೆಯಲಾಗುತ್ತಿದೆ. ಸಮಸ್ಯೆಗೆ ಒಳಗಾದವರು ದೂರವಾಣಿ ಕರೆಮಾಡಿ ಬ್ಯಾಂಕ್ ಖಾತೆ, ಆಧಾರ್‍ಕಾರ್ಡ್ ನಂಬರ್ ತಿಳಿಸಿದರೆ 72 ಗಂಟೆಯೊಳಗೆ ಮನೆಬಾಗಿಲಿಗೆ ಪಿಂಚಣಿ ತಲುಪುವ ವ್ಯವಸ್ಥೆ ಮಾಡಲಾಗುತ್ತಿದೆ.
- ಆರ್.ಅಶೋಕ್, ಕಂದಾಯ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News