ಪಿಎಸ್ ಐ ಅಕ್ರಮ ನೇಮಕಾತಿ ಪ್ರಕರಣದ ರೂವಾರಿ ದಿವ್ಯಾ ಹಾಗರಗಿ ಬಂಧನ ಯಾಕಿಲ್ಲ: ಪ್ರಿಯಾಂಕ್ ಖರ್ಗೆ ಪ್ರಶ್ನೆ
ಕಲಬುರಗಿ: ಸಿಐಡಿಯವರು ಎರಡನೆಯ ನೋಟಿಸು ಜಾರಿ ಮಾಡಿದ್ದಾರೆ. ಬೆಳಗ್ಗೆ ಕಲಬುರಗಿಗೆ ಬರಲು ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಇರುವಾಗ ಸಿಐಡಿ ಇನ್ಸಪೆಕ್ಟರ್ ಒಬ್ಬರು ನೋಟಿಸು ತಂದಿರುವುದಾಗಿ ನನ್ನ ಸಿಬ್ಬಂದಿ ತಿಳಿಸಿದ್ದಾರೆ ಎಂದು ಶಾಸಕ ಹಾಗೂ ಕೆಪಿಸಿಸಿ ವಕ್ತಾರರಾದ ಪ್ರಿಯಾಂಕ್ ಖರ್ಗೆ ಹೇಳಿದರು.
ಕಲಬುರಗಿಯಲ್ಲಿ ತಮ್ಮನ್ನು ಭೇಟಿಯಾದ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಪಿಎಸ್ ಐ ಅಕ್ರಮ ನೇಮಕಾತಿ ಪ್ರಕರಣದ ರೂವಾರಿ ದಿವ್ಯಾ ಹಾಗರಗಿ ಬಂಧನವಾಗಿಲ್ಲ ಯಾಕೆ ಎಂದು ಪ್ರಶ್ನಿಸಿದ ಅವರು ಅವರ ಬಳಿ ಯಾವ ದಿವ್ಯ ಶಕ್ತಿ ಇದೆ ಎಂದು ಬಂಧನವಾಗಿಲ್ಲ ಎಂದರು.
ಮೊದಲ ನೋಟಿಸಿಗೆ ಈಗಾಗಲೇ ಉತ್ತರ ನೀಡಿದ್ದೇನೆ. ನೋಟಿಸಿನಲ್ಲಿ ಯಾವುದೇ ನಿರ್ದಿಷ್ಠತೆ ಹಾಗೂ ಸ್ಪಷ್ಟತೆ ಇಲ್ಲ. ಕಲಂ 91 ಅಡಿಯಲ್ಲಿ ಹಾಜರಾಗಲು ಹೇಳಿದ್ದರು. ಈ ಸೆಕ್ಷನ್ಗಳ ಪ್ರಕಾರ ನಾನು ಕಡ್ಡಾಯವಾಗಿ ಹಾಜಿರಾಗಬೇಕಿಲ್ಲ. ಸಿಆರ್ ಪಿಸಿ ಪ್ರಕಾರ ತಮಗೆ ಯಾವ ನಿರ್ದಿಷ್ಠ ದಾಖಲೆ ನೀಡುವಂತೆ ಹೇಳಿಲ್ಲ. ಕಾನೂನಿನ ಪ್ರಕಾರ, ನಿರ್ದಿಷ್ಟ ದಾಖಲೆ ನೀಡುವಂತೆ ಹೇಳದಿರುವುದರಿಂದ ನಾನು ಉತ್ತರ ನೀಡಿದ್ದೇನೆ. ಕಲಂ 160 ರ ಪ್ರಕಾರ ಸಾಕ್ಷಿದಾರರು ಮಾತ್ರ ಹಾಜಿರಾಗಬೇಕು. ನಾನು ವಿಚಾರಣೆಗೆ ಹಾಜಿರಾಗಬೇಕೆಂದು ಹೇಳುವ ಬಿಜೆಪಿಯವರು ಇದನ್ನು ಅರ್ಥ ಮಾಡಿಕೊಳ್ಳಲಿ ಎಂದರು
ಈ ಹಗರಣದಲ್ಲಿ ಬಿಜೆಪಿಯ ನಾಯಕರು ಭಾಗಿಯಾಗಿದ್ದಾರೆ. ತನಿಖೆ ಕೇವಲ ಕಲಬುರಗಿಗೆ ಮಾತ್ರ ಸೀಮಿತವಾಗಿದೆ. ಇನ್ನಷ್ಟು ವ್ಯಾಪಕವಾಗಿ ನಡೆದರೆ ಮತ್ತಷ್ಟು ಅಧಿಕಾರಿಗಳು ಹಾಗೂ ಆಳುವ ಪಕ್ಷದ ರಾಜಕಾರಿಗಳು ಭಾಗಿಯಾಗಿರುವುದು ಬಯಲಿಗೆ ಬರಲಿದೆ ಎಂದರು.
ಈ ಹಗರಣದಲ್ಲಿ ಮೇಲ್ಮಟ್ಟದವರೆಗೆ ಹಣ ಮುಟ್ಟಿದೆ. ಎಲ್ಲರೂ ಭಾಗಿಯಾಗಿದ್ದಾರೆ. ಸಮಗ್ರ ತನಿಖೆ ನಡೆಸದೆ ನಮ್ಮನ್ನು ಹೆದರಿಸಲು ನಮಗೆ ನೋಟಿಸು ನೀಡಲಾಗಿದೆ ಎಂದು ಆರೋಪಿಸಿದರು.