ಕನ್ನಡ ಭಾಷೆಗೆ ಧಕ್ಕೆಯಾದರೆ ಯಾರೂ ಸುಮ್ಮನೆ ಕೂರುವುದಿಲ್ಲ: ಸಂಸದೆ ಸುಮಲತಾ ಅಂಬರೀಷ್

Update: 2022-04-28 17:01 GMT

ಮಂಡ್ಯ: ಎಲ್ಲಾ ಭಾಷೆಯನ್ನು ಗೌರವಿಸುತ್ತೇವೆ. ಆದರೆ, ಕನ್ನಡ ಭಾಷೆಗೆ, ಸ್ವಾಭಿಮಾನಕ್ಕೆ ಧಕ್ಕೆಯಾದರೆ ಯಾರೂ ಸುಮ್ಮನೇ ಕೂರುವುದಿಲ್ಲ ಎಂದು ಸಂಸದೆ ಸುಮಲತಾ ಅಂಬರೀಷ್ ಹೇಳಿದ್ದಾರೆ.

ಮದ್ದೂರಿನಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು, ದೇಶದಲ್ಲಿ ಯಾವುದೇ ಒಂದು ಭಾಷೆ ರಾಷ್ಟ್ರ ಭಾಷೆ ಎನ್ನುವ ಪ್ರಶ್ನೆಯೇ ಇಲ್ಲ. ಉತ್ತರದಲ್ಲಿ ಹಿಂದಿಗೆ ಪ್ರಾಮುಖ್ಯತೆ ಇದ್ದರೆ, ನಮಗೆ ಕನ್ನಡವೇ ಎಲ್ಲಾ ಎಂದರು.

ಅಜಯ್ ದೇವಗನ್, ಸುದೀಪ್ ಟ್ವೀಟ್ ಸಮರಕ್ಕೆ ಪ್ರತಿಕ್ರಿಯಿಸಿದ ಅವರು, ಪ್ರಸ್ತುತ ಗಲಾಟೆ, ಗೊಂದಲದಲ್ಲಿ ಇರುವ ಪರಿಸ್ಥಿತಿಯಲ್ಲಿ ಇನ್ನೊಂದು ಹೊಸ ವಿವಾದ ಸೃಷ್ಟಿ ಸಲ್ಲದು. ಅದನ್ನು ಅಷ್ಟು ದೊಡ್ಡದು ಮಾಡುವುದು ಬೇಡ ಎಂದರು.

ಟಿಕೆಟ್ ಕೇಳುವ ಪ್ರಶ್ನೆಯೇ ಇಲ್ಲ:
‘ಯಾವುದೇ ಪಕ್ಷದ ಮುಂದೆ ಹೋಗಿ ನನಗಾಗಲೀ, ನನ್ನ ಮಗನಿಗಾಗಲೀ ಟಿಕೆಟ್  ಕೇಳುವುದಿಲ್ಲ, ಕೇಳಿಯೂ ಇಲ್ಲ. ಇದನ್ನು ಬರೆದಿಟ್ಟುಕೊಳ್ಳಿ.’ ಎಂದು ಅವರು ಹೇಳಿದರು.

ನನ್ನ ಜಿಲ್ಲೆ, ನನ್ನ ಜಿಲ್ಲೆಯ ಜನತೆ ಹಾಗೂ ನನ್ನ ಗೌರವಕ್ಕೆ ಬೆಲೆ ಕೊಡುವ ಪಕ್ಷಕ್ಕೆ ಸೇರಬಹುದು ಎಂದು ಜಿಲ್ಲೆಯ ಜನತೆ ಹೇಳಿದರೆ ಸೇರುತ್ತೇನೆ. ನಾನಿದ್ದು ನಾನೇ ನಿರ್ಧಾರ ತೆಗೆದುಕೊಳ್ಳುವುದಿಲ್ಲ. ಮಗ ಅಭಿಷೇಕ್ ರಾಜಕೀಯಕ್ಕೆ ಬರುವುದು, ಬಿಡುವುದು ಅವನಿಗೆ ಬಿಟ್ಟದ್ದು ಎಂದು ಅವರು ಹೇಳಿದರು.

ಕೋವಿಡ್ ಹಿನ್ನೆಲೆಯಲ್ಲಿ ಎರಡು ವರ್ಷದಿಂದ ಸ್ಥಗಿತಗೊಂಡಿದ್ದ ಸಂಸದರ ನಿದಿಯನ್ನು ಈಗ ಬಿಡುಗಡೆ ಮಾಡಿದೆ. ಸಮುದಾಯ ಭವನ, ಹಲವು ಅಭಿವೃದ್ಧಿ ಕಾಮಗಾರಿಗೆ ಬೇಡಿಕೆ ಸಲ್ಲಿಸಿದ್ದವರಿಗೆ ನೀಡುವ ಸಂಬಂಧ ಮುಖಂಡರ ಜತೆ ಸಭೆ ನಡೆಸಿದ್ದೇನೆ. ಅದಕ್ಕೆ ಬೇರೆ ಅರ್ಥ ಕಲ್ಪಿಸುವುದು ಬೇಡ ಎಂದು ಅವರು ಸ್ಪಷ್ಟಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News