ಸಾರಿಗೆ ನೌಕರರ ಬೇಡಿಕೆ ಈಡೇರಿಸಲು ನಾಲ್ಕು ವಾರ ಗಡುವು: ಕೋಡಿಹಳ್ಳಿ ಚಂದ್ರಶೇಖರ್

Update: 2022-04-28 14:11 GMT
ಕೋಡಿಹಳ್ಳಿ ಚಂದ್ರಶೇಖರ್

ಬೆಂಗಳೂರು, ಎ.28: ಶ್ರೀರಾಮುಲು ಸಾರಿಗೆ ಸಚಿವರಾದ ಬಳಿಕ ‘ನಾಲ್ಕೇ ವಾರದಲ್ಲಿ ಸಾರಿಗೆ ನೌಕರರ ಬೇಡಿಕೆಗಳನ್ನು ಈಡೇರಿಸುವುದಾಗಿ ತಿಳಿಸಿದ್ದರು. ನಾಲ್ಕು ತಿಂಗಳು ಕಳೆದರೂ ಬೇಡಿಕೆಗಳು ಈಡೇರಲಿಲ್ಲ, ಬದಲಾಗಿ ಸಮಸ್ಯೆಗಳನ್ನು ಸೃಷ್ಟಿಸಲಾಗಿದೆ. ಹಾಗಾಗಿ ಮುಂದಿನ ನಾಲ್ಕು ವಾರದಲ್ಲಿ ಬೇಡಿಕೆಗಳನ್ನು ಈಡೇರಿಸದಿದ್ದಲ್ಲಿ ಉಗ್ರ ಹೋರಾಟವನ್ನು ಎದುರಿಸಲು ರಾಜ್ಯ ಸರಕಾರ ಸಿದ್ಧವಾಗಬೇಕು ಎಂದು ಹೋರಾಟಗಾರ ಕೋಡಿಹಳ್ಳಿ ಚಂದ್ರಶೇಖರ್ ಎಚ್ಚರಿಕೆ ನೀಡಿದ್ದಾರೆ. 

ಗುರುವಾರ ಪ್ರೆಸ್‍ಕ್ಲಬ್‍ನಲ್ಲಿ ಮಾತನಾಡಿದ ಅವರು, ಸಾರಿಗೆ ನೌಕರರ ಹೋರಾಟವನ್ನು ಹತ್ತಿಕ್ಕಲು ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಿರುವುದು ಖಂಡನೀಯವಾಗಿದೆ. ಹಕ್ಕುಗಳಿಗಾಗಿ, ಅನ್ಯಾಯವನ್ನು ಖಂಡಿಸಿ ಪ್ರತಿಭಟನೆ ಮಾಡುವವರನ್ನು ಸರಕಾರವು ಅಮಾನವೀಯವಾಗಿ ನಡೆಸಿಕೊಂಡಿರುವುದಲ್ಲದೇ, ನಿರ್ದಾಕ್ಷಿಣ್ಯ ಕ್ರಮವನ್ನು ಜರುಗಿಸಲಾಗಿದೆ. ಸಚಿವ ಶ್ರೀರಾಮಲು ಅವರು ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸುವುದಾಗಿ ಹೇಳಿದರು. ಆದರೆ ನೌಕಕರಿಗೆ ಅರ್ಧ ವೇತನವನ್ನು ಪಾವತಿಸಲಾಗುತ್ತಿದೆ ಕಿಡಿಕಾರಿದರು. 

ರಾಜ್ಯ ಸರಕಾರವು ಸಾರಿಗೆ ನೌಕರರ ಸಮಸ್ಯೆಗಳನ್ನು ಬಗೆಹರಿಸಬೇಕು. ಆದರೆ ರಾಜ್ಯ ಸರಕಾರವು ಸಾರಿಗೆ ನೌಕರರ ಎಲ್ಲ ಬೇಡಿಕೆಗಳನ್ನು ಹೀಡೆರಿಸದೆ, ಸಮಸ್ಯೆಗಳನ್ನು ಸೃಷ್ಟಿಸಿದೆ. ಹಾಗಾಗಿ ವರ್ಗಾವಣೆ, ಅಮಾನತ್ತಿನಂತಹ ಕಾನೂನುಬಾಹಿರ ಕ್ರಮಗಳನ್ನು ಹಿಂಪಡೆಯಬೇಕು ಎಂದು ಅವರು ಆಗ್ರಹಿಸಿದರು.

ಹೈಕೋರ್ಟ್ ಮಧ್ಯ ಪ್ರವೇಶಿಸಿದ ಕಾರಣ ಸಾರಿಗೆ ನೌಕರರ ಮುಷ್ಕರವನ್ನು ಕೈ ಬಿಡಲಾಗಿತ್ತು. ಆದರೆ ಒಂದು ವರ್ಷವಾದರೂ ರಾಜ್ಯ ಸರಕಾರ ನೌಕರರ ಸಮಸ್ಯೆ ಬಗೆಹರಿಯದ ಕಾರಣ, ನಿಗದಿತ ಅವಧಿಯಲ್ಲಿ ಬೇಡಿಕೆ ಈಡೇರಿಸದಿದ್ದರೆ, ಮತ್ತೆ ಹೋರಾಟವನ್ನು ಆರಂಭಿಸಲಾಗುತ್ತದೆ ಎಂದು ಅವರು ಸ್ಪಷ್ಟಪಡಿಸಿದರು.

ಗೋಷ್ಠಿಯಲ್ಲಿ ನೌಕರರ ಕೂಟದ ಅಧ್ಯಕ್ಷ ಚಂದ್ರಶೇಖರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಪರಿಹಾರ ನೀಡಿಕೆಯಲ್ಲಿ ದ್ವಂದ್ವ ನೀತಿ
ಸಾರಿಗೆ ನಿಗಮಗಳಲ್ಲಿ ಕೋವಿಡ್‍ನಿಂದ ಮೃತಪಟ್ಟರಿಗೆ ಪರಿಹಾರ ನೀಡುವಲ್ಲಿ ದ್ವಂದ್ವ ನೀತಿಯನ್ನು ಅನುಸರಿಸಲಾಗುತ್ತಿದೆ. ಅಧಿಕಾರಿಗಳು ತಮಗೆ ಆಪ್ತರಾಗಿದ್ದ ನೌಕರರಿಗೆ ಮಾತ್ರ ಕೋವಿಡ್ ಪರಿಹಾರವನ್ನು ನೀಡಿದ್ದಾರೆ. ಉಳಿದವರನ್ನು ಕಡೆಗಣಿಸಿದ್ದಾರೆ. ತಮ್ಮ ಆಪ್ತರಿಗೆ ಮಾತ್ರ ಪರಿಹಾರವನ್ನು ನೀಡಬೇಕು ಎಂದು ಯಾವ ಕಾನೂನಿನಲ್ಲಿದೆ ಎಂದು ಕೋಡಿಹಳ್ಳಿ ಚಂದ್ರಶೇಖರ್ ಪ್ರಶ್ನಿಸಿದ್ದಾರೆ.

ಸಾರಿಗೆ ಇಲಾಖೆಯ ನಿಗಮಗಳ ಪೈಕಿ ಬಿಎಂಟಿಸಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರನ್ನು ರಾಜ್ಯ ಸರಕಾರ ಹೀನಾಯವಾಗಿ ನಡೆಸಿಕೊಳ್ಳುತ್ತಿದೆ. ಸಂಸ್ಥೆಯು ನೌಕರರಿಂದ ನಷ್ಟವನ್ನು ಅನುಭವಿಸುತ್ತಿಲ್ಲ. ಅಭಿವೃದ್ಧಿ ಹೆಸರಿನಲ್ಲಿ ನಡೆಯುತ್ತಿರುವ ಲೋಪದೋಷಗಳಿಂದ ನಷ್ಟಕ್ಕೀಡಾಗಿದೆ. ಟೆಂಡರ್‍ಗಳಲ್ಲಿ ಅವ್ಯವಹಾರ ನಡೆಯುತ್ತಿದೆ. ಸರಕಾರ ಇದನ್ನು ಸರಿಪಡಿಸಬೇಕು. ಅದನ್ನು ಬಿಟ್ಟು, ನೌಕರರಿಗೆ ಹಿಂಸೆ ನೀಡುವುದು ಸರಿಯಲ್ಲ. 
-ಕೋಡಿಹಳ್ಳಿ ಚಂದ್ರಶೇಖರ್, ಹಸಿರು ಸೇನೆ ರಾಜ್ಯಾಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News