ಮಿಲಿಟರಿ ವಶದಲ್ಲಿರುವ ರಾಜ್ಯದ ಜಮೀನನ್ನು ವಶಕ್ಕೆ ಪಡೆಯಲು ಕ್ರಮ: ಸಿಎಂ ಬಸವರಾಜ ಬೊಮ್ಮಾಯಿ

Update: 2022-04-28 16:04 GMT
ಸಿಎಂ ಬಸವರಾಜ ಬೊಮ್ಮಾಯಿ

ಬೆಳಗಾವಿ, ಎ. 28: ಬೆಳಗಾವಿಯ ಬಳಿ ಇರುವ ಮಿಲಿಟರಿ ಪ್ರದೇಶವನ್ನು ಕರ್ನಾಟಕ ಸರಕಾರದ ವಶಕ್ಕೆ ಪಡೆಯಲು ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಇಂದು ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳಗಾವಿಯ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಮಿಲಿಟರಿ ಪ್ರದೇಶ ಸ್ವಾಧೀನತೆ ಬಗ್ಗೆ ಪ್ರತಿಕ್ರಿಯಿಸಿ, ಈ ಬಗ್ಗೆ ರಕ್ಷಣಾ ಸಚಿವರೊಂದಿಗೆ ಚರ್ಚಿಸಲಾಗಿದ್ದು, ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಇಲ್ಲಿನ ವಸ್ತುಸ್ಥಿತಿಯ ವರದಿಯನ್ನು ಕೇಂದ್ರ ಸರಕಾರ ತರಿಸಿಕೊಳ್ಳುತ್ತಿದೆ. ಈ ಪ್ರದೇಶವನ್ನು ಮಿಲಿಟರಿಯವರೇ ಬಳಸಿಕೊಳ್ಳುತ್ತಿದ್ದಾರೆ. ಆದರೆ ಆ ಪ್ರದೇಶ ಕೇಂದ್ರ ರಕ್ಷಣಾ ಇಲಾಖೆಗೆ ಸೇರಿರುವುದಿಲ್ಲ. ಕಂದಾಯದ ಹೆಸರಿನಲ್ಲಿಯೇ ಇದೆ. ಈ ಎಲ್ಲ ಮಾಹಿತಿಗಳನ್ನು ಕೇಂದ್ರ ರಕ್ಷಣಾ ಇಲಾಖೆಗೆ ನೀಡಲಾಗಿದ್ದು, ಇನ್ನಷ್ಟು ಒತ್ತಡ ಹೇರುವ ಮೂಲಕ ಆ ಮಿಲಿಟರಿ ಪ್ರದೇಶವನ್ನು ಕರ್ನಾಟಕ ಸರಕಾರದ ವಶಕ್ಕೆ ಪಡೆಯಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಸಚಿವ ಸಂಪುಟ ವಿಸ್ತರಣೆ ಬಗ್ಗೆ ಇನ್ನೂ ಚರ್ಚೆಯಾಗಿಲ್ಲ. ಪಕ್ಷದ ವರಿಷ್ಠರು ಈ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಂಡ ನಂತರ ಮಾಹಿತಿ ಒದಗಿಸಲಾಗುವುದು ಎಂದರು.

ಬೆಳಗಾವಿ ವಿಮಾನನಿಲ್ದಾಣಕ್ಕೆ ರಾಣಿಚೆನ್ನಮ್ಮ ಎಂದು ಹೆಸರಿಡುವ ಬಗ್ಗೆ ಸ್ಥಳೀಯ ನಾಯಕರೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News