3.58 ಲಕ್ಷ ಅನರ್ಹ ಪಿಂಚಣಿದಾರರ ಪತ್ತೆ, ಸೌಲಭ್ಯ ರದ್ದು: ಕಂದಾಯ ಸಚಿವ ಆರ್.ಅಶೋಕ್

Update: 2022-04-30 14:14 GMT

ಬೆಂಗಳೂರು, ಎ. 30: ‘ವೃದ್ಧಾಪ್ಯ ವೇತನ, ವಿಧವಾ ವೇತನ ಸಹಿತ ಸಾಮಾಜಿಕ ಭದ್ರತಾ ಯೋಜನೆಗಳಡಿ ಅಕ್ರಮವಾಗಿ ಪಿಂಚಣಿ ಪಡೆಯುತ್ತಿದ್ದ ಒಟ್ಟು 3.58 ಲಕ್ಷ ಅನರ್ಹ ಪಿಂಚಣಿದಾರರನ್ನು ಪತ್ತೆ ಮಾಡಲಾಗಿದೆ. ಅಕ್ರಮವಾಗಿ ಅವರು ಪಡೆಯುತ್ತಿದ್ದ ಸೌಲಭ್ಯವನ್ನು ರದ್ದು ಪಡಿಸಲಾಗಿದೆ' ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದ್ದಾರೆ.

ಶನಿವಾರ ನಗರದ ಖಾಸಗಿ ಹೊಟೇಲ್‍ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ರಾಜ್ಯ ಸರಕಾರ ಮಾಸಿಕ 9 ಪಿಂಚಣಿಗಳನ್ನು ನೀಡುತ್ತಿದೆ. ಆದರೆ ಅರ್ಹತೆ ಇಲ್ಲದೆಯೂ ಅಕ್ರಮವಾಗಿ ಪಿಂಚಣಿ ಪಡೆಯುತ್ತಿದ್ದವರನ್ನು ಗುರುತಿಸಲಾಗಿದೆ. ಉದ್ಯೋಗಿಗಳು, ಶ್ರೀಮಂತರು ಸಾಮಾಜಿಕ ಪಿಂಚಣಿ ಸೌಲಭ್ಯವನ್ನು ಪಡೆಯುತ್ತಿದ್ದರು. ಮೃತಪಟ್ಟವರ ಹೆಸರಿನಲ್ಲಿ ಹಲವು ವರ್ಷಗಳಿಂದ ಪಿಂಚಣಿ ಪಾವತಿ ಆಗುತ್ತಿರುವುದು ಪತ್ತೆಯಾಗಿದೆ' ಎಂದು ವಿವರಿಸಿದರು.

‘2020-21ರಲ್ಲಿ ಸಾಮಾಜಿಕ ಭದ್ರತಾ ಯೋಜನೆಗಳ ಅಡಿಯಲ್ಲಿ 7,800 ಕೋಟಿ ರೂ.ಗಳನ್ನು ವಿತರಿಸಲಾಗಿತ್ತು. ಪ್ರಸಕ್ತ ವರ್ಷ 9,483 ಕೋಟಿ ರೂ.ಅನುದಾನ ಒದಗಿಸಲಾಗಿದೆ. ಇದೀಗ ಅನರ್ಹ ಫಲಾನುಭವಿಗಳ ಪಿಂಚಣಿ ರದ್ದು ಮಾಡಿರುವುದರಿಂದ ರಾಜ್ಯ ಸರಕಾರದ ಬೊಕ್ಕಸಕ್ಕೆ 430 ಕೋಟಿ ಉಳಿತಾಯವಾಗಲಿದೆ' ಎಂದು ಅಶೋಕ್ ಮಾಹಿತಿ ನೀಡಿದರು.

72 ಗಂಟೆಗಳಲ್ಲಿ ಪಿಂಚಣಿ: ‘ಕಂದಾಯ ಇಲಾಖೆಯಲ್ಲಿನ ಮಧ್ಯವರ್ತಿಗಳ ಕಾಟ ತಪ್ಪಿಸಲು ಹಾಗೂ ಫಲಾನುಭವಿಗಳಿಗೆ ಅಲೆದಾಟ ಇಲ್ಲದೆ ಪಿಂಚಣಿ ಮಂಜೂರು ಮಾಡುವ ನಿಟ್ಟಿನಲ್ಲಿ ‘ಹಲೋ ಕಂದಾಯ ಸಚಿವರೇ' ಎಂಬ ಸಹಾಯವಾಣಿ ಆರಂಭಿಸಲಾಗುವುದು. ಅರ್ಜಿ ಸಲ್ಲಿಸಿದ 72 ಗಂಟೆಗಳ ಒಳಗೆ ಅರ್ಹ ಫಲಾನುಭವಿಗಳಿಗೆ ಮನೆ ಬಾಗಿಲಿಗೆ ಪಿಂಚಣಿ ತಲುಪಿಸಲಿದ್ದು, ಇದು ದೇಶದಲ್ಲೇ ಮಾದರಿ ಯೋಜನೆ' ಎಂದು ಅವರು ತಿಳಿಸಿದರು.

‘ಸ್ವಾವಲಂಬಿ' ಸ್ವಯಂ ನಕ್ಷೆ: ಭೂ ಪರಿವರ್ತನೆ ಅರ್ಜಿಗಳನ್ನು ತೀವ್ರವಾಗಿ ಇತ್ಯರ್ಥಪಡಿಸುವ ಸದುದ್ದೇಶದಿಂದ ದೇಶದಲ್ಲೇ ಮೊದಲ ಬಾರಿಗೆ ಇಲಾಖೆ ‘ನಿಮ್ಮ ಪೋಡಿ ನೀವೇ ಮಾಡಿ' ‘ಸ್ವಾವಲಂಬಿ' ಎಂಬ ವಿನೂತನ ಯೋಜನೆ ಜಾರಿ ಮಾಡಿದೆ. ಇದರಿಂದಾಗಿ ಸಾರ್ವಜನಿಕರು ತಮ್ಮ ಸ್ವಂತ ಭೂಮಿಯ ನಕ್ಷೆಯನ್ನು ತಾವೇ ತಯಾರಿಸಿಕೊಳ್ಳಬಹುದು. ಇದು ಸಂಪೂರ್ಣ ಕಾನೂನಿನ ಮಾನ್ಯತೆಯನ್ನು ಹೊಂದಿದ್ದು, ಭೂಮಾಪನ ಇಲಾಖೆಯಿಂದ ಆನ್‍ಲೈನ್ ಅನುಮೋದನೆಯನ್ನು ಬಳಸಿಕೊಳ್ಳಬಹುದಾಗಿದೆ' ಎಂದು ಅವರು ತಿಳಿಸಿದರು.

‘ಈ ಯೋಜನೆಯಡಿ 11 ಇ-ಸ್ಕೆಚ್ ಭೂ ಪರಿವರ್ತನೆಯ ಪೂರ್ವ ನಕ್ಷೆ, ಪೋಡಿ, ವಿಭಜನೆ, ಏಕ ಮಾಲಕತ್ವದ ಆರ್‍ಟಿಸಿ ಸೇರಿ ಹಲವು ರೀತಿಯ ಅನುಕೂಲತೆಗಳನ್ನು ಈ ಯೋಜನೆಯಿಂದ ಪಡೆಯಬಹುದು. 20 ವರ್ಷಗಳಿಂದ ಇಲಾಖೆಯಲ್ಲಿ ಈ ರೀತಿ ಸುಮಾರು 10ಲಕ್ಷ ಅರ್ಜಿಗಳು ಇತ್ಯರ್ಥವಾಗದೆ ಹಾಗೆಯೇ ಉಳಿದಿವೆ. ಪ್ರತಿವರ್ಷ 6 ಲಕ್ಷ ಅರ್ಜಿಗಳು ಇತ್ಯರ್ಥವಾಗದೆ ಉಳಿಯುತ್ತಿದ್ದವು. ಇದನ್ನು ತಪ್ಪಿಸಲು ಮೊದಲ ಬಾರಿಗೆ ಸ್ವಾವಲಂಬಿ ಯೋಜನೆ ಪ್ರಾರಂಭಿಸಿದ್ದೇವೆ.

ಭೂ ಪರಿವರ್ತನೆಗಾಗಿ ಸಂಬಂಧಪಟ್ಟವರು ಅರ್ಜಿ ಸಲ್ಲಿಸಿ 10 ದಿನದೊಳಗೆ ಇಲಾಖೆ ಪರಿಶೀಲನೆ ನಡೆಸಲಿದೆ. ಎಲ್ಲ ದಾಖಲೆಗಳು ಸರಿಯಾಗಿದ್ದರೆ 15 ದಿನದೊಳಗೆ ನೀವು ಭೂ ನಕ್ಷೆಯು ನಿಮ್ಮ ಕೈಸೇರಲಿದೆ. ಇದರಿಂದ ಸಾರ್ವಜನಿಕರಿಗೆ ಅನುಕೂಲವಾಗಲಿದೆ. ಇದು ನಾಗರಿಕ ಸ್ನೇಹಿಯಾಗಿದ್ದು, ಮಧ್ಯವರ್ತಿಗಳ ಹಾವಳಿ ಇರುವುದಿಲ್ಲ' ಎಂದು ಅಶೋಕ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News