ಪಿಎಸ್ಸೈ ನೇಮಕಾತಿ ಅಕ್ರಮ ಪ್ರಕರಣ: ಮರು ಪರೀಕ್ಷೆ ಬೇಡ; ಎಚ್.ಡಿ.ಕುಮಾರಸ್ವಾಮಿ

Update: 2022-04-29 13:51 GMT

ಹುಬ್ಬಳ್ಳಿ, ಎ.29: ಪಿಎಸ್ಸೈ ನೇಮಕಾತಿ ವಿಚಾರದಲ್ಲಿ ಅಕ್ರಮ ಸಂಬಂಧ ಮರು ಪರೀಕ್ಷೆಯ ಸರಕಾರದ ನಿರ್ಧಾರದಿಂದ ಬಡ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತದೆ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಕರಣ ಇನ್ನು ತನಿಖೆಯ ಹಂತದಲ್ಲಿದೆ. ಈಗಲೇ ಮರುಪರೀಕ್ಷೆ ಅಂದರೆ ಹೇಗೆ. ತನಿಖೆಯಲ್ಲಿ ಎಲ್ಲವೂ ಹೊರ ಬರಬೇಕು. ಯಾವ ಆಧಾರದ ಮೇಲೆ ಅಕ್ರಮ ಎಸಗಿದ್ದಾರೆ ಎನ್ನುವುದು ಗೊತ್ತಾಗಬೇಕು ಎಂದು ತಿಳಿಸಿದರು.

ಈ ವ್ಯವಸ್ಥೆ ಉಳ್ಳವರಿಗಷ್ಟೇ ಎನ್ನುವಂತೆ ಆಗಿದೆ. ದುಡ್ಡಿದ್ದವರಿಗೆ ಕೆಲಸ ಸಿಗುತ್ತದೆ. ಪ್ರತಿಭಾವಂತ ಬಡವರಿಗೆ ಅನ್ಯಾಯ ಆಗುತ್ತದೆ. ಕೆಲವರಂತೂ ಇದ್ದ ಆಸ್ತಿಯನ್ನು ತಂದು  ಭ್ರಷ್ಟರಿಗೆ ಕೊಡುತ್ತಾರೆ. ಅನೇಕರಿಗೆ ದುಡ್ಡು ಇಲ್ಲ, ಕೆಲಸವೂ ಇಲ್ಲ. ಈ ರೀತಿ ನೇಮಕ ಆದವರು ಎಷ್ಟು ಪ್ರಾಮಾಣಿಕರಾಗಿ ಜನರ ಕೆಲಸ ಮಾಡುತ್ತಾರೆ? ಎಂದು ಪ್ರಶ್ನಿಸಿದರು ಕುಮಾರಸ್ವಾಮಿ.

2011ರ ಕೆಪಿಎಸ್ಸಿ ಬ್ಯಾಚ್ ಅಭ್ಯರ್ಥಿಗಳು ಹೇಗೆ ವಂಚಿತರಾಗಿದ್ದರೊ, ಅದು ಇಂದಿಗೂ ಮುಕ್ತಾಯವಾಗಿಲ್ಲ. ಯಾರೋ ಕೊಟ್ಟಿರುವ ದೂರಿನ ಆಧಾರದ ಮೇಲೆ ಈ ರೀತಿ ಮಾಡಬಾರದು ಎಂದ ಅವರು, ಬಡ ಮಕ್ಕಳ ಭವಿಷ್ಯವನ್ನು ಸರಿಪಡಿಸಲು ಪ್ರಾಮಾಣಿಕತೆ ಇರಬೇಕು. ನಾನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಕರೆ ಮಾಡಿ ಮನವಿ ಮಾಡುವೆ. ಮರು ಪರೀಕ್ಷೆ ನಿರ್ಧಾರ ಸರಿಯಲ್ಲ ಎನ್ನುವುದನ್ನು ಹೇಳುತ್ತೇನೆ ಎಂದು ಅವರು ನುಡಿದರು.

ಕೆಪಿಎಸ್ಸಿ ಶುದ್ಧ ಆಯಿತಾ ಸಿದ್ದರಾಮಯ್ಯ?

ಸಿದ್ದರಾಮಯ್ಯ ಅವರು ಕೆಪಿಎಸ್ಸಿಯನ್ನು ಶುದ್ಧ ಮಾಡುವೆ ಎಂದು ಶ್ಯಾಂಭಟ್ಟರನ್ನು ಅದರ ಅಧ್ಯಕ್ಷರನ್ನಾಗಿ ಮಾಡಿದರು. ಅವರು ಅಧ್ಯಕ್ಷರಾಗಿದ್ದೇ ತಡ ಮುಕ್ತ ಮಾರುಕಟ್ಟೆಯಲ್ಲಿ ರೇಟು ಫಿಕ್ಸ್ ಆಗುವಂತೆ ಪ್ರತಿ ಉದ್ಯೋಗಕ್ಕೆ ಕೋಟಿ ಲೆಕ್ಕದಲ್ಲಿ ರೇಟು ನಿಗದಿ ಆಯಿತು. ಬಿಡಿಎದಲ್ಲಿ ಕೂತು ಅರ್ಕಾವತಿ ಬಡಾವಣೆ ರೀಡೂ ವ್ಯವಹಾರದಲ್ಲಿ ಕೋಟ್ಯಂತರ ರೂಪಾಯಿ ಕೊಳ್ಳೆ ಹೊಡೆದು ಕೊಟ್ಟಿದ್ದರಲ್ಲ, ಅದಕ್ಕೆ ಕೆಪಿಎಸ್ಸಿಯನ್ನು ಶ್ಯಾಂಭಟ್ಟರಿಗೆ ಸಿದ್ದರಾಮಯ್ಯ ಉಡುಗೊರೆಯಾಗಿ ನೀಡಿದರು. ಇದು ಬಹಿರಂಗ ಸತ್ಯ. ಯಾರು ಏನೂ ಮಾಡಲಾಗಲಿಲ್ಲ. ನೀವು ಹೇಳಿದಂತೆ ಕೆಪಿಎಸ್ಸಿ ಶುದ್ಧ ಆಯಿತಾ ಸಿದ್ದರಾಮಯ್ಯ ಎಂದು ಕುಮಾರಸ್ವಾಮಿ ಅವರು ಪ್ರಶ್ನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News