×
Ad

ಕೇಂದ್ರದ ಅನುಮತಿ ಪಡೆದು ಹೆಚ್ಚುವರಿ 2 ಲಕ್ಷ ಟನ್ ರಾಗಿ ಖರೀದಿ: ಸಿಎಂ ಬೊಮ್ಮಾಯಿ

Update: 2022-04-29 14:57 IST

ದಾವಣಗೆರೆ, ಎ.29: ಕನಿಷ್ಠ ಬೆಂಬಲ ಯೋಜನೆಯಡಿ ಹೆಚ್ಚುವರಿ 2 ಲಕ್ಷ ಮೆಟ್ರಿಕ್ ಟನ್ ರಾಗಿಯನ್ನು  ಕೇಂದ್ರ ಸರಕಾರದ ಅನುಮತಿ ಪಡೆದು ಖರೀದಿಸಲಾಗುವುದು. ಇದರಿಂದ ರೈತರಿಗೆ ಅನುಕೂಲವಾಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಅವರು ಇಂದು ದಾವಣಗೆರೆ ಜಿಲ್ಲೆಯ ಜಗಳೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡುತ್ತಿದ್ದರು.

2 ಲಕ್ಷ ಟನ್ ಹಾಗೂ 1 ,14,000 ಟನ್ ರಾಗಿ ಖರೀದಿ ಮಾಡಲು ತೀರ್ಮಾನಿಸಲಾಗಿದೆ. ಕೆಲವು ಜಿಲ್ಲೆಗಳಲ್ಲಿ ರಾಗಿ ಖರೀದಿ ಮಾಡಬೇಕೆಂಬ ಬೇಡಿಕೆ ಇದ್ದು, ಈ ಬಗ್ಗೆ ಕೇಂದ್ರ ಆಹಾರ ಸಚಿವರೊಂದಿಗೆ ಚರ್ಚಿಸಿ ಅನುಮತಿ ಪಡೆಯಲಾಗುವುದು ಎಂದರು.

ಕನ್ನಡವೇ ಸಾರ್ವಭೌಮ:

ಹಿಂದಿ ಭಾಷೆಯ ಬಗ್ಗೆ ಪಕ್ಷದ ನಿಲುವೇನು ಎಂಬುದಕ್ಕೆ ಪ್ರತಿಕ್ರಿಯಿಸಿ, ಸ್ಪಷ್ಟವಾಗಿ ತಿಳಿಸಲಾಗಿದೆ. ಭಾಷಾವಾರು ಪ್ರಾಂತ್ಯಗಳಾದ ಮೇಲೆ ಪ್ರಾದೇಶಿಕತೆಗೆ ಮಹತ್ವ. ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ, ಬೇರಾವುದೇ ಭಾಷೆ ಅಲ್ಲ ಎಂದರು.

ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ:

ಪ್ರಾಧ್ಯಾಪಕರ ನೇಮಕಾತಿ, ಪಿಎಸ್ಸೈ ನೇಮಕಾತಿ ಪರೀಕ್ಷೆ ಹಗರಣ ಬಗ್ಗೆ ಪ್ರತಿಕ್ರಿಯೆ ನೀಡಿ, ಪಿಎಸ್ಸೈ ಪರೀಕ್ಷೆ ಅಕ್ರಮದ ಬಗ್ಗೆ ಪ್ರಾಥಮಿಕ ತನಿಖೆ ನಡೆಸಿ, ಈಗ ಸಿಐಡಿಗೆ ವಹಿಸಲಾಗಿದೆ. ಹಗರಣದ ಮೂಲಕ್ಕೆ ತಲುಪಲಾಗುವುದು. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಹೇಳಿದರು.

ಪರೀಕ್ಷಾ ಹಗರಣಗಳು ಸರಕಾರದ ವರ್ಚಿಸ್ಸಿಗೆ ಧಕ್ಕೆಯಾಗುವುದಿಲ್ಲವೇ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಿಎಂ, ಇಲ್ಲಿ ಸರಕಾರದ ಪ್ರಶ್ನೆ ಬರುವುದಿಲ್ಲ. ಯೂಪಿಎಸ್‍ಸಿ ಪರೀಕ್ಷಾ ಮಾದರಿಯಲ್ಲಿ ಪರೀಕ್ಷೆ ನಡೆಸಲಾಗುತ್ತಿದೆ. ಈ ಪ್ರಕರಣವನ್ನು ಸರ್ಕಾರವೇ ಕಂಡುಹಿಡಿದು ತನಿಖೆ ನಡೆಸುತ್ತಿದೆ. ಪರೀಕ್ಷೆಗಳು ಪ್ರಾಮಾಣಿಕವಾಗಿ ನಡೆಯಬೇಕು. ಯಾವುದೇ ಅವ್ಯವಹಾರ ನಡೆದಿದ್ದರೂ ಅದನ್ನು ಸದೆಬಡಿಯಲಾಗುವುದು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News