ಹಿಂದಿಯನ್ನು ರಾಷ್ಟ್ರಭಾಷೆ ಅಂದ ಮಾತ್ರಕ್ಕೆ ಅದು ರಾಷ್ಟ್ರ ಭಾಷೆ ಆಗುವುದಿಲ್ಲ: ಯೋಗರಾಜ್ ಭಟ್ ಸ್ಪಷ್ಟನೆ

Update: 2022-04-29 17:40 GMT
 ಯೋಗರಾಜ್ ಭಟ್

ಬೆಂಗಳೂರು: ಹಿಂದಿ ರಾಷ್ಟೀಯ ಭಾಷೆ ಎಂಬ ಬಾಲಿವುಡ್ ನಟ ಅಜಯ್ ದೇವಗನ್ ಹೇಳಿಕೆಗೆ ಗುರುವಾರ ಮಾಧ್ಯಮಕ್ಕೆ ತಾನು ನೀಡಿದ್ದ ಪ್ರತಿಕ್ರಿಯೆಗೆ ಚಲನಚಿತ್ರ ನಿರ್ದೇಶಕ ಯೋಗರಾಜ್ ಭಟ್,  ಇಂದು ಫೇಸ್ ಬುಕ್ ನಲ್ಲಿ ನಲ್ಲಿ ಸ್ಪಷ್ಟನೆ ನೀಡಿದ್ದಾರೆ.

'ನಾನು ಕನ್ನಡ ಪಂಡಿತನೂ ಹೌದು. ಹಿಂದಿ ಪಂಡಿತನೂ ಹೌದು’ಎಂದು ಯೋಗರಾಜ್ ಭಟ್ ಹೇಳಿಕೆ ನೀಡಿದ್ದರು. ಯೋಗರಾಜ್ ಭಟ್ ನೀಡಿದ್ದ ಈ ಹೇಳಿಕೆ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು.

ಇದೀಗ ಫೇಸ್ ಬುಕ್ ನಲ್ಲಿ ಸ್ಪಷ್ಟನೆ ನೀಡಿರುವ  ಯೋಗರಾಜ್ ಭಟ್, 'ರಾಷ್ಟ್ರೀಯ ಭಾಷೆ ವಿವಾದದ ವಿಚಾರವಾಗಿ ಮಾಧ್ಯಮ ಮಿತ್ರರು ಪ್ರಶ್ನಿಸಿದಾಗ ಅದರ ಬಗ್ಗೆ ಪ್ರತಿಕ್ರಿಯೆ ನೀಡುವಷ್ಟು ತಿಳಿದವನು ನಾನಲ್ಲ ಎಂದು ಹೇಳಿದ್ದೇನೇ ಹೊರತು ಹಿಂದಿಯೇ ರಾಷ್ಟ್ರ ಭಾಷೆ ಎಂದು ನಾನು ಹೇಳಿಲ್ಲ. ಹೇಳುವುದೂ ಇಲ್ಲ. ಸಂವಿಧಾನದ ಪ್ರಕಾರವಾಗಿ ರಾಷ್ಟ್ರಭಾಷೆ ಎನ್ನುವುದೇ ಇಲ್ಲವಾದ್ದರಿಂದ ಈ ಕುರಿತ ಚರ್ಚೆ ಎಲ್ಲಿಗೂ ಹೋಗಿ ಮುಟ್ಟುವುದಿಲ್ಲ. ಹಾಗಾಗಿ, ಯಾರೇ ಆಗಲಿ ಹಿಂದಿಯನ್ನು ರಾಷ್ಟ್ರಭಾಷೆ ಅಂದಮಾತ್ರಕ್ಕೆ ಅದು ರಾಷ್ಟ್ರ ಭಾಷೆ ಆಗುವುದಿಲ್ಲ. ಈ ಕಾರಣಕ್ಕಾಗಿ ನಾನು ಇದೆಲ್ಲವನ್ನೂ ಗಂಭೀರವಾಗಿ ಪರಿಗಣಿಸದೇ ಇಡೀ ವಿವಾದಕ್ಕೆ ಅಚ್ಚಗನ್ನಡದಲ್ಲಿ ಅಂತ್ಯಹಾಡಲೆತ್ನಿಸಿದ್ದೇನೇ ಹೊರತುಬೇರೇನು ಇಲ್ಲ. ನನ್ನ ಕನ್ನಡ, ನನ್ನ ಕನ್ನಡ ಭಾಷಾಭಿಮಾನ, ಕನ್ನಡ ಸೇವೆ, ಕನ್ನಡತನದ ಬಗ್ಗೆ ತಮಗೆಲ್ಲ ತಿಳಿದೇ ಇದೆ... ಹಾಗಾಗಿ, ನಾನು ನನ್ನ ಸನ್ಮಿತ್ರರಾದ ಸುದೀಪ್ ಸಾಹೇಬರ ಪರವಾಗಿ ಎಂದು ತಮಗೆಲ್ಲ ಪ್ರತ್ಯೇಕವಾಗಿ ಹೇಳಬೇಕೆ? ಕನ್ನಡವೇ ನನ್ನ ಪಾಲಿನ, ನನ್ನ ಬಾಳಿನ ಏಕೈಕ ರಾಷ್ಟ್ರಭಾಷೆ–ಸಿರಿಗನ್ನಡಂ ಗೆಲ್ಗೆ.... 'ಎಂದು ಪೋಸ್ಟ್ ಮಾಡಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News